ಮಂಜುನಾಥ್ ಶೆಟ್ಟಿ…
ಮಾಸಿಕ ಧನಸಹಾಯದೊಂದಿಗೆ ಕೌಶಲ್ಯ ತರಬೇತಿ ನೀಡಿ, ಯುವಶಕ್ತಿಯನ್ನು ಸದೃಢಗೊಳಿಸುವ ‘ಯುವನಿಧಿ’ ಯೋಜನೆಯನ್ನು ಎಲ್ಲ ಅರ್ಹ ಯುವಜನತೆ ಸದುಪಯೋಗಪಡಿಸಿಕೊಳ್ಳಬೇಕೆಂದು
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ತಿಳಿಸಿದರು.
ಡಿವಿಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಯುವನಿಧಿ ಯೋಜನೆಯ ನೋಂದಣಿ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಪಂಚ ಗ್ಯಾರಂಟಿ ಯೋಜನೆಗಳು ಈ ನಾಡಿನ ಪ್ರಜೆಗಳಿಗೆ ಹಾಗೂ ಯುವಜನತೆಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿ ಮಿತ್ರರಿಗೆ ಮತ್ತು ಯುವಕರಿಗೆ ಸರ್ಕಾರದಿಂದ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಪದವೀಧರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ನೆರವು: ಡಿಪ್ಲೋಮಾ ಅಥವಾ ಪದವಿ ಮುಗಿಸಿ ಉದ್ಯೋಗಾಂಕ್ಷಿಗಳಾಗಿರುವ ಯುವಜನತೆಗೆ ಸರ್ಕಾರವು ಬೆನ್ನೆಲುಬಾಗಿ ನಿಲ್ಲಲು ಯುವನಿಧಿ ಯೋಜನೆ ಜಾರಿಗೆ ತಂದಿದ್ದು ಇದರ ಅಡಿಯಲ್ಲಿ ಪದವೀಧರರಿಗೆ ಪ್ರತಿ ತಿಂಗಳು 3,000 ರೂಪಾಯಿ ಹಾಗೂ ಡಿಪ್ಲೋಮಾ ಮುಗಿಸಿದವರಿಗೆ ಪ್ರತಿ ತಿಂಗಳು 1,500 ರೂಪಾಯಿಗಳನ್ನು ಆರ್ಥಿಕ ಸಹಾಯವಾಗಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಸರ್ಕಾರ ಯುವಜನತೆ ಸೇರಿದಂತೆ ಜನರಿಗೆ ನೀಡುತ್ತಿರುವ ಯೋಜನೆಗಳು ನಿಮ್ಮ ಹಕ್ಕಾಗಿದ್ದು ಅದರ ಸದುಪಯೋಗ ಆಗಬೇಕು ಎಂದರು.
ಯುವಕರು ಈ ರಾಷ್ಟ್ರದ ಪ್ರಜೆಗಳಾಗಿದ್ದು, ಅವರ ಭವಿಷ್ಯವು ಸುಂದರವಾಗಿರಬೇಕು ಮತ್ತು ಯುವಕರ ಮುಖಾಂತರ ರಾಷ್ಟ್ರವನ್ನು ಬಲಿಷ್ಠವಾಗಿ ಹಾಗೂ ಸಮೃದ್ಧಿಯಾಗಿ ಕಟ್ಟಬೇಕು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಯೋಜನೆಯ ಸದುಪಯೋಗ: ಈ ಸೌಲಭ್ಯವನ್ನು ಎಲ್ಲ ಅರ್ಹ ನಿರುದ್ಯೋಗಿ ಯುವಕರು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಟ್ಟಿರುವ ಶ್ರಮವನ್ನು ಗುರುತಿಸಿ, ಸರ್ಕಾರದ ಈ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ಪ್ರಜೆಗಳಾಗಿ, ಉತ್ತಮ ಉದ್ಯೋಗ ಪಡೆದು ದೇಶದ ಅಭಿವೃದ್ದಿಯಲ್ಲಿ ಭಾಗಿಯಾಗಬೇಕೆಂದರು.
ಡಿವಿಎಸ್ ಪಾಲಿಟೆಕ್ನಿಕ್ ಕಾಲೇಜಿನ
ಪ್ರಾಂಶುಪಾಲರಾದ ಪೂರ್ಣಿಮಾ ಡಿ ಮಾತನಾಡಿ, ಪ್ರಸ್ತುತದಲ್ಲಿ ‘ಉದ್ಯೋಗಂ ಮನುಜ ಲಕ್ಷಣಂ’ ಎಂಬಂತಾಗಿದ್ದು,ಉತ್ತಮ
ಶಿಕ್ಷಣ ಪಡೆದಾಗ ಒಳ್ಳೆಯ ಉದ್ಯೋಗ ಲಭಿಸಲಿದೆ ಎಂದ ಸವರು ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪ್ಲೇಸ್ ಮೆಂಟ್ ಡ್ರೈವ್ ಮಾಡಲಾಗುತ್ತಿದೆ ಹಾಗೂ , ಭತ್ಯೆಯೊಂದಿಗೆ ಇಂಟರ್ನ್ ಷಿಪ್ ವ್ಯವಸ್ಥೆ ಮಾಡಲಾಗಿದೆ. ಡಿಪ್ಲೊಮಾ ಮುಗಿದ ಮೇಲೆ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಅಥವಾ ಕೆಲಸಕ್ಕೆ ಹೋಗಬಹುದು.
ಡಿಪ್ಲೊಮಾ ಮುಗಿದ ಮೇಲೆ ಯುವನಿಧಿ ಯೋಜನೆಯಡಿ ನೋಂದಣಿ ಮಾಡಿಕೊಂಡರೆ ಉದ್ಯೋಗ ಸಿಗುವವರೆಗೆ ಅಥವಾ 2 ವರ್ಷದ ವರೆಗೆ ರೂ.1500 ಭತ್ಯೆ ದೊರಕಲಿದೆ ಎಂದವರು ತಿಳಿಸಿದರು.
ಜಿಲ್ಲಾ ಉದ್ಯೋಗಾಧಿಕಾರಿ ಅಶೋಕ್ ಮಾತನಾಡಿ, ತಂತ್ರಜ್ಞಾನ ಮತ್ತು ಉದ್ಯೋಗ ಮಾರುಕಟ್ಟೆಯ ಅಗತ್ಯತೆಗಳಿಗೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ವೃದ್ಧಿಸಿಕೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಕರೆ ನೀಡಿದರು.
ಡಿಪ್ಲೊಮಾ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಪದವಿಗೆ ಸೀಮಿತವಾಗದೆ, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪೂರಕ ಕೌಶಲ್ಯ ಕೋರ್ಸ್ಗಳನ್ನು ಮತ್ತು ತರಬೇತಿಗಳನ್ನು ಪಡೆದುಕೊಳ್ಳುವುದು ಅತ್ಯಗತ್ಯ.
ತಂತ್ರಜ್ಞಾನದ ಬೆಳವಣಿಗೆ…
ದಿನದಿಂದ ದಿನಕ್ಕೆ ತಂತ್ರಜ್ಞಾನವು ವೇಗವಾಗಿ ಮುನ್ನಡೆಯುತ್ತಿದ್ದು, ವರ್ಚುವಲ್ ಸಂಪರ್ಕ, ಸ್ಪೇಸ್ ಟೆಕ್ನಾಲಜಿ, ರಕ್ಷಣೆ ಹಾಗೂ ಆಹಾರ ವಲಯಗಳಲ್ಲಿ ದೇಶವು ಸ್ವಾವಲಂಬನೆಯತ್ತ ಸಾಗುತ್ತಿದೆ. ಈ ಬದಲಾವಣೆಗಳಿಗೆ ತಕ್ಕಂತೆ ವಿದ್ಯಾರ್ಥಿಗಳು ಕಮ್ಯುನಿಕೇಶನ್ (ಸಂವಹನ ಕೌಶಲ್ಯ), ಸಿಎನ್ಸಿ ಆಪರೇಟರ್, ಫಿಟ್ಟರ್, ಎಲೆಕ್ಟ್ರಿಷಿಯನ್, ಸೋಲಾರ್ ಟೆಕ್ನಿಷಿಯನ್ ಮುಂತಾದ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ.
ವರ್ಲ್ಡ್ ಸ್ಕಿಲ್ ಡೇ…
ಪ್ರತಿವರ್ಷ ಸುಮಾರು 63 ವಿಭಾಗಗಳಲ್ಲಿ ‘ವರ್ಲ್ಡ್ ಸ್ಕಿಲ್ ಡೇ’ ಸ್ಪರ್ಧೆಗಳು ನಡೆಯಲಿದ್ದು, ನಮ್ಮ ರಾಜ್ಯದಿಂದಲೂ ಹಲವಾರು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಿದ್ದಾರೆ.
ಕರ್ನಾಟಕ ಸರ್ಕಾರ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಯುವಜನರಿಗಾಗಿ ಪ್ರಮುಖ ಯೋಜನೆ ಹಾಗೂ ಆ್ಯಪ್ಗಳನ್ನು ಪರಿಚಯಿಸಲಾಗುತ್ತಿದೆ.
ಯುವ ಸೇತು ಆ್ಯಪ್…
ಉದ್ಯೋಗದಾತರು ಮತ್ತು ಉದ್ಯೋಗ ಆಕಾಂಕ್ಷಿಗಳು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ‘ಯುವ ಸೇತು’ ಆ್ಯಪ್ ಅನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಖಾಸಗಿ ಕಂಪನಿಗಳು ತಮ್ಮಲ್ಲಿರುವ ಖಾಲಿ ಹುದ್ದೆಗಳು ಹಾಗೂ ಅರ್ಹತೆಗಳ ವಿವರಗಳನ್ನು ಇದರಲ್ಲಿ ಹಂಚಿಕೊಳ್ಳಲಿದ್ದು, ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವ ಮೂಲಕ ನೇರವಾಗಿ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ.
ಯುವನಿಧಿ ಮತ್ತು ಯುವನಿಧಿ ಪ್ಲಸ್…
ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡುವ ಗ್ಯಾರಂಟಿ ಯೋಜನೆಯಾದ ‘ಯುವನಿಧಿ’ ಹಾಗೂ ಯುವಜನರಲ್ಲಿ ಕೌಶಲ್ಯವನ್ನು ರೂಪಿಸಲು ‘ಯುವನಿಧಿ ಪ್ಲಸ್’ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ವಿಸ್ತೃತ ಮಾಹಿತಿ ನೀಡಲಾಯಿತು.
ವಿದ್ಯಾರ್ಥಿಗಳು ಈ ಎಲ್ಲಾ ಯೋಜನೆಗಳ ಹಾಗೂ ತರಬೇತಿಗಳ ಸೌಲಭ್ಯವನ್ನು ಸರಿಯಾಗಿ ಬಳಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದರು.
ತರಬೇತುದಾರ ನಿರಂಜನ್ ಆರ್, ಯುವನಿಧಿ ಯೋಜನೆ, ಕೌಶಲ್ಯ ತರಬೇತಿಗಳು ಮತ್ತು ಉದ್ಯೋಗ ಅವಕಾಶದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.