ಮಂಜುನಾಥ ಶೆಟ್ಟಿ…

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ನಿರ್ದೇಶಕರಾದ ಡಾ. ವಿರೂಪಾಕ್ಷಪ್ಪ ವಿ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಸಂಸ್ಥೆಯ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಹ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಕರ್ತವ್ಯಲೋಪ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಆರೋಪಿತ ವೈದ್ಯಾಧಿಕಾರಿ ಡಾ. ಅಶ್ವಿನ್ ಹೆಬ್ಬಾರ್ ಅವರು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಜನರಲ್ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಈ ಹಿಂದೆ ಅಮಾನತುಗೊಳಿಸಲಾಗಿತ್ತು.

ನಂತರ ಡಾ. ಅಶ್ವಿನ್ ಹೆಬ್ಬಾರ್ ಅವರ ಸೇವೆಯನ್ನು ಪುನರ್ ಸ್ಥಾಪಿಸುವ ಕುರಿತು ಸಿಮ್ಸ್ ನಿರ್ದೇಶಕರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿ ಶಿವಮೊಗ್ಗ ಸಿಮ್ಸ್‌ನಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಲು ಇತರೆ ಮೂವರು ವೈದ್ಯರು ಲಭ್ಯವಿದ್ದರೂ, ಡಾ. ಅಶ್ವಿನ್ ಹೆಬ್ಬಾರ್ ಅವರೊಬ್ಬರೇ ಲಭ್ಯವಿದ್ದಾರೆ ಎಂಬ ರೀತಿಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಿಂದ ಅಗತ್ಯ ಸಲಹೆ ಪಡೆಯದೇ ಹಾಗೂ ಸಂಸ್ಥೆಯಲ್ಲಿ ಕಡತಗಳನ್ನು ಮಂಡಿಸದೇ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿತ್ತು. ಈ ಮೂಲಕ ಆರೋಪಿತ ವೈದ್ಯಾಧಿಕಾರಿಗೆ ಆರೋಪದಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಡಾ. ವಿರೂಪಾಕ್ಷಪ್ಪ ಅವರಿಗೆ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಲಾಗಿತ್ತು.

ನಡುವೆ ಡಾ. ಅಶ್ವಿನ್ ಹೆಬ್ಬಾರ್ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಅವರನ್ನು ಸೇವೆಯಲ್ಲಿ ಪುನರ್ ಸ್ಥಾಪಿಸಲಾಗಿತ್ತು. ಜೊತೆಗೆ, ಅವರನ್ನು ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜನರಲ್ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕರ ಹುದ್ದೆಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು.

ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. 2026ರ ಫೆಬ್ರವರಿ 9ರಂದು ಮಾನ್ಯ ಉಚ್ಚ ನ್ಯಾಯಾಲಯವು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಸಿಮ್ಸ್ ನಿರ್ದೇಶಕರು ರಿಟ್ ಮೇಲ್ಮನವಿ ಸಂಖ್ಯೆ 675/2026 ದಾಖಲಿಸಿದ್ದರು.

ರಿಟ್ ಮೇಲ್ಮನವಿ ಸಂಖ್ಯೆ 675/2026ರ ಜೊತೆಗೆ ಸಂಬಂಧಿತ ರಿಟ್ ಅರ್ಜಿಗಳನ್ನು ಸಂಯೋಜಿಸಿ ಹೈಕೋರ್ಟ್ ವಿಚಾರಣೆ ನಡೆಸಿತು. ವಾದ-ವಿವಾದಗಳನ್ನು ಆಲಿಸಿದ ಬಳಿಕ 2026ರ ಆಗಸ್ಟ್ 4ರಂದು ತೀರ್ಪು ನೀಡಿದೆ.

ನಿರ್ದೇಶಕರ ವಿರುದ್ಧ ಶಿಸ್ತು ಕ್ರಮಕ್ಕೆ ಹೈಕೋರ್ಟ್ ಸೂಚನೆ…

ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರು ಆರೋಪಿತ ಅಧಿಕಾರಿ ಡಾ. ಅಶ್ವಿನ್ ಹೆಬ್ಬಾರ್ ಅವರಿಗೆ ಆರೋಪದಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವುದಾಗಿ ತನ್ನ ಆದೇಶದ ಸಂಬಂಧಿತ ಅಂಶಗಳಲ್ಲಿ ಗಮನಿಸಿದೆ.

ಹಿನ್ನೆಲೆಯಲ್ಲಿ ಡಾ. ವಿರೂಪಾಕ್ಷಪ್ಪ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಾಲಯದ ಈ ನಿರ್ದೇಶನ ಹಾಗೂ ಸರ್ಕಾರದ ಪರಿಶೀಲನೆಯಲ್ಲಿ ಕಂಡುಬಂದ ಮೇಲ್ನೋಟದ ಕರ್ತವ್ಯಲೋಪವನ್ನು ಪರಿಗಣಿಸಿ ಇದೀಗ ಅಮಾನತು ಆದೇಶ ಹೊರಡಿಸಲಾಗಿದೆ.

ಇಲಾಖಾ ವಿಚಾರಣೆ ಬಾಕಿ ಸರ್ಕಾರದ ಆದೇಶದ ಪ್ರಕಾರ, ಸಿಮ್ಸ್ ಸಂಸ್ಥೆಯ ಬೈಲಾದ ನಿಯಮ 4ರಲ್ಲಿ ಕಲ್ಪಿಸಿರುವ ಅವಕಾಶವನ್ನು ಬಳಸಿಕೊಂಡು ಹಾಗೂ ನಿಯಮ 18ರಂತೆ ಸಕ್ಷಮ ಶಿಸ್ತು ಪ್ರಾಧಿಕಾರವು ಡಾ. ವಿರೂಪಾಕ್ಷಪ್ಪ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿದೆ.

ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ನಿಯಮ 10(1)(ಡಿ) ಅನ್ವಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಅಮಾನತು ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು-1958ರ ನಿಯಮ 98ರಂತೆ ಜೀವನಾಧಾರ ಭತ್ಯೆ ಪಡೆಯಲು ಡಾ. ವಿರೂಪಾಕ್ಷಪ್ಪ ಅರ್ಹರಾಗಿರುತ್ತಾರೆ. ಅಲ್ಲದೆ, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಅಮಾನತು ಅವಧಿಯಲ್ಲಿ ಕೇಂದ್ರ ಸ್ಥಾನವನ್ನು ತೊರೆಯಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ವಿರೂಪಾಕ್ಷಪ್ಪ ಅವರ ಅಮಾನತಿನಿಂದ ತೆರವಾಗಿರುವ ಸಿಮ್ಸ್ ನಿರ್ದೇಶಕರ ಹುದ್ದೆಗೆ ಡಾ. ರಮೇಶ್ ಬಾಬು ಕೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೆಚ್ಚುವರಿ ಪ್ರಭಾರದಲ್ಲಿ ನೇಮಿಸಲಾಗಿದೆ.

ಡಾ. ರಮೇಶ್ ಬಾಬು ಅವರು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಪೆಥಾಲಜಿ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ತಮ್ಮ ಪ್ರಸ್ತುತ ಕರ್ತವ್ಯದ ಜೊತೆಗೆ ಸಿಮ್ಸ್ ನಿರ್ದೇಶಕರ ಹುದ್ದೆಯ ಜವಾಬ್ದಾರಿಯನ್ನು ಸರ್ಕಾರದ ಮುಂದಿನ ಆದೇಶದವರೆಗೆ ನಿರ್ವಹಿಸಲಿದ್ದಾರೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ-3, ವೈದ್ಯಕೀಯ ಶಿಕ್ಷಣ ವಿಭಾಗದ ಬಿ.ಎನ್. ಪ್ರವೀಣ್ ಈ ಕುರಿತು ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *