ಹಳೆ ಹಾಡುಗಳ ಸಮ್ಮಿಲನ ಮನಸ್ಸಿಗೆ ಎಂದಿಗೂ ಮುದ ನೀಡುತ್ತದೆ ಎಂದು ಸಹಕಾರಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ, ಶಿವಮೊಗ್ಗದ ಸ್ವರ ಮಾಂತ್ರಿಕರಾದ ಗಾಯಕಿ, ವಿದೂಷಿ ಸುರೇಖಾ ಹೆಗಡೆಯವರ ಸಂಗೀತ ಸಮರ್ಪಣ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸಂಗೀತ ಸ್ವರಧಾರಾ ಆವೃತ್ತಿ 3 ರ ಜೀವ ಜೀವದ ಸ್ವರ ಸಂಚಾರ – ಹಳೆಯ ಸುಮಧುರ ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಗೀತ ಎಂಬುದು ಎಂತಹವರಿಗೂ ಆಕರ್ಷಿಸಬಲ್ಲ ಸಾಧನ. ಎಲ್ಲರಿಗೂ ಸಾಧಿಸಲಾಗದ ಸರಸ್ವತಿಯ ಕೊಡುಗೆ ಸಂಗೀತವಾಗಿದ್ದು, ಶಿವಮೊಗ್ಗದಲ್ಲಿ ಜನಮನ್ನಣೆ ಗಳಿಸಿರುವ ವಿದೂಷಿ ಸುರೇಖಾ ಹೆಗಡೆಯವರ ಸಾಧನೆ ನಿಜಕ್ಕೂ ಅಪರೂಪ ಎಂದರು. ಇಂದಿನ ಆಧುನಿಕ ಯುಗದಲ್ಲಿ ಬದುಕಿನ ಜಂಜಾಟವನ್ನು ಮರೆತು, ಹಳೆಯ ಹಾಡುಗಳ ಸಂಗೀತ ಆಲಿಸುವುದೇ ರೋಮಾಂಚನ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಹಿನ್ನೆಲೆ ಗಾಯಕಿ ಸುರೇಖಾ ಹೆಗಡೆಯವರ ಸದಬಿರುಚಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದಕ್ಕೆ ಶ್ಲಾಘಿಸಿದರು. ಆರ್ಥಿಕ ಸಹಕಾರವಿಲ್ಲದೇ, ಇಂತಹ ಕಾರ್ಯಕ್ರಮಗಳು ನಡೆಸುವುದು ಕಷ್ಟಕರವಾಗಿದೆ. ಮೈಸೂರು ಬಿಟ್ಟರೆ ಶಿವಮೊಗ್ಗದಲ್ಲಿಯೇ ನಾಟಕ, ಸಾಂಸ್ಕೃತಿಕ, ಸಂಗೀತ, ಕಲೆ ಕಾರ್ಯಕ್ರಮಗಳು ಪೋಷಿಸಿಕೊಂಡು ಬರಲಾಗುತ್ತಿದ್ದು, ಸ್ವರ್ಗಕ್ಕೆ ದಾರಿ ತೋರಿಸುವ ಒಂದು ಮಾರ್ಗವಿದ್ದರೆ ಅದು ಸಂಗೀತ ಮಾತ್ರ ಎಂದು ಬಣ್ಣಿಸಿದರು. ಇಂತಹ ಸದಬಿರುಚಿ ಕಾರ್ಯಕ್ರಮಗಳಿಂದಲೇ, ನಿಜವಾದ ಸಂಸ್ಕೃತಿ ಅನಾವರಣವಾಗುತ್ತವೆ. ಸಂಗೀತ ಮಾತನಾಡಬೇಕು, ನಾವು ಮಾತನಾಡಬಾರದು ಎಂದರು.
ಇನ್ನು ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ, ಸಿನಿಮಾಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ ರಮೇಶ್ಚಂದ್ರ, ತಮ್ಮ ಶಿಷ್ಯೆ ಸುರೇಖಾ ಹೆಗಡೆಯವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಇತ್ತೀಚೆಗೆ ಸಿನಿಮಾಗಳಲ್ಲಿ ಒಂದು ಅಕ್ಷರವೂ ಕನ್ನಡ ಬರೆಯಲು, ಓದಲು ಬಾರದವರನ್ನು ಹೆಚ್ಚು ಪ್ರಾಶಸ್ತ್ಯ ನೀಡಿ ಹಾಡು ಹಾಡಿಸುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಇದು ನಿಲ್ಲಬೇಕು. ಕನ್ನಡ ಸಿನಿಮಾ ರಂಗದಲ್ಲಿ ಕನ್ನಡದವರಿಗೆ ಪ್ರಾಶಸ್ತ್ಯ ನೀಡಬೇಕೆಂದು ಹೇಳಿದರು. ಅದರಲ್ಲೂ ಇತ್ತೀಚೆಗೆ ರಿಯಾಲಿಟಿ ಶೋಗಳು, ಮಕ್ಕಳನ್ನು ಸಂಗೀತ ಕಲಿಯಲು ಪ್ರೇರೇಪಣೆ ನೀಡದೇ, ಚೆನ್ನಾಗಿ ಹಾಡಿದ್ದರೂ ಕೂಡ, ಪುನಃ ವೋಟಿಂಗ್ ಅವಕಾಶ ನೀಡಿ ಚೆನ್ನಾಗಿ ಹಾಡದಿರುವವರನ್ನು ಗೆಲ್ಲಿಸಲಾಗುತ್ತಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ, ವಿದೂಷಿ ಸುರೇಖಾ ಹೆಗಡೆ ಹಾಗೂ ತಂಡದವರು, ಮನಸ್ಸಿಗೆ ಮುದ ನೀಡುವಂತಹ ಹಾಡುಗಳನ್ನು ಹಾಡಿ ರಂಜಿಸಿದರು.