ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಯ ವೇಳೆ ಸೋಮಣ್ಣ ಆನೆ ರಂಪಾಟ ನಡೆಸಿ ವಾಹನಗಳಿಗೆ ಮತ್ತು ಮನೆಗೆ ಹಾನಿ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ನಗರದ ಐತಿಹಾಸಿಕ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಮತ್ತು ಚಂಡಿಕಾ ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ 5 ದಿನಗಳ ವಿಶೇಷ ಪ್ರಾಯಶ್ಚಿತ್ತ ಹೋಮ ಆರಂಭಿಸಲಾಗಿದೆ.
ನಗರದ ಕ್ಷೇಮಾಭಿವೃದ್ಧಿ ಹಾಗೂ ಮುಂದೆ ಯಾವುದೇ ಅನಾಹುತ ಸಂಭವಿಸದಿರಲಿ ಎಂಬ ಉದ್ದೇಶದಿಂದ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಸೋಮಣ್ಣ ಆನೆ ರಂಪಾಟದಿಂದ ಹಾನಿಗೊಳಗಾದ ಕಾರು ಹಾಗೂ ಇತರ ವಾಹನಗಳಿಗೆ ಇನ್ನೂ ಪರಿಹಾರ ನೀಡದಿರುವ ಸಂದರ್ಭದಲ್ಲಿ ಪ್ರಾಯಶ್ಚಿತ್ತ ಹೋಮ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಗುರು-ಹಿರಿಯರು, ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನ…
ಶಿವಮೊಗ್ಗದ ದಸರಾ ಮೆರವಣಿಗೆಯ ವೇಳೆ ಸೋಮಣ್ಣ ಆನೆ ಏಕಾಏಕಿ ರಂಪಾಟ ನಡೆಸಿದ ಘಟನೆ ನಗರದ ಜನರಲ್ಲಿ ಆತಂಕ ಮೂಡಿಸಿತ್ತು. ಆನೆ ರಂಪಾಟದಿಂದ ವಾಹನಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ ಘಟನೆಯ ಬಗ್ಗೆ ಚರ್ಚೆ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ಗುರು-ಹಿರಿಯರು ಹಾಗೂ ಶೃಂಗೇರಿ ಜಗದ್ಗುರುಗಳ ದಿವ್ಯ ಮಾರ್ಗದರ್ಶನದಂತೆ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪ್ರಾಯಶ್ಚಿತ್ತ ಹೋಮ ಆಯೋಜಿಸಲಾಗಿದೆ.
ಮುಂಜಾನೆಯಿಂದಲೇ ದೇವಾಲಯದ ಆವರಣದಲ್ಲಿ ಪ್ರಾಯಶ್ಚಿತ್ತಾದಿ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿವೆ. ಒಟ್ಟು ಐದು ದಿನಗಳ ಕಾಲ ವಿಶೇಷ ಪೂಜೆ, ಹೋಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕೋಟೆ ದೇವಸ್ಥಾನದಲ್ಲಿ ಇಂದು ಗಾಯಿತ್ರಿ ಜಪ ಹೋಮ ನಡೆದಿದೆ.
ದೇವಾಲಯದಲ್ಲಿ ನಡೆಯುತ್ತಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಪೂಜೆ ಹಾಗೂ ಹೋಮಗಳನ್ನು ನೆರವೇರಿಸಲಾಗುತ್ತಿದೆ.
- ಶ್ರೀ ವಿಶ್ವಕ್ಸೇನ ಪೂಜೆ
- ನವಗ್ರಹ ಪೂಜೆ ಹಾಗೂ ಹೋಮ
- ಮಹಾ ಪೂರ್ಣಾಹುತಿ
- ದೇವಾಲಯದ ಸಂಪ್ರೋಕ್ಷಣೆ ಪೂಜೆ
- ಕೊನೆಯ ದಿನ ಗಜವಾಹನೋತ್ಸವ
ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದ ಮೂಲಕ ನಗರದ ಜನತೆಗೆ ಒಳಿತಾಗಲಿ, ಮುಂದೆ ಯಾವುದೇ ರೀತಿಯ ಅನಾಹುತಗಳು ಸಂಭವಿಸದಿರಲಿ ಎಂದು ಪ್ರಾರ್ಥಿಸಲಾಗುತ್ತಿದೆ.
ಕೊನೆಯ ದಿನ ಹಿತ್ತಾಳೆಯ ಗಜವಾಹನೋತ್ಸವ…
ವಿಶೇಷ ಪ್ರಾಯಶ್ಚಿತ್ತ ಹೋಮದ ಕೊನೆಯ ದಿನ ಹಿತ್ತಾಳೆಯ ಗಜವಾಹನೋತ್ಸವ ನಡೆಸಲು ಅರ್ಚಕರು ನಿರ್ಧರಿಸಿದ್ದಾರೆ.