ಮಂಜುನಾಥ ಶೆಟ್ಟಿ…

ಶಿವಮೊಗ್ಗ: ಅವಧಿ ಮೀರಿದ ಔಷಧಗಳಿಗೆ ಹೊಸ ಲೇಬಲ್‌ಗಳನ್ನು ಅಂಟಿಸಿ ಮರುಮಾರಾಟ ಮಾಡುವಂತಹ ಜಾಲ ಸಕ್ರಿಯವಾಗಿರುವುದು ಅತ್ಯಂತ ಖಂಡನೀಯ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದ್ದು, ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಹೇಳಿದರು.

ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ‘ವೈಭವ-2026’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಕಲಿ ಔಷಧಗಳ ವ್ಯಾಪಾರ ನಡೆಸುವ ಜಾಲ ನಮ್ಮ ಸಮಾಜದ ನಡುವೆ ಸಕ್ರಿಯವಾಗಿರುವುದು ಅತ್ಯಂತ ಆತಂಕಕಾರಿ ವಿಷಯ. ಅದೇ ರೀತಿ ಕೊಳೆತ ಹಾಗೂ ಕಳಪೆ ಆಹಾರ ಪದಾರ್ಥಗಳಿಂದ ಅಡುಗೆ ತಯಾರಿಸಿ ಜನರಿಗೆ ಬಡಿಸುವ ವ್ಯವಸ್ಥೆಯೂ ಕೆಲವೆಡೆ ಕಂಡುಬರುತ್ತಿದೆ. ಇಂತಹ ಚಟುವಟಿಕೆಗಳಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ಜನರ ಆರೋಗ್ಯದ ಬಗ್ಗೆ ಭಾವಿ ಫಾರ್ಮಸಿಸ್ಟ್ ಗಳು ಹೆಚ್ಚಿನ ಕಾಳಜಿ ವಹಿಸಬೇಕಿದೆ.

ಸಮಾಜದಲ್ಲಿ ಆರೋಗ್ಯ ಮತ್ತು ಶಿಕ್ಷಣ ಪರಿಣಾಮಕಾರಿಯಾಗಿ ಬೇರೂರಿದಾಗ ಮಾತ್ರ ದೇಶದ ಪ್ರಗತಿಗೆ ಭದ್ರ ಬುನಾದಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ಫಾರ್ಮಸಿಸ್ಟ್‌ಗಳು, ಕೇವಲ ಔಷಧ ವಿತರಿಸುವ ವೃತ್ತಿಪರರಾಗಿ ಉಳಿಯದೆ, ಅನ್ಯಾಯ, ನಕಲಿ ಔಷಧಗಳ ವ್ಯಾಪಾರ ಹಾಗೂ ಆರೋಗ್ಯಕ್ಕೆ ಹಾನಿಕಾರಕ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ಹೊಣೆಗಾರಿಕೆಯನ್ನು ವಹಿಸಬೇಕು. ಸಾಮಾಜಿಕ ನ್ಯಾಯ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಕಾರ್ಯಗಳು ಭಾವಿ ಫಾರ್ಮಸಿಸ್ಟ್‌ಗಳ ಮುಂದೆ ಇರುವ ಬಹುದೊಡ್ಡ ಜವಾಬ್ದಾರಿಯಾಗಿದೆ.

ಮನುಷ್ಯನ ದೈನಂದಿನ ಚಟುವಟಿಕೆಗಳು ಕ್ರಿಯಾಶೀಲವಾಗಿದ್ದಾಗ ಆರೋಗ್ಯ, ನೆಮ್ಮದಿ ಮತ್ತು ಸಂತೃಪ್ತಿಯ ಬದುಕು ಸಾಧ್ಯವಾಗುತ್ತದೆ. ಪಠ್ಯಕ್ರಮದ ಅಧ್ಯಯನದ ಜೊತೆಗೆ ವಿನಯ, ವಿವೇಕ, ಮಾನವೀಯತೆ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಕಲಿಯುವುದೇ ನಿಜವಾದ ವಿದ್ಯಾಭ್ಯಾಸ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳೆಸುವುದರ ಜೊತೆಗೆ ಅವರ ಬದುಕಿನ ವೈಭವಕ್ಕೆ ಮತ್ತಷ್ಟು ಮೆರಗು ನೀಡುತ್ತವೆ ಎಂದು ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್ ಡಾ. ಶಿವಕುಮಾರ ಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿಯೊಬ್ಬ ನಾಗರಿಕನಿಗೂ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ABHA) ಸಂಖ್ಯೆ ಒದಗಿಸುತ್ತಿದ್ದು, ಇದರ ಮೂಲಕ ನಾಗರಿಕರ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ನಿರ್ವಹಿಸಲಾಗುತ್ತಿದೆ. ಯಾವುದೇ ಕ್ಲಿನಿಕ್ ಅಥವಾ ನರ್ಸಿಂಗ್ ಹೋಮ್‌ಗೆ ಭೇಟಿ ನೀಡಿದಾಗ, ಈ ಸಂಖ್ಯೆಯ ಮೂಲಕ ರೋಗಿಯ ಆರೋಗ್ಯ ಮಾಹಿತಿಯನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಲಿದೆ.

ರೋಗಿಯ ಹಿಂದಿನ ಆರೋಗ್ಯ ಸ್ಥಿತಿ, ಔಷಧೋಪಚಾರ ಸೇರಿದಂತೆ ಪ್ರಮುಖ ಆರೋಗ್ಯ ದಾಖಲೆಗಳು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಲಭ್ಯವಿರುವುದರಿಂದ, ವರ್ಷಗಳ ನಂತರವೂ ಅಗತ್ಯ ಸಂದರ್ಭದಲ್ಲಿ ಯಾವುದೇ ವೈದ್ಯರಿಗೂ ಅವುಗಳನ್ನು ಪರಿಶೀಲಿಸಲು ಸಾಧ್ಯವಾಗಲಿದೆ ಎಂದರು.

ಅದೇ ರೀತಿ, ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರ ಮಾಹಿತಿಯನ್ನು ಹೆಲ್ತ್‌ಕೇರ್ ಪ್ರೊಫೆಷನಲ್ಸ್ ರಿಜಿಸ್ಟ್ರಿ (HPR) ಮೂಲಕ ದಾಖಲಿಸಿ ನಿರ್ವಹಿಸುವ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಈ ವ್ಯವಸ್ಥೆಯು ಔಷಧ ವಿತರಣೆ, ಪ್ರಿಸ್ಕ್ರಿಪ್ಷನ್, ವೈದ್ಯರ ಖಚಿತತೆ ಸೇರಿದಂತೆ ಔಷಧಗಳ ಪ್ರತಿಯೊಂದು ಹಂತದ ಚಲನವಲನದ ಮೇಲೆ ನಿಗಾ ವಹಿಸಲು ಸಹಕಾರಿಯಾಗಲಿದೆ. ಇದರಿಂದ ಆರೋಗ್ಯ ಸೇವೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚುವುದರ ಜೊತೆಗೆ, ಫಾರ್ಮಸಿಸ್ಟ್‌ಗಳಿಗೆ ಹೊಸ ಹಾಗೂ ಉನ್ನತ ಉದ್ಯೋಗಾವಕಾಶಗಳೂ ತೆರೆದುಕೊಳ್ಳಲಿವೆ.

ಆದ್ದರಿಂದ ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮದ ಜ್ಞಾನಕ್ಕೆ ಸೀಮಿತವಾಗದೆ, ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇದೇ ಉದ್ದೇಶದಿಂದ ಫಾರ್ಮಸಿ ಶಿಕ್ಷಣದಲ್ಲಿ ಪೈಥಾನ್, ಕೃತಕ ಬುದ್ಧಿಮತ್ತೆ, ಸಮಾಜಶಾಸ್ತ್ರ ಸೇರಿದಂತೆ ವಿವಿಧ ಸಮಕಾಲೀನ ವಿಷಯಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ಮತ್ತು ವೃತ್ತಿಪರ ಕೌಶಲ್ಯ ವೃದ್ಧಿಗೆ ಫಾರ್ಮಸಿ ವಿಷಯಾಧಾರಿತ ಸ್ಕಿಲ್ ಲ್ಯಾಬ್ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಎಸ್.ಎನ್.ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಅಪೇಕ್ಷಾ ಪ್ರಾರ್ಥಿಸಿ, ಉಪನ್ಯಾಸಕಿ ಸಂಜನಾ ನಿರೂಪಿಸಿ, ಲಾವಣ್ಯ ಪಾಟೀಲ್ ವಂದಿಸಿದರು.

Leave a Reply

Your email address will not be published. Required fields are marked *