ಶಿವಮೊಗ್ಗ ನ್ಯೂಸ್…

ಕರ್ನಾಟಕ ಸರ್ಕಾರ ಜಾರಿಗೆ ತರಲು ಇಚ್ಛಿಸಿದ ಮತಾಂತರ ನಿಷೇಧ ಕಾಯ್ದೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶಿಸಿದ ಕ್ರೈಸ್ತ ಸಮುದಾಯದ ಚರ್ಚ್ ಗಳು ಹಾಗೂ ಸಂಘ ಸಂಸ್ಥೆಗಳ ಗಣತಿ ವಿರೋಧಿಸಿ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯುಮನ್ ರೈಟ್ಸ್ ಶಿವಮೊಗ್ಗ ಶಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಡಿಸಿ ಮೂಲಕ ಸಿಎಂ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಮತಾಂತರದ ಕುರಿತು ಬಿರುಸಿನ ಚರ್ಚೆ ನಡೆದಿದೆ. ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಚಿಂತನೆ ನಡೆಸಿದ್ದು, ಕ್ರೈಸ್ತ ಸಮುದಾಯ ಒಮ್ಮನಸಿನಿಂದ ವಿರೋಧಿಸುತ್ತದೆ. ನಮ್ಮ ಸಂವಿಧಾನ ಪ್ರಜೆಗಳಿಗೆ ಈಗಾಗಲೇ ಯಾವುದೇ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಅದನ್ನು ಪ್ರಕಟಿಸಲು ಹಕ್ಕುಗಳನ್ನು ನೀಡಿದೆ ಎಂದರು.ಹೀಗಿರವಾಗ ಒಂದೆರಡು ಘಟನೆ ಆಧಾರವಾಗಿಟ್ಟುಕೊಂಡು ಕ್ರೈಸ್ತ ಸಮುದಾಯ ದೂರುವುದು ಸರಿಯಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತನ್ನ ಸಭೆಯೊಂದರಲ್ಲಿ ಕ್ರೈಸ್ತ ಸಮುದಾಯದ ಚರ್ಚ್ ಗಳ ಗಣತಿಗೆ ಆದೇಶಿಸಿದೆ. ಇದರ ಉದ್ದೇಶವೇನು? ಕ್ರೈಸ್ತ ಸಮುದಾಯ ಗುರಿಯಾಗಿಸಿ ಗಣತಿ ನಡೆಸಲು ಆದೇಶಿಸಿರುವುದು ಏಕೆ? ಇದರ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದರು.

ಈಗಾಗಲೇ ಕ್ರೈಸ್ತ ಸಮುದಾಯದ ಜನಸಂಖ್ಯೆಯ ಎಲ್ಲಾ ಅಂಕಿ ಅಂಶಗಳು ಮತ್ತು ವಿವರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಇದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕ್ರೈಸ್ತ ಸಮುದಾಯದ ಜನಸಂಖ್ಯೆ ಶೇಕಡ 3 ರಷ್ಟು ಮಾತ್ರವಿದೆ ಎಂದರು.ಆದರೂ ಕೂಡ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕ್ರೈಸ್ತ ಸಮುದಾಯ ಸಾವಿರಾರು ಶಾಲಾ, ಕಾಲೇಜುಗಳು, ಆಸ್ಪತ್ರೆಗಳನ್ನು ಸ್ಥಾಪಿಸಿ ತನ್ನ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದೆ. ಯಾರಾದರೂ ಒಬ್ಬರು ತನ್ನನ್ನು ಮತಾಂತರಗೊಳಿಸಿದ್ದಾರೆ ಎಂಬುದನ್ನು ಮೊದಲು ಸಾಬೀತುಪಡಿಸಲಿ. ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಅದು ಯಾವ ಒಳಿತನ್ನು ಮಾಡುವುದಿಲ್ಲ. ಬದಲಾಗಿ ಈ ಕಾಯ್ದೆ ಕೋಮುವಾದಿಗಳ ಕೈಗೆ ಸಿಕ್ಕಿ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯವೆಸಗಲು ಮತ್ತು ಸಾಮಾಜಿಕ ಶಾಂತಿ ಕದಡಲು ಪ್ರಯತ್ನಿಸಬಹುದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಈ ಎಲ್ಲಾ ಕಾರಣದಿಂದ ಸರ್ಕಾರ ಕೂಡಲೇ ಈ ಚಿಂತನೆ ಕೈಬಿಡಬೇಕೆಂದು ಕ್ರೈಸ್ತ ಸಮುದಾಯ ವಿನಂತಿಸಿದೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ, ಭದ್ರಾವತಿ ಧರ್ಮಾಧ್ಯಕ್ಷರಾದ ಬಿಷಪ್ ಜೋಸೆಫ್ ಅರುಮಾಚ್ಚಾಡತ್, ಸಂಚಾಲಕರಾದ ಫಾ. ಜೇರೊಮ್ ಮೊರಾಸ್, ಕ್ರೈಸ್ತ ಮುಖಂಡರಾದ ಚಿನ್ ಜೋಸೆಫ್, ಮರಿಯಮ್ಮ, ಶಾಂತಿ ಡಿಸೋಜ, ರಿಚರ್ಡ್ ಕ್ವಾಡ್ರಸ್, ಕಿರಣ್ ಫೆರ್ನಾಂಡಿಸ್, ಸಿಸ್ಟರ್ ಪ್ರೇಮಾ ಮೊದಲಾದವರಿದ್ದರು. 

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…