ಮಂಜುನಾಥ್ ಶೆಟ್ಟಿ…

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ತಡೆ ಪ್ರತಿಬಂಧಕ ಕಾಯಿದೆ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವ ಮೂಲಕ ಅಸ್ಪೃಶ್ಯತೆ ನಿರ್ಮೂಲನೆಗೆ ಒತ್ತು ನೀಡುವ ಜೊತೆಗೆ ಕಾಯಿದೆಯಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ತಿಳಿಸಿದರು.


ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪರಿಶೀಲನೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯಡಿ 2025 ರಲ್ಲಿ 128 ಮತ್ತು 2026 ರ ಫೆಬ್ರವರಿ ಮಾಹೆಯವರೆಗೆ 45 ಸೇರಿ ಒಟ್ಟು 174 ಪ್ರಕರಣಗಳು ದಾಖಲಾಗಿವೆ. ದಾಖಲಾದ ಪ್ರಕರಣಗಳಲ್ಲಿ 71 ಕ್ಕೆ ಚಾರ್ಜ್ ಶೀಟ್ ಹಾಕಲಾಗಿದೆ. 1 ಪ್ರಕರಣ ಕೈಬಿಡಲಾಗಿದೆ. 15 ಕ್ಕೆ ಬಿ. ರಿಪೋರ್ಟ್ ಸಲ್ಲಿಕೆಯಾಗಿದ್ದು 3 ಕ್ಕೆ ಹೈಕೋರ್ಟ್ ತಡೆಯಾಜ್ಞೆಯಿದೆ. 32 ಪ್ರಕರಣಗಳನ್ನು ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಲಾಗಿದೆ ಎಂದರು.


ದೌರ್ಜನ್ಯ ಪ್ರಕರಣದಡಿ ನೊಂದ ಸಂತ್ರಸ್ಥರಿಗೆ ರೂ.3.45 ಕೋಟಿ ಪರಿಹಾರ ನೀಡಲಾಗಿದೆ. ಇದರಲ್ಲಿ ಎಫ್.ಐ.ಆರ್. ದಾಖಲಾದ ತಕ್ಷಣ ರೂ. 2.02 ಕೋಟಿ, ಚಾರ್ಜ್ ಶೀಟ್ ಹಂತದಲ್ಲಿ ರೂ.1.38 ಕೋಟಿ ಮತ್ತು ತೀರ್ಪು ನಂತರ ರೂ. 3.45 ಲಕ್ಷ ಪರಿಹಾರ ನೀಡಲಾಗಿದೆ. ಪರಿಹಾರ ಪಡೆದವರಲ್ಲಿ 536 ಪರಿಶಿಷ್ಟ ಜಾತಿ ಮತ್ತು 53 ಪರಿಶಿಷ್ಟ ಪಂಗಡದ ಸಂತ್ರಸ್ಥರಿದ್ದಾರೆ.


ಬಾಲ್ಯ ವಿವಾಹ ತಡೆಗೆ ಕ್ರಮ…

ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 64 ಬಾಲ್ಯ ವಿವಾಹಗಳು ನಡೆದಿದ್ದು ಪ್ರಕರಣ ವಿಚಾರಣಾ ಹಂತದಲ್ಲಿವೆ. ಇದೇ ಅವಧಿಯಲ್ಲಿ 63 ಬಾಲ್ಯ ವಿವಾಹಗಳನ್ನು ಸಹ ತಡೆಗಟ್ಟಲಾಗಿದೆ. ಬಾಲ್ಯ ವಿವಾಹ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿ ವಿವಾಹಕ್ಕೆ ಮುಂದಾಗುವ ಪೋಷಕರ ಮೇಲೆ ಮತ್ತು ಮುಹೂರ್ತ ನಡೆಸಿಕೊಡುವ ಅರ್ಚಕನ ಮೇಲೆಯು ಕಾನೂನು ಕ್ರಮ ಜರುಗಿಸಲಾಗುತ್ತದೆ.

ಈ ನಿಟ್ಟಿನಲ್ಲಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಎಂದಾಗ ಪೊಲೀಸ್ ಅಧೀಕ್ಷಕರಾದ ನಿಖಿಲ್.ಬಿ ಅವರು ತಪ್ಪಿತಸ್ಥ ಎಲ್ಲರೂ ಮೇಲೂ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು. ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹೇಮಂತ್ ಎನ್ ಮಾತನಾಡಿ ಪಂಚಾಯಿತಿ ಮಟ್ಟದಲ್ಲಿ 15 ಸದಸ್ಯರ ಬಾಲ್ಯ ವಿವಾಹ ತಡೆ ಕಾವಲು ಸಮಿತಿ ಇದ್ದು ನಿಯಮಿತವಾಗಿ ಸಭೆ ನಡೆಸಿ ತಡೆಗೆ ಮುಂದಾಗಲು ಸೂಚಿಸಲಾಗುತ್ತದೆ ಎಂದರು.


ದೇವಸ್ಥಾನ, ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಪ್ರವೇಶ ಮುಕ್ತ…

ಯಾವುದೇ ದೇವಸ್ಥಾನ, ಶಾಲೆಗಳು, ಸಾರ್ವಜನಿಕ ಸ್ಥಳಗಳು ಎಲ್ಲರ ಪ್ರವೇಶಕ್ಕೆ ಮುಕ್ತವಾದ ಸ್ಥಳಗಳಾಗಿವೆ. ಆದರೆ ಇಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುವಂತಿಲ್ಲ. ಸಮಿತಿ ಸದಸ್ಯರು ದೇವಸ್ಥಾನಗಳ ಬಳಿ ಮುಕ್ತ ಪ್ರವೇಶ ಎಂದು ನಾಮಫಲಕ ಹಾಕಬೇಕೆಂದು ಪ್ರಸ್ತಾಪಿಸಿದಾಗ ಜನರಲ್ಲಿ ಕಾಯಿದೆ ಬಗ್ಗೆ ಸಾಕಷ್ಟು ಅರಿವಿದೆ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಸೌಹಾರ್ಧತಾ ವಾತಾವರಣಾ ನಿರ್ಮಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಸಾರಿಗೆ ಶಿಬಿರ…

ಜಿಲ್ಲೆಯ ಕೊಳಚೆ ಪ್ರದೇಶದಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ವಾಹನ ಚಾಲನಾ ಪರವಾನಗಿ ನೀಡಲು ತಾಲ್ಲೂಕಿಗೆ ಒಂದು ಸಾರಿಗೆ ಶಿಬಿರ ನಡೆಸಿ ಅವರ ಮನೆ ಬಾಗಿಲಲ್ಲೆ ಡಿಎಲ್ ವಿತರಣೆ ಮಾಡಲು ನಿರ್ಣಯಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹೇಮಂತ್ ಎನ್, ಪೊಲೀಸ್ ಅಧೀಕ್ಷಕ ನಿಖಿಲ್ ಬಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಸಾಗರ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಸಮಿತಿ ಸದಸ್ಯರಾದ ಓಂ ಪ್ರಕಾಶ್, ಅಣ್ಣಪ್ಪ, ದಿನೇಶ್ ಪಟೇಲ್, ಮಂಜುನಾಥ್, ಶಿವಬಸಪ್ಪ ಹಾಗೂ ಇನ್ನಿತರೆ ಸದಸ್ಯರು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *