ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ಸ್ಪರ್ಧಾತ್ಮಕ ಜಗತ್ತಿನಲ್ಲೀಗ ವಿದ್ಯಾವಂತ ಯುವ ಸಮೂಹವು ಕೇವಲ ಪದವಿ ಹೊಂದಿರುವುದಕ್ಕಿಂತ ಕೌಶಲ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಶಿವಮೊಗ್ಗ ಬಸವ ಕೇಂದ್ರದ ಡಾ.ಶ್ರೀ ಬಸವಮರುಳಸಿದ್ದ ಸ್ವಾಮೀಜಿ‌ ಕರೆ ನೀಡಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಡಾ. ಶರತ್ ಮರಿಯಪ್ಪ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ‘ಮಲೆನಾಡು ಜಾಬಥಾನ್- ೨೦೨೬’‌ಬೃಹತ್ ಉದ್ಯೋಗ ಮೇಳ ವನ್ನು ಶ್ರೀಗಳು ಉದ್ಘಾಟಿಸಿ ಮಾತನಾಡಿದರು.

ಉದ್ಯೋಗ ಮೇಳದ ಮೂಲಕ ಸಾವಿರಾರು ಯುವಜನರಿಗೆ ಉದ್ಯೋಗದ ಅವಕಾಶ ಕಲ್ಪಿಸುವ ಡಾ.‌ಶರತ್ ಮರಿಯಪ್ಪ ಫೌಂಡೇಷನ್ ಪ್ರಯತ್ನ ಶ್ಲಾಘನೀಯವಾಗಿದೆ ಎಂದ ಶ್ರೀಗಳು, ಯುವಜನತೆಯ ಭವಿಷ್ಯ ರೂಪಿಸುವಲ್ಲಿ ಇಂತಹ ಉದ್ಯೋಗ ಮೇಳಗಳು ಮಹತ್ವದ ವೇದಿಕೆಯಾಗಿದ್ದು, ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.


ಪದವಿ ಪಡೆದ ಮಾತ್ರಕ್ಕೆ ಉದ್ಯೋಗ ದೊರೆಯುತ್ತದೆ ಎಂಬ ಪರಿಸ್ಥಿತಿ ‌ಈಗ ಇಲ್ಲ. ಶಿಕ್ಷಣವು ಜಗತ್ತಿನ ಪರಿಚಯ ಮಾಡಿಕೊಡುವುದರ ಜೊತೆಗೆ, ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳುವ ಜವಾಬ್ದಾರಿಯೂ ಯುವಜನರ ಮೇಲಿದೆ ಎಂದರು.
ಯುವಜನತೆಗೆ ಉದ್ಯೋಗ ಸೃಷ್ಟಿಸುವುದು ಇಂದಿನ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರಲ್ಲದೆ, ‌ದೇಶದ ಯುವಜನರ ಬಗೆಗೆ ಇತ್ತೀಚಿನ ಸರ್ಕಾರಗಳು ತಾಳಿರುವ ನಿರ್ಲಕ್ಷ್ಯದ ಧೋರಣೆಯನ್ನು‌ ಪ್ರಸ್ತಾಪಿಸಿ ಇದು ಸಲ್ಲದು ಎಂದು ಎಚ್ವರಿಸಿದರು.


ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ,
ಉದ್ಯೋಗ ಪಡೆಯುವುದನ್ನೇ ಬದುಕಿನ ಅಂತಿಮ ಗುರಿಯನ್ನಾಗಿಸಿಕೊಳ್ಳದೆ, ಭವಿಷ್ಯದಲ್ಲಿ ಕನಿಷ್ಠ ಹತ್ತು ಮಂದಿಗಾದರೂ ಉದ್ಯೋಗ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಯುವ ಜನರಿಗೆ ಕರೆ ನೀಡಿದರು‌.
ಉದ್ಯೋಗ ಮೇಳಕ್ಕೆ ಬಂದಿರುವ ಪ್ರತಿಯೊಬ್ಬರೂ ತಮ್ಮ ಅರ್ಹತೆ, ಯೋಗ್ಯತೆ ಹಾಗೂ ವಿದ್ಯಾರ್ಹತೆಗೆ ತಕ್ಕ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಸಿಗುವ ಮೊದಲ ಉದ್ಯೋಗವೇ ತಮ್ಮ ಬದುಕಿನ ಅಂತಿಮ ಗುರಿಯಾಗಬಾರದು ಎಂದು ಹೇಳಿದರು.


ಒಂದು ಕಂಪನಿಯಲ್ಲಿ ಉದ್ಯೋಗ ದೊರೆತರೆ ಅದನ್ನು ಬದುಕಿನ ಮೊದಲ ಹೆಜ್ಜೆಯೆಂದು ಪರಿಗಣಿಸಬೇಕು. ಕಾಲಕ್ರಮೇಣ ತಮ್ಮ ಪ್ರತಿಭೆ, ಸಾಮರ್ಥ್ಯ ಹಾಗೂ ಅನುಭವವನ್ನು ವೃದ್ಧಿಸಿಕೊಂಡು ಉದ್ಯೋಗದಾತರಾಗುವ ಗುರಿ ಹೊಂದಬೇಕು. ಕನಿಷ್ಠ ಹತ್ತು ಮಂದಿಗೆ ಉದ್ಯೋಗ ನೀಡುವಷ್ಟು ಬೆಳೆದಾಗ ತಮ್ಮ ಶಿಕ್ಷಣ ಮತ್ತು ಕಲಿಕೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗದ ಭದ್ರತೆಯ ಸ್ವರೂಪ ಬದಲಾಗಿದೆ. ಕಂಪನಿಗಳು ಉದ್ಯೋಗ ನೀಡಬಹುದು, ಆದರೆ ಉದ್ಯೋಗದ ಖಾತ್ರಿಯನ್ನು ನೀಡಲು ಸಾಧ್ಯವಿಲ್ಲ. ಪ್ರತಿಭೆ, ಸಾಮರ್ಥ್ಯ, ಕಾರ್ಯಕ್ಷಮತೆ ಮತ್ತು ಹೆಚ್ಚುವರಿ ಜ್ಞಾನವೇ ಉದ್ಯೋಗದಲ್ಲಿ ಮುಂದುವರಿ ಯಲು ಪ್ರಮುಖ ಮಾನದಂಡ ಗಳಾಗಿವೆ ಎಂದು ತಿಳಿಸಿದರು.

ಆದಿ ಚುಂಚನಗಿರಿ‌ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ‌ ಮೇಳಕ್ಕೆ‌ ಶುಭ‌ಕೋರಿ, ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಬದಲಾಗದಿದ್ದರೆ ಭವಿಷ್ಯ ನಮ್ಮ ಕೈತಪ್ಪುತ್ತದೆ. ಉತ್ತಮ ಜೀವನಕ್ಕೆ ಶಿಕ್ಷಣ ಎಷ್ಟು ಮುಖ್ಯವೋ, ಕೌಶಲ್ಯವೂ ಅಷ್ಟೇ ಅಗತ್ಯ. ಕೇವಲ ವಿದ್ಯಾರ್ಹತೆ ಇದ್ದರೆ ಸಾಲದು; ನಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಕೌಶಲ್ಯವಾಗಿ ಬೆಳೆಸಿಕೊಳ್ಳಬೇಕು ಎಂದರು.

ಡಾ.‌ಶರತ್ ಮರಿಯಪ್ಲ ಫೌಂಡೇಷನ್ ಸಂಸ್ಥಾಪಕ ಹಾಗೂ‌ ಮೇಳದ ರೂವಾರಿ ಡಾ. ಶರತ್ ಮರಿಯಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.ಉದ್ಯೋಗವೆಂದರೆ ಕೇವಲ ಸಂಬಳ ಪಡೆಯುವ ಮಾರ್ಗವಲ್ಲ. ಅದು ಆತ್ಮವಿಶ್ವಾಸ, ಸ್ವಾವಲಂಬನೆ, ಕುಟುಂಬದ ಭದ್ರತೆ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಅವಕಾಶವೂ ಹೌದು.
ಒಬ್ಬ ಯುವಕ ಉದ್ಯೋಗ ಪಡೆಯುವುದರಿಂದ ಒಂದು ಕುಟುಂಬದ ಆರ್ಥಿಕ ಸ್ಥಿತಿ ಬದಲಾಗಬಹುದು. ಒಬ್ಬ ಯುವತಿ ಸ್ವಾವಲಂಬಿಯಾಗುವುದರಿಂದ ಇಡೀ ಕುಟುಂಬಕ್ಕೆ ಹೊಸ ಆತ್ಮವಿಶ್ವಾಸ ಬರಬಹುದು. ಸಾವಿರಾರು ಯುವಕರು ಉದ್ಯೋಗ ಪಡೆದಾಗ ಒಂದು ಜಿಲ್ಲೆ, ಒಂದು ರಾಜ್ಯ ಮತ್ತು ಒಂದು ದೇಶದ ಆರ್ಥಿಕ ಶಕ್ತಿ ಹೆಚ್ಚುತ್ತದೆ. ಈ‌ನಿಟ್ಟಿನಲ್ಲಿ‌ಈ‌ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.


ಕೆಪಿಸಿಸಿ ಕಾರ್ಯದರ್ಶಿ ಹಾಗೂ ಆರ್ಯ ವಿಜ್ಞಾನ ಕಾಲೇಜು ಕಾರ್ಯ ದರ್ಶಿ ಎನ್. ರಮೇಶ್ ಮಾತನಾಡಿ, ಇದು ಎಐ ಕಾಲ, ಇಲ್ಲಿ‌ಉದ್ಯೋಗಗಳು ಕಡಿಮೆ ಆಗುತ್ತವೆ. ಹಾಗೆಯೇ ಉದ್ಯೋಗಗಳು ಹೆಚ್ಚಾಗುತ್ತವೆ. ಅದಕ್ಕೆ ತಕ್ಕಂತೆ ಕೌಶಲ್ಯ ಬೆಳಸಿಕೊಳ್ಳಬೇಕೆಂದು ಕರೆ‌ ನೀಡಿದರು‌.
ವೇದಿಕೆಯಲ್ಲಿ ಕೈಗಾರಿಕೋದ್ಯ ಮಿಗಳಾದ ಅಶ್ವತ್ ನಾರಾಯಣ ಶೆಟ್ಟಿ, ತಾರಾನಾಥ್, ಚಂದ್ರಶೇಖರ್, ನಿವೇದನ್ ನೆಂಪೆ, ಡಾ.‌ಶಶಾಂಕ್, ಕಾಂಗ್ರೆಸ್ ಮುಖಂಡರುಗಳಾದ‌ ಕೆ.ರಂಗನಾಥ್, ಎಂ. ಪ್ರವೀಣ್ ಕುಮಾರ್, ಹೆಚ್.ಪಿ.ಗಿರೀಶ್, ವೈ .ಎಚ್.‌ನಾಗರಾಜ್, ಲೋಕೇಶ್ ಮತ್ತಿತರರು‌ ಇದ್ದರು.‌


ಕುಮಾರ್ ಉಪ್ಪಾರ್ ಸ್ವಾಗತಿಸಿದರು.
ಮೇಳಕ್ಕೆ ಶಿವಮೊಗ್ಗ‌ನಗರವೂ ಸೇರಿ‌ ವಿವಿಧೆಡೆಗಳಿಂದ 4500 ಕ್ಕೂ ಹೆಚ್ಚು ಉದೋಗಕಾಂಕ್ಷಿಗಳು ಬಂದಿದ್ದರು. 173 ಕಂಪನಿಗಳು ಮೇಳದಲ್ಲಿ ಭಾಗಿಯಾಗಿ ಉದ್ಯೋಗದ ಅವಕಾಶಗಳ ನ್ನು‌‌ನೀಡಿದವು.

Leave a Reply

Your email address will not be published. Required fields are marked *