ಮಂಜುನಾಥ ಶೆಟ್ಟಿ…

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಭಾಗವಹಿಸಿದ್ದ ಜಾಗದ ಶುದ್ಧೀಕರಣ
ದಲಿತ ಸಮುದಾಯ ಹಾಗೂ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ‌ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಜಾಗ “ಅಶುದ್ಧʼವಾಗಿದೆ ಎಂದು ಬಲಪಂಥೀಯ ಕೋಮುವಾದಿ ಶಕ್ತಿಗಳು, ಗಂಗಾಜಲದ ಮೂಲಕ ಅದನ್ನು ಶುದ್ಧಿಕರಣ ಮಾಡಿದ ಘಟನೆಯು ದಲಿತ ಸಮುದಾಯದ ಧೀಮಂತ ನಾಯಕ ಖರ್ಗೆ ಅವರಿಗೆ ಹಾಗೂ ಸಂವಿಧಾನಿಕ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದ್ದು, ಇದನ್ನು ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್‌ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳ ನಂತರವೂ ಜಾತೀಯತೆ ಹಾಗೂ ಸಾಮಾಜಿಕ ತಾರತಮ್ಯವನ್ನು ಪೋಷಣೆ ಮಾಡುತ್ತಾ ಬರುತ್ತಿರುವ ಮನುವಾದಿ ಸಿದ್ಧಾಂತದ ಸಂಘ ಪರಿವಾರದ ಕೋಮುವಾದಿ ಶಕ್ತಿಗಳು, ಈ ದೇಶದ ಸಂವಿಧಾನವನ್ನು ಎಂದಿಗೂ ಒಪ್ಪಿಕೊಂಡಿಲ್ಲ, ಇಲ್ಲಿನ ಕಾನೂನಿಗೂ ಅವರಿಗೆ ಭಯವಿಲ್ಲ ಎನ್ನುವುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಅಷ್ಟು ಮಾತ್ರವಲ್ಲ, ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ತಾರತಮ್ಯದ ಕೆಟ್ಟ ಮನಸ್ಥಿತಿಯನ್ನು ತೋರಿಸಿದೆ ಎಂದು ಯುವ ಕಾಂಗ್ರೆಸ್‌ ಘಟಕ ಅಭಿಪ್ರಾಯ ಪಡುತ್ತದೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು, ರಾಜ್ಯ ಸಭೆಯ ವಿರೋಧ ಪಕ್ಷ ನಾಯಕರು ಮಾತ್ರವಲ್ಲ, ಈ ದೇಶದ ಹಿರಿಯ ಮುತ್ಸದ್ದಿ ರಾಜಕಾರಣಿ, ದಲಿತ ಸಮುದಾಯದ ಧೀಮಂತ ನಾಯಕ. ಅಂತಹ ನಾಯಕ ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿ, ಬಂದ ಎರಡು ದಿನಗಳ ಬಳಿಕ ಆ ಜಾಗ ಅಶುದ್ಧವಾಗಿದೆ ಎಂದು ಗಂಗಾಜಲದ ಮೂಲಕ ಶುದ್ಧೀಕರಣ ಮಾಡುವ ಕೋಮುವಾದಿಗಳು, ಈ ದೇಶದ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಭಾರತ ದೇಶ ಸರ್ವರೀತಿಯಲ್ಲೂ ವಿಶ್ವ ಗುರುವಾಗಿದೆ ಎಂದು ಭಾಷಣ ಬಿಗಿಯುವ ಪ್ರಧಾನಿ ಮೋದಿ ಅವರು, ದೇಶದ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎನ್ನುವ ಗೃಹ ಸಚಿವ ಅಮಿತಾ ಷಾ ಅವರು, ದೇಶದ ಸಂವಿಧಾನ ಮತ್ತು ದಲಿತ ಸಮುದಾಯಕ್ಕೆ ಆದ ಈ ಅವಮಾನದ ಘಟನೆಗೆ ಉತ್ತರ ನೀಡಬೇಕು ಎಂದು ಗ್ರಾಮಾಂತರ ಯುವ ಕಾಂಗ್ರೆಸ್‌ ಘಟಕ ಒತ್ತಾಯಿಸುತ್ತದೆ.

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್‌ ಅವರು ದೇಶದಲ್ಲಿ ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಉದ್ದೇಶದಿಂದ ಸಂವಿಧಾನದಲ್ಲಿ ಮಹತ್ವದ ಹಕ್ಕುಗಳನ್ನು ಕಲ್ಪಿಸಿದ್ದಾರೆ. ಸಂವಿಧಾನದ 17ನೇ ವಿಧಿಯಡಿ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ಸಾರ್ವಜನಿಕವಾಗಿ ಜಾತೀಯತೆಯನ್ನು ಪ್ರದರ್ಶಿಸುವ ಮೂಲಕ ಸಂವಿಧಾನದ ಮೂಲ ಆಶಯಗಳನ್ನೇ ಅಪಮಾನಿಸುವಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ.

ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾಮಾಜಿಕ ಸೌಹಾರ್ದತೆಗೆ ಅಪಾಯಕಾರಿಯಾಗಿವೆ. ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಮೂಡಿಸುವಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ ಎಂಬುದು ಗ್ರಾಮಾಂತರ ಯುವ ಕಾಂಗ್ರೆಸ್‌ ಘಟಕದ ಒತ್ತಾಯವಾಗಿದೆ.ಸಾಮಾಜಿಕ ಸಮಾನತೆ, ಸಹಬಾಳ್ವೆ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಜಾತಿ, ಧರ್ಮದ ಆಧಾರದ ಮೇಲೆ ವ್ಯಕ್ತಿಯೊಬ್ಬರನ್ನು ಅವಮಾನಿಸುವ ಅಥವಾ ತಾರತಮ್ಯ ಮಾಡುವ ಯಾವುದೇ ಪ್ರಯತ್ನವನ್ನು ಪ್ರಜಾಪ್ರಭುತ್ವ ಸಮಾಜ ಒಪ್ಪಿಕೊಳ್ಳಬಾರದು ಎಂದು ಯುವ ಕಾಂಗ್ರೆಸ್‌ ಮನವಿ ಮಾಡುತ್ತದೆ.

ರಾಷ್ಟ್ರೀಯ‌ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ವೇದಿಕೆಯ ‘ಶುದ್ಧೀಕರಣ’ ಹೆಸರಿನಲ್ಲಿ ನಡೆದಿರುವ ಕೃತ್ಯವು ಇಡೀ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಘಟನೆಗೆ ಕಾರಣರಾದವರನ್ನು ತಕ್ಷಣ ಗುರುತಿಸಿ, ಅನ್ವಯಿಸುವ ಕಾನೂನುಗಳಡಿ ಪ್ರಕರಣ ದಾಖಲಿಸಬೇಕು.ಸಂವಿಧಾನ ವಿರೋಧಿ ಹಾಗೂ ಜಾತೀಯ ಮನೋಭಾವದ ಇಂತಹ ಕೃತ್ಯಗಳನ್ನು ಯಾವುದೇ ಸರ್ಕಾರ ಸಹಿಸಬಾರದು ಎಂದು ಪ್ರತಿಭಟನೆಯ ಮೂಲಕ ಗ್ರಾಮಾಂತರ ಯುವ ಕಾಂಗ್ರೆಸ್‌ ಆಗ್ರಹಿಸುತ್ತದೆ.


ಈ ಸಂದರ್ಭದಲ್ಲಿ ಮುಖಂಡರಾದ ಮಧುಸೂದನ್, ಗಿರೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್, ಬ್ಲಾಕ್ ಅಧ್ಯಕ್ಷರಾದ ಶಶಿಕುಮಾರ್, ಪ್ರವೀಣ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್,ಮಲಗಪ್ಪ ಶಿವು, ಆಕಾಶ್, ಬಾಬು,ತೌಫಿಕ್, ಸಚಿನ್, ಸಾಯಿ ಕುಮಾರ್, ನಾಗೇಂದ್ರ ಆಟೋಕಾ, ಕುಮಾರ್ ಹಾಗೂ ಸಾಕಷ್ಟು ಯುವಕರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *