ವರದಿ ಮಂಜುನಾಥ್ ಶೆಟ್ಟಿ…
ಶಿವಮೊಗ್ಗ: ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರಜ್ಞಾ ಎಜುಕೇಶನ್ ಟ್ರಸ್ಟ್‌ನ ಅಂಗಸಂಸ್ಥೆಯಾದ ಪೇಸ್ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ದಕ್ಷಿಣದ ವಾರಣಾಸಿ ಎಂದೇ ಪ್ರಸಿದ್ಧಿ ಪಡೆದ ತುಂಗಾ-ಭದ್ರಾ ನದಿಗಳ ಸಂಗಮ ಕ್ಷೇತ್ರವಾದ ಶ್ರೀಕ್ಷೇತ್ರ ಕೂಡಲಿಯ ಶ್ರೀ ಶಾರದಾಂಭ ಸನ್ನಿಧಿಯಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಯೋಜಿಸಲಾಯಿತು.
ಜಗನ್ಮಾತೆ ಶಾರದೆಯ ಆರಾಧಕರಾದ ಪರಮಪೂಜ್ಯ ಶ್ರೀ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಿ ಮಕ್ಕಳ ಶೈಕ್ಷಣಿಕ ಜೀವನದ ಶುಭಾರಂಭಕ್ಕೆ ಸಾಕ್ಷಿಯಾದರು.
“ಸರಸ್ವತೀ ನಮಸ್ತುಭ್ಯಂ
ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ
ಸಿದ್ಧಿರ್ಭವತು ಮೇ ಸದಾ”
ಎಂಬ ಪ್ರಾರ್ಥನೆಯೊಂದಿಗೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಅಕ್ಷರಾಭ್ಯಾಸವು ಕೇವಲ ವಿದ್ಯಾರಂಭವಲ್ಲ; ಅದು ಮಗುವಿನ ಜೀವನದ ಮಹತ್ವದ ಸಂಸ್ಕಾರವಾಗಿದೆ. ಮಕ್ಕಳ ಶಿಕ್ಷಣ ಪಯಣದ ಮೊದಲ ಹೆಜ್ಜೆಯನ್ನು ಪವಿತ್ರ ಕ್ಷೇತ್ರದಲ್ಲಿ ಆರಂಭಿಸುವ ಮೂಲಕ ಪೋಷಕರು ಹಾಗೂ ಶಾಲಾ ಕುಟುಂಬವು ಹೆಮ್ಮೆಯ ಕ್ಷಣವನ್ನು ಅನುಭವಿಸಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು, ಮಕ್ಕಳಿಗೆ ಉತ್ತಮ ವಿದ್ಯೆ, ಜ್ಞಾನ, ಸಂಸ್ಕಾರ ಮತ್ತು ಶ್ರೇಯಸ್ಸು ಲಭಿಸಲಿ ಎಂದು ಹಾರೈಸಿ, ಪೋಷಕರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರಗಳನ್ನು ನೀಡುವುದು ಅತ್ಯಂತ ಅಗತ್ಯವಾಗಿದೆ. ಕುಟುಂಬ ಹಾಗೂ ಶಾಲೆಯ ವಾತಾವರಣದಲ್ಲಿ ದೊರೆಯುವ ಮೌಲ್ಯಯುತ ಸಂಸ್ಕಾರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಭಾಗವಹಿಸುವುದರಿಂದ ಏಕಾಗ್ರತೆ, ಧಾರಣಾಶಕ್ತಿ, ಮೇಧಾಶಕ್ತಿ, ಆತ್ಮವಿಶ್ವಾಸ ಹಾಗೂ ಉತ್ತಮ ಮೌಲ್ಯಗಳು ವೃದ್ಧಿಯಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಕೆ.ಎಸ್. ಈಶ್ವರಪ್ಪ ಅವರು ಶಾಲಾ ಆಡಳಿತ ಮಂಡಳಿಯ ಪರವಾಗಿ ಪೂಜ್ಯ ಮಹಾಸ್ವಾಮಿಗಳಿಗೆ ಫಲ ಸಮರ್ಪಿಸಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಪ್ರಜ್ಞಾ ಎಜುಕೇಶನ್ ಟ್ರಸ್ಟ್‌ನ ಪದಾಧಿಕಾರಿಗಳು, ಶಾಲೆಯ ಪ್ರಾಂಶುಪಾಲರಾದ ಶ್ರೀ ಪವನ್ ಕುಮಾರ್ ಎನ್.ಆರ್., ಶ್ರೀ ಶಬರೀಶ್ ಕಣ್ಣನ್, ಶಿಕ್ಷಕ ವರ್ಗ, ಬೋಧಕೇತರ ಸಿಬ್ಬಂದಿ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪೋಷಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.