ಶಿವಮೊಗ್ಗ: ವಿದ್ಯಾರ್ಥಿಗಳ ಶಿಕ್ಷಣ ಹಾಗೂ ವೃತ್ತಿಜೀವನದ ಯಶಸ್ಸಿಗೆ ವಿಷಯ ಆಯ್ಕೆಯೇ ಪ್ರಮುಖ ಅಡಿಪಾಯವಾಗಿದ್ದು, ಪೋಷಕರು ತಮ್ಮ ನಿರೀಕ್ಷೆಗಳಿಗಿಂತ ಮಕ್ಕಳ ಆಸಕ್ತಿ, ಸಾಮರ್ಥ್ಯ ಮತ್ತು ಭವಿಷ್ಯದ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಕೋರ್ಸ್‌ಗಳ ಆಯ್ಕೆಗೆ ಪ್ರೋತ್ಸಾಹಿಸಬೇಕು ಎಂದು ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಹೇಳಿದರು.
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಇಂಜಿನಿಯರಿಂಗ್ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಏರ್ಪಡಿಸಿದ್ದ ಸಿಇಟಿ/ಕಾಮೆಡ್-ಕೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಸಕ್ತಿ ಹೊಂದಿದ ಕ್ಷೇತ್ರದಲ್ಲಿ ಕಲಿಯುವ ವಿದ್ಯಾರ್ಥಿಗಳು, ಉತ್ತಮ ಸಾಧನೆ ಮಾಡುವುದರ ಜೊತೆಗೆ ಕೌಶಲ್ಯಾಭಿವೃದ್ದಿ ಮತ್ತು ಉದ್ಯೋಗಾವಕಾಶಗಳಲ್ಲಿ ಮುಂದೆ ಸಾಗಲು ಸಾಧ್ಯವಾಗಲಿದೆ. ಶಿಕ್ಷಣದ ಆಯ್ಕೆ ಒತ್ತಡದಿಂದಲ್ಲ, ತಿಳುವಳಿಕೆ ಮತ್ತು ಮಾರ್ಗದರ್ಶನದಿಂದ ಆಗಬೇಕು.
ಪಿಯು ಫಲಿತಾಂಶದ ನಂತರ ದೊರೆಯುವ ನಾಲ್ಕು ತಿಂಗಳ ಕಾಲಾವಕಾಶವನ್ನು ವಿದ್ಯಾರ್ಥಿಗಳು, ತಮ್ಮ ಸಾಮರ್ಥ್ಯ ಮತ್ತು ಆಸಕ್ತಿಗೆ ಹೊಂದುವ ಶಿಕ್ಷಣ ಮತ್ತು ವೃತ್ತಿ ಮಾರ್ಗವನ್ನು ಹುಡುಕಿಕೊಳ್ಳಲು ಬಳಸಿಕೊಳ್ಳಬೇಕು. ತಮ್ಮ ಬಲಗಳ ಆಧಾರದ ಮೇಲೆ ವಿವಿಧ ಕೋರ್ಸ್‌ಗಳು, ಕಾಲೇಜುಗಳು ಹಾಗೂ ಭವಿಷ್ಯದ ಅವಕಾಶಗಳ ಕುರಿತು ಸಮೀಕ್ಷೆ ನಡೆಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ, ಕಂಪನಿಗಳು ಕೇವಲ ಪದವೀಧರರನ್ನು ಮಾತ್ರವಲ್ಲದೆ, ಸಮಾಜ ಮತ್ತು ಉದ್ಯಮ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ನವೀನತೆ, ಸಂಶೋಧನೆ, ಉದ್ಯಮ ಪೋಷಣೆ, ಹೊಸ ಉದ್ಯಮಶೀಲತಾ ಸಂಸ್ಕೃತಿ ಹಾಗೂ ಪ್ರಾಯೋಗಿಕ ಕಲಿಕೆಗೆ ಆದ್ಯತೆ ನೀಡುವ ಕಾಲೇಜುಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿ ಎಂದು ಸಲಹೆ ನೀಡಿದರು.
ಕೆನರಾ ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕರಾದ ಗೋಪಿ ಮಾತನಾಡಿ, ಭಾರತ ಸರ್ಕಾರದ ನಿರ್ದೇಶನದಂತೆ ವಿದ್ಯಾರ್ಥಿಗಳು ಪಿಎಂ ವಿದ್ಯಾಲಕ್ಷ್ಮಿ ಪೋರ್ಟಲ್ ಮೂಲಕ ಸ್ವಯಂ ನೋಂದಣಿ ಮಾಡಿಕೊಂಡು ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಮೆರಿಟ್ ಕೋಟಾದಡಿ ₹7.5 ಲಕ್ಷದವರೆಗೆ ಹಾಗೂ ನಿರ್ವಹಣಾ ಕೋಟಾದಡಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ₹4 ಲಕ್ಷದವರೆಗೆ ಶಿಕ್ಷಣ ಸಾಲ ಪಡೆಯುವ ಅವಕಾಶವಿದೆ ಎಂದರು.
ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಅನೇಕ ವಿದ್ಯಾರ್ಥಿ ವೇತನದ ಸೌಲಭ್ಯ ನೀಡಲಾಗುತ್ತಿದ್ದು, ಅಂಗವಿಕಲರಿಗೆ, ಕೋವಿಡ್ ನಲ್ಲಿ ಮೃತರಾದ ಪೋಷಕರ ಮಕ್ಕಳಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿ ವೇತನದ ಕುರಿತಾಗಿ ಕಾಲೇಜಿನ ಲೆಕ್ಕಪತ್ರ ವಿಭಾಗದ ಸತೀಶ್ ಮಾಹಿತಿ ನೀಡಿದರು.
ಸಿಇಟಿ–ಕಾಮೆಡ್-ಕೆ ಆಯ್ಕೆ ಪ್ರಕ್ರಿಯೆ ಕುರಿತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್. ನರೇಂದ್ರ ಕುಮಾರ್ ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸುತ್ತಾ, ವೈದ್ಯಕೀಯ ಶಿಕ್ಷಣದ ಕೌನ್ಸಿಲಿಂಗ್ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಅನಗತ್ಯವಾಗಿ ತಡವಾಗದಂತೆ ಮಾಡಲು, ಕೆಇಎ ಮೊದಲ ಬಾರಿಗೆ ‘ಪ್ರಿ-ರೌಂಡ್’ ಎಂಬ ವಿಶೇಷ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ ಎಂದು ವಿವರಿಸಿದರು.
ಕಾಲೇಜಿನ ಪ್ರವೇಶಾತಿ ಸಮಿತಿಯ ಮುಖ್ಯಸ್ಥರಾದ ಡಾ.ಮೋಯಿನುದ್ದಿನ್ ಖಾನ್, ಡಾ.ಸುರೇಂದ್ರ, ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು. ಆಡಳಿತ ವಿಭಾಗದ ಸಿಬ್ಬಂದಿ ಹೇಮಲತಾ ನಿರೂಪಿಸಿದರು. ಸಂವಾದದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಗೊಂದಲಗಳಿಗೆ ಶಿಕ್ಷಣ ತಜ್ಞರಿಂದ ಸ್ಪಷ್ಟನೆ ಪಡೆದರು.
ಶಿಕ್ಷಣ ತಜ್ಞರ ಪ್ರಮುಖ ಸಲಹೆಗಳು:
- ಕೆಇಎ ನೀಡುವ ಸೀಕ್ರೆಟ್-ಕೀ ಸುರಕ್ಷಿತವಾಗಿ ಸಂಗ್ರಹಿಸಿಡಿ.
- ಪ್ರತಿದಿನ ಕೆಇಎ ಜಾಲತಾಣ ಪರಿಶೀಲಿಸಿ ಹೊಸ ಪ್ರಕಟಣೆಗಳು ಮತ್ತು ವೇಳಾಪಟ್ಟಿಗಳ ಬಗ್ಗೆ ಮಾಹಿತಿ ಪಡೆಯಿರಿ.
- ಆಯ್ಕೆ ಮಾಡುವ ಕಾಲೇಜುಗಳು, ಎನ್.ಬಿ.ಎ (NBA) ಹಾಗೂ ನ್ಯಾಕ್ (NAAC) ಮಾನ್ಯತೆ ಪಡೆದಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಕಾಲೇಜಿನ ಬೋಧನಾ ವಿಧಾನ, ಪ್ರಯೋಗಶಾಲೆ, ಕೌಶಲಾಭಿವೃದ್ಧಿ ಅವಕಾಶಗಳು ಹಾಗೂ ವಸತಿ ಸೌಲಭ್ಯಗಳ ಬಗ್ಗೆ ಮುಂಚಿತವಾಗಿ ಮಾಹಿತಿ ಸಂಗ್ರಹಿಸಿ.
- “ಕೋರ್ಸ್ ಮುಖ್ಯವೋ ಅಥವಾ ಕಾಲೇಜು ಮುಖ್ಯವೋ” ಎಂಬುದರ ಕುರಿತು ನಿಮ್ಮ ಆದ್ಯತೆಯನ್ನು ಮೊದಲೇ ನಿರ್ಧರಿಸಿಕೊಳ್ಳಿ.
- ಹಿಂದಿನ ವರ್ಷಗಳ ಕಟ್‌ಆಫ್ ಮಾಹಿತಿ ಆಧರಿಸಿ ವಾಸ್ತವಿಕ ಮತ್ತು ಆದ್ಯತೆಯ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ.
- ಪ್ರವೇಶ ಶುಲ್ಕವನ್ನು ನಿಮ್ಮ ಸ್ವಂತ ಬ್ಯಾಂಕ್ ಖಾತೆಯ ಮೂಲಕವೇ ಪಾವತಿಸಿ.
- ನಾವೀನ್ಯತೆ ಮತ್ತು ಪ್ರಾಯೋಗಿಕ ಆಧಾರಿತ ಕಲಿಕೆಗೆ ಆದ್ಯತೆ ನೀಡುವ ಕಾಲೇಜುಗಳನ್ನು ಆಯ್ಕೆ ಮಾಡಿ.