ಮಂಜುನಾಥ ಶೆಟ್ಟಿ…

ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ನೀರು ಹರಿಸುವ ಕುರಿತು ಇಂದು ಬೆಂಗಳೂರಿನ ವಿಕಾಸಸೌಧದ ಕೊಠಡಿ ಸಂಖ್ಯೆ 318 ರಲ್ಲಿ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ 89ನೇ ಸಭೆಯು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು.

ಸಭೆಯಲ್ಲಿ ಮಲೆನಾಡು ಹಾಗೂ ಜಲಾನಯನ ಪ್ರದೇಶಗಳಲ್ಲಿನ ಮಳೆಯ ನೈಜ ಪರಿಸ್ಥಿತಿ ಮತ್ತು ಭದ್ರಾ ಜಲಾಶಯದ ಪ್ರಸ್ತುತ ನೀರಿನ ಸಂಗ್ರಹದ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಯಿತು. ಪ್ರಸ್ತುತ ಜಲಾಶಯದಲ್ಲಿ ಲಭ್ಯವಿರುವ ನೀರಿನ ಮಟ್ಟ ಹಾಗೂ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರಿನ ಪ್ರಮಾಣದ ಕುರಿತು ತಜ್ಞರು ಮತ್ತು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು.

ರೈತ ಬಂಧುಗಳ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮ ಸರ್ಕಾರದ ಪ್ರಮುಖ ಧ್ಯೇಯವಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರಿಗೆ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಒದಗಿಸುವ ಸಂಬಂಧ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಶೀಘ್ರದಲ್ಲೇ ಚರ್ಚೆ ನಡೆಸಿ, ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಮತ್ತು ಕಾಲಮಿತಿಯೊಳಗೆ ಸೂಕ್ತ ಕ್ರಮಕೈಗೊಂಡು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದಾಗಿ ಸಚಿವ ಮಧು ಬಂಗಾರಪ್ಪ ಅವರು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್, ಶ್ರೀ ಕೆ.ಎಸ್. ಬಸವಂತಪ್ಪ ಬಿ.ಕೆ ಸಂಗಮೇಶ್ ಡಿ.ಜಿ ಶಾಂತನಗೌಡ ಶ್ರೀಮತಿ ಬಲ್ಕೀಸ್ ಬಾನು ಸೇರಿದಂತೆ ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು, ಮಾಜಿ ಶಾಸಕರು, ರೈತ ಮುಖಂಡರುಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *