ಮಂಜುನಾಥ್ ಶೆಟ್ಟಿ…

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (KPSC) ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಸರಣಿ ಅಕ್ರಮಗಳು ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಬುಧವಾರ ವಿಧಾನ ಪರಿಷತ್ ಅಧಿವೇಶನದಲ್ಲಿ ಮಾತನಾಡಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು.

ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ ಒಂದೇ ಬ್ಯಾಚ್‌ನ ಹತ್ತಾರು ಅಭ್ಯರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಗಳಿಸಿರುವುದು ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. ಇದು ಕಾಕತಾಳೀಯವಲ್ಲ, ವ್ಯವಸ್ಥಿತ ಅಕ್ರಮ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 2023-24ನೇ ಸಾಲಿನ ಈ ನೇಮಕಾತಿಯು ಆರಂಭದಿಂದಲೇ ಭ್ರಷ್ಟಾಚಾರದ ವಾಸನೆಯಿಂದ ಕೂಡಿದೆ. ಕೇವಲ ಗೊಂದಲಗಳಿಂದಾಗಿ ಈ ಹಿಂದೆ ಪೂರ್ವಭಾವಿ ಪರೀಕ್ಷೆಯನ್ನು ಎರಡು ಬಾರಿ ಮುಂದೂಡಲಾಗಿತ್ತು. ನಾಳೆ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕಾದ ರಾಜ್ಯದ ಜನರ ಭವಿಷ್ಯವನ್ನು ನಿರ್ಧರಿಸಬಲ್ಲ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮಹತ್ತರ ಜವಾಬ್ದಾರಿಯನ್ನು ಮರೆತ ಕೆ.ಪಿ.ಎಸ್.ಸಿ ಒಂದೆಡೆಯಾದರೇ, ಕೆ.ಪಿಎಸ್.ಸಿ.ಯನ್ನು ಶುದ್ಧಿಕರಿಸುವಲ್ಲಿ ಸರ್ಕಾರದ ಬದ್ಧತೆ ಇಲ್ಲದಿರುವುದು ಎದ್ದು ಕಾಣುತ್ತಿದೆ.

ಮುಖ್ಯ ಪರೀಕ್ಷೆಯ ಫಲಿತಾಂಶವು ನೈಜವಾಗಿದ್ದಲ್ಲಿ ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಬೇಕು ಮತ್ತು ಅವರ ಪರೀಕ್ಷಾ ಮಾಧ್ಯಮ ಬಹಿರಂಗ ಮಾಡಬೇಕು ಎನ್ನುವ ಆಗ್ರಹ ವಿದ್ಯಾರ್ಥಿಗಳು ಮತ್ತು ಅಕಾಂಕ್ಷಿಗಳಿಂದ ವ್ಯಕ್ತವಾಗಿದೆ. ಹಲವಾರು ಭ್ರಷ್ಟಚಾರದ ಮಸಿ ಮೆತ್ತಿಕೊಂಡಿರುವ ಕೆ.ಪಿ.ಎಸ್.ಸಿಗೆ ಮತ್ತೊಂದು ಅಕ್ರಮದ ಆರೋಪ ಕೇಳಿ ಬಂದಿರುವುದು ಅತ್ಯಂತ ಖೇದಕರವಾಗಿದೆ. ಜನರಿಗೆ ಕೆ.ಪಿ.ಎಸ್.ಸಿ ಹಾಗೂ ಅದರ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳ ವಿಶ್ವಾಸರ್ಹತೆ ಕುರಿತು ಅನುಮಾನ ಮೂಡುವ ಮುನ್ನ ಸರ್ಕಾರ ವಿದ್ಯಾರ್ಥಿಗಳು ಮತ್ತು ಕೆ.ಪಿ.ಎಸ್.ಸಿ ಅಕಾಂಕ್ಷಿಗಳ ವಿವಿಧ ಬೇಡಿಕೆಗಳು ಮತ್ತು ಅವರ ಆಗ್ರಹಗಳನ್ನು ಆಲಿಸಬೇಕಾಗಿದೆ. ಅವರ ಸಂದೇಹ-ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೂಲಂಕುಷ ತನಿಖೆ ನಡೆಸಬೇಕು. ಮತ್ತು ಕೆ.ಪಿ.ಎಸ್.ಸಿ ವಿರುದ್ಧದ ಆರೋಪಗಳಿಗೆ ಸರ್ಕಾರ ಇದೇ ಸದನದಲ್ಲಿ ವಿಸ್ತ್ರತ ಉತ್ತರ ನೀಡಬೇಕೆಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *