ಮಂಜುನಾಥ ಶೆಟ್ಟಿ…

ಶಿವಮೊಗ್ಗ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಪ್ರಸಿದ್ಧ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನಡೆಯಿತು.

ನಾಗರ ಪಂಚಮಿ ಹಬ್ಬದ ಪ್ರಯುಕ್ತ ಪ್ರಧಾನ ಅರ್ಚಕರಾದ ಸಂದೇಶ್ ಉಪಾಧ್ಯಾಯ ನೇತೃತ್ವದಲ್ಲಿ ಅನಂತನ ಆರಾಧನೆ, ವಿಶೇಷ ಅಭಿಷೇಕ, ಸಾಮೂಹಿಕ ಆಶ್ಲೇಷ ಬಲಿ, ಹಾಲಿಟ್ಟು ಸೇವೆ ಹಾಗೂ ವೇದ ಪಾರಾಯಣ ಸೇರಿದಂತೆ ಹಲವು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಯಿತು.ದೂರದ ಊರುಗಳಿಂದಲೂ ಆಗಮಿಸಿದ ಸಾವಿರಾರು ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಾಗಸುಬ್ರಹ್ಮಣ್ಯ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನದಲ್ಲಿ ನಾಗದೇವರಿಗೆ ವಿಶೇಷವಾಗಿ 2,000 ಲೀಟರ್‌ಗೂ ಅಧಿಕ ಹಾಲು ಹಾಗೂ ಸುಮಾರು 700 ಎಳನೀರಿನಿಂದ ಅಭಿಷೇಕ ನೆರವೇರಿಸಲಾಯಿತು. ವೇದಘೋಷ, ಭಜನೆ ಮತ್ತು ಭಕ್ತಿಗೀತೆಗಳ ನಡುವೆ ನಡೆದ ಪೂಜಾ ಕಾರ್ಯಕ್ರಮಗಳು ಭಕ್ತರಲ್ಲಿ ಆಧ್ಯಾತ್ಮಿಕ ಭಾವವನ್ನು ಮೂಡಿಸಿದವು. ಮೂರು ದಿನಗಳ ಕಾಲ ಪ್ರತಿದಿನವೂ ಅನಂತನ ಆರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದವು.

ಪ್ರಧಾನ ಅರ್ಚಕ ಸಂದೇಶ ಉಪಾಧ್ಯ ಮಾತನಾಡಿ, ನಾಗದೇವರ ದರ್ಶನ ಹಾಗೂ ಪೂಜೆಯಿಂದ ಭಕ್ತರ ಮನಸ್ಸಿಗೆ ಶಾಂತಿ ದೊರೆಯುವುದರ ಜೊತೆಗೆ ನಾಗದೋಷ ನಿವಾರಣೆಗೆ ಧಾರ್ಮಿಕ ನಂಬಿಕೆಯಂತೆ ವಿಶೇಷ ಮಹತ್ವವಿದೆ. ನಾಗದೇವರನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ ಎಂದು ತಿಳಿಸಿದರು.

ನಾಗದೇವರ ಆರಾಧನೆಗೆ ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆ ಇದೆ. ನಾಗರ ಪಂಚಮಿ ಸಂದರ್ಭದಲ್ಲಿ ಪ್ರತಿವರ್ಷ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪೂಜಾ ಸಮಿತಿಯ ಸಹಕಾರದೊಂದಿಗೆ ಭಕ್ತರಿಗಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ಆಯೋಜಿಸಲಾಗಿದ್ದು, ಭಕ್ತರಿಗೆ ಅನ್ನಸಂತರ್ಪಣೆಯನ್ನೂ ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳಿದರು.

ಈ ಬಾರಿ ನಾಗರ ಪಂಚಮಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ 7,000ಕ್ಕೂ ಅಧಿಕ ಭಕ್ತರು ಭಾಗವಹಿಸಿ ನಾಗಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸಾಮೂಹಿಕ ಆಶ್ಲೇಷ ಬಲಿ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳಲ್ಲಿ ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

ಆವರಣದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಪೂಜಾ ಕಾರ್ಯಕ್ರಮಗಳೊಂದಿಗೆ ಅನ್ನಸಂತರ್ಪಣೆಯನ್ನೂ ಹಮ್ಮಿಕೊಳ್ಳಲಾಗಿದ್ದು, ಆಗಮಿಸಿದ ಭಕ್ತರು ಪ್ರಸಾದ ಸ್ವೀಕರಿಸಿದರು. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಪೂಜಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ರಾಮಲಿಂಗಪ್ಪ, ಗೌರವ ನಿರ್ದೇಶಕರು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್, ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವದ ಮಾಜಿ ಅಧ್ಯಕ್ಷೆ ಶ್ರೀಮತಿ ಬಿಂದು ವಿಜಯಕುಮಾರ್, ವಸಂತ ಭಟ್, ಪ್ರಸನ್ನ ಭಟ್, ಗಣೇಶ್ ಭಟ್, ಚೇತನ್ ಭಟ್, ಪ್ರಬಂಧ ಭಟ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಅರ್ಚಕರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *