ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ನಗರದ ನವುಲೆ ಗ್ರಾಮದಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ (SUDA) ‘ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಸೊಸೈಟಿ ಲಿ.’ ಸಂಸ್ಥೆಗೆ ಮಂಜೂರಾಗಿದ್ದ ಸಿಎ ನಿವೇಶನದ 30 ವರ್ಷಗಳ ಲೀಸ್ ಅವಧಿಯು ಪೂರ್ಣಗೊಂಡಿದ್ದು, ಮುಂದಿನ 30 ವರ್ಷಗಳ ಅವಧಿಗೆ ಗುತ್ತಿಗೆಯನ್ನು ನವೀಕರಿಸಿಕೊಡುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಅಧಿಕೃತ ಪತ್ರದ ಮೂಲಕ ಮನವಿ ಸಲ್ಲಿಸಲಾಯಿತು.
ಸದರಿ ಸಂಸ್ಥೆಯು ಪ್ರಾಧಿಕಾರದ ನಿರ್ದೇಶನದಂತೆ ನಿಗದಿತ ಅವಧಿಯೊಳಗೆ ಪರವಾನಿಗೆ ಪಡೆದು, ನಿಯಮಬದ್ಧವಾಗಿ ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸಿ ಸಾರ್ವಜನಿಕ ಉದ್ದೇಶಕ್ಕಾಗಿ ಬಳಸುತ್ತಿದೆ. ಪ್ರಾಧಿಕಾರದ ಸಾಮಾನ್ಯ ಸಭೆಯಂತೆ ಪರಿಷ್ಕೃತ ಗುತ್ತಿಗೆ ಪಾವತಿಸಲು ಸಂಸ್ಥೆ ಸಿದ್ಧವಿದ್ದರೂ, ಇತ್ತೀಚಿನ ಸರ್ಕಾರದ ಆದೇಶದಂತೆ ರದ್ದುಪಡಿಸಲು ಹೊರಟಿರುವುದು ನಿಯಮ ಬಾಹಿರವಾಗಿದೆ.
ಪ್ರಾಧಿಕಾರದ ಸಭೆಯಲ್ಲೂ ನಿವೇಶನ ಹಂಚಿಕೆ ನಿಯಮ ೮(೧) ಮತ್ತು ೧೦(೧೪)ರ ಅನ್ವಯ ಗುತ್ತಿಗೆ ಮುಂದುವರೆಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಈ ಸಹಕಾರ ಸಂಘಕ್ಕೆ ಮುಂದಿನ 30 ವರ್ಷಗಳ ಅವಧಿಗೆ ಗುತ್ತಿಗೆ ನವೀಕರಿಸಲು ತಕ್ಷಣ ಪೂರ್ವಾನುಮೋದನೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ಮುಂಬರುವ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಹಾಗೂ ಅನುಮೋದನೆ ನೀಡುವುದರ ಕುರಿತು ಭರವಸೆ ನೀಡಿದ್ದಾರೆ.
ಬೇಟಿಯ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿಎಸ್ ಅರುಣ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸೊಸೈಟಿಯ ನಿರ್ದೇಶಕರಾದ ಶ್ರೀ ದೀನ್ ದಯಾಳ್, ನಿರ್ದೇಶಕರುಗಳಾದ ಸೂರ್ಯನಾರಾಯಣ, ಶ್ರೀ ಮಾಧವ್ ಮೂರ್ತಿ, ಡಾ. ರವಿಕಿರಣ್, ಶ್ರೀ ಮಣಿ, ಶ್ರೀ ಶಶಿಕಾಂತ್ ಸೇರಿದಂತೆ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.