ಶಿವಮೊಗ್ಗ: ಸಾರ್ವಜನಿಕರಲ್ಲಿ ಕಣ್ಣಿನ ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ಅಭಿನಂದನೀಯ ಕೆಲಸ. ಎಲ್ಲರೂ ಕಣ್ಣಿನ ಆರೋಗ್ಯದ ಬಗ್ಗೆ ತಿಳವಳಿಕೆ ಹೊಂದಬೇಕು ಎಂದು ಮಾಜಿ ಮೇಯರ್ ಸುವರ್ಣಾ ಶಂಕರ್ ಹೇಳಿದರು.
ಶಿವಮೊಗ್ಗ ನಗರದ ಶರಾವತಿ ಬಡಾವಣೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ, ಜೆಸಿಐ ಸಹ್ಯಾದ್ರಿ, ಶ್ರೀ ಸಾಯಿ ಮಹಿಳಾ ಗೃಹ ನಿರ್ಮಾಣ ಸಹಕಾರ ಸಂಘ, ಎಸ್.ಕೆ.ಡೆವಲಪರ್ಸ್ ಸಹಯೋಗದೊಂದಿಗೆ ದೃಷ್ಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರಿಗೆ ಹಾಗೂ ವಯೋವೃದ್ಧರಿಗೆ ಕಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಹಾಗೂ ನೇತ್ರ ತಪಾಸಣೆಯಿಂದ ತುಂಬಾ ಅನುಕೂಲವಾಗುತ್ತಿದೆ. ಶಿಬಿರದಲ್ಲಿ ನೇತ್ರ ತಪಾಸಣೆ ಮಾಡಿಸಿಕೊಂಡು ಕಣ್ಣಿನ ಪೊರೆ ಇರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಕೂಡ ಮಾಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಇದರ ಪ್ರಯೋಜನವನ್ನು ಶರಾವತಿ ನಗರದ ಎಲ್ಲಾ ನಿವಾಸಿಗಳು ಪಡೆದುಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಶ್ರೀ ಸಾಯಿ ಮಹಿಳಾ ಗೃಹ ನಿರ್ಮಾಣ ಸಹಕಾರ ಸಂಘದ ಸುಮತಿ ಕುಮಾರಸ್ವಾಮಿ ಅವರು ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಮೂಲಕ ತುಂಬಾ ಜನರಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಆರೋಗ್ಯ ತಪಾಸಣೆ ಶಿಬಿರಗಳನ್ನು ರೋಟರಿ ಸಂಸ್ಥೆಯು ಮಾಡುವಲ್ಲಿ ಸದಾ ಸಿದ್ಧವಿದೆ ಎಂದು ಹೇಳಿದರು.
ರೋಟರಿ ಸಮುದಾಯ ಸೇವೆಗಳ ನಿರ್ದೇಶಕ ಜಿ.ವಿಜಯ್ ಕುಮಾರ್ ಮಾತನಾಡಿ, ಕಣ್ಣಿನ ತಪಾಸಣೆ ಜೊತೆಗೆ ಎಲ್ಲರೂ ಕಣ್ಣು ದಾನ ಮಾಡುವುದರಿಂದ ಹಲವಾರು ಜನರಿಗೆ ದೃಷ್ಟಿ ನೀಡುವ ಪುಣ್ಯದ ಕೆಲಸವಾಗುತ್ತದೆ. ಎಲ್ಲರೂ ಕಣ್ಣು ದಾನ ಮಾಡಿರಿ ಹಾಗೂ ರೋಟರಿ ಮತ್ತು ಜೆಸಿಐ ಸಂಸ್ಥೆ ವತಿಯಿಂದ ಸಮಾಜಕ್ಕೆ ಅನುಕೂಲವಾಗುವಂತಹ ಆರೋಗ್ಯದ ಶಿಬಿರ ರೋಗದ ಬಗ್ಗೆ ಜಾಗೃತಿ ಮಾಹಿತಿ ನಗರ ಸ್ವಚ್ಛತೆ ಕಾರ್ಯಕ್ರಮ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂದರು.
ಶ್ರೀ ಸಾಯಿ ಮಹಿಳಾ ಗೃಹನಿರ್ಮಾಣ ಸಂಘದ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಶರಾವತಿ ನಗರದಲ್ಲಿ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದು, ಇದೀಗ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. 230ಕ್ಕೂ ಹೆಚ್ಚು ಜನರು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡಿದ್ದು, 40 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ಯಾಕುಮಾರಿ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ, ರೋಟರಿ ಮಾಜಿ ಅಸಿಸ್ಟೆಂಟ್ ಗೌರ್ನರ್ ವಸಂತ್ ಹೋಬಳಿದಾರ್, ಎಸ್ ಕೆ ಡೆವಲಪ್ಪರ್ಸ್ ಎಂ ಡಿ ಕುಮಾರಸ್ವಾಮಿ, ರೋಟರಿ ಸಂಸ್ಥೆ ಸದಸ್ಯರಾದ ಮಲ್ಲಿಕಾರ್ಜುನ ಕಾನೂರು, ಚಂದ್ರಹಾಸ್ ಶೆಟ್ಟಿ, ಮಾಜಿ ಅಸಿಸ್ಟೆಂಟ್ ಗೌರ್ನರ್ ರವೀಂದ್ರನಾಥ ಐತಾಳ್, ಐದೃಷ್ಟಿ ಕಣ್ಣಿನ ಆಸ್ಪತ್ರೆಯ ಶಿಬಿರದ ಮುಖ್ಯಸ್ಥ ಮುರಳಿ, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾಯಿ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರಾದ ಶಶಿಕಲಾ, ರತ್ನಮ್ಮ, ವನಜಾಕ್ಷಿ ಭಾಗವಹಿಸಿದ್ದರು.