ಮಂಜುನಾಥ್ ಶೆಟ್ಟಿ…
ಮನುಷ್ಯನ ಆಯುಷ್ಯ ಕ್ಷೀಣಿಸಿದಂತೆ ವಯೋಸಹಜ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾಗುವ ಪ್ರಕ್ರಿಯೆಯನ್ನು ಆರೋಗ್ಯಕರವಾಗಿ ಎದುರಿಸಲು ಮತ್ತು ವೃದ್ದಾಪ್ಯದ ಲಕ್ಷಣಗಳನ್ನು ಮುಂದೂಡಲು ಯೋಗಭ್ಯಾಸವೇ ಏಕೈಕ ಮಾರ್ಗವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್‌ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜೂನ್21ರಂದು ಬೆಳಿಗ್ಗೆ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗದಿನಾಚರಣೆ ಸಿದ್ಧತೆಗಳ ಕುರಿತು ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸುಮಾರು 1500ಯೋಗಾಸಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ದೈಹಿಕ ಸದೃಢತೆ,, ಮಾನಸಿಕ ಯೋಗಕ್ಷೇಮ, ಸಮಗ್ರ ಆರೋಗ್ಯದ ಮಹತ್ವ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಉತ್ತೇಜಿಸಲು, ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಅತ್ಯಂತ ಸಹಕಾರಿಯಾಗಿರುವ ಯೋಗದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸರ್ಕಾರವೇ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಸೂರ್ಯನ ಪಥದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವ ಹಾಗೂ ಮಾನವ-ಪ್ರಕೃತಿಯೊಂದಿಗಿನ ಬಾಂಧವ್ಯವನ್ನು ಬೆಸೆಯುವ ದಿನವಾದ ಜೂನ್21ರಂದು ಜಾಗತಿಕವಾಗಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ಮಹತ್ವದ ದಿನದಂದು ವಿಶ್ವಾದ್ಯಂತ ಯೋಗ ಉತ್ಸಾಹಿಗಳು, ವೈದ್ಯರು, ಸಾರ್ವಜನಿಕರು ಮತ್ತು ಸಮುದಾಯದವರು ಹಲವು ವರ್ಷಗಳಿಂದ ಒಟ್ಟುಗೂಡುತ್ತಿರುವುದು ವಿಶೇಷವಾಗಿದೆ ಎಂದರು.
ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಯೋಗ ಮತ್ತು ಅದರ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು, ಎಲ್ಲಾ ವಯೋಮಾನದವರಿಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಹಾಗೂ ಸಾಮೂಹಿಕ ಯೋಗ ಚಟುವಟಿಕೆಗಳ ಮೂಲಕ ಏಕತೆ ಮತ್ತು ಶಾಂತಿಯನ್ನು ಬೆಳೆಸಲು ಅನುಕೂಲವಾಗಲಿದೆ ಎಂದರು.
ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಸ್ಕೌಟ್‌ಅಂಡ್‌ಗೈಡ್ಸ್, ಕೆ.ಎಸ್.ಆರ್.ಪಿ., ಸ್ಥಳೀಯ ಯೋಗ ತರಬೇತಿ ಸಂಸ್ಥೆಗಳ ಕಲಿಕಾರ್ಥಿಗಳು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಶಿಷ್ಟಾಚಾರದಂತೆ ಯೋಗ ಕಾರ್ಯಕ್ರಮಗಳು, ಪ್ರದರ್ಶನಗಳು, ಲಘು ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಆನ್‌ಲೈನ್ ತರಗತಿಗಳಿಗೆ ಭಾಗವಹಿಸಿ : ಜೂನ್11ರಿಂದ ಅಂತರಾಷ್ಟ್ರೀಯ ಯೋಗ ದಿನದವರೆಗೆ ಒಟ್ಟು ಹತ್ತು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 6:30–7:30ರವರೆಗೆ ಆನ್‌ಲೈನ್‌ಯೋಗ ತರಗತಿಗಳು ನಡೆಯಲಿವೆ.
ಆಸಕ್ತರು ಆನ್‌ಲೈನ್ ಬೆಳಗಿನ ಅವಧಿಗಳೊಂದಿಗೆ ಸಾಮಾನ್ಯ ಯೋಗಾಭ್ಯಾಸಕ್ಕೆ ಸೇರ್ಪಡೆಗೊಳ್ಳುವಂತೆ ಮನವಿ ಮಾಡಿದ ಅವರು, ಸ್ಥಳೀಯವಾಗಿ ಆಯೋಜನೆಗೊಳ್ಳುವ ಯೋಗ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಜಾಗತಿಕ ಯೋಗ ಸಮುದಾಯದೊಂದಿಗೆ ತಮ್ಮ ಸುಂದರ ಅನುಭವಗಳು ಮತ್ತು ಚಟುವಟಿಕೆಗಳನ್ನು #IDY2026 ಮತ್ತು #ParmarthYoga ಹ್ಯಾಶ್‌ಟ್ಯಾಗ್‌ಗಳೊಂದಿಗೆ ಫೋಟೋಗಳು ಅಥವಾ ವೀಡಿಯೊಗಳ ಮೂಲಕ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಯೋಗ ಪ್ರದರ್ಶನಗಳು, ಸ್ಪರ್ಧೆಗಳು ಮತ್ತು ಕ್ಷೇಮ ಕಾರ್ಯಕ್ರಮಗಳನ್ನು ನಡೆಸಲಿವೆ.
ಎಲ್ಲಾ ಆಯುಷ್‌ಅಧಿಕಾರಿಗಳು ತಮ್ಮ ಚಿಕಿತ್ಸಾಲಯ, ಆಸ್ಪತ್ರೆ ವ್ಯಾಪ್ತಿಯ ಸಾರ್ವಜನಿಕರು, ಐಟಿ ವರ್ಗದ ಉದ್ಯೋಗಿಗಳಿಗೆ, ಯುವಜನತೆಗೆ ಹಾಗೂ ವೃತ್ತಿಪರರಿಗೆ ಯೋಗವನ್ನು ತಲುಪಿಸುವ ದೃಷ್ಟಿಯಿಂದ Y-Break ಎಂಬ Appನ್ನು ನಕಳಿಸಿಕೊಂಡು ಯೋಗವನ್ನು ಅನುಸರಿಸಲು ಸೂಚಿಸಲಾಗಿದೆ. ಅಂತೆಯೇ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ Y-Breakನ್ನು ಹಮ್ಮಿಕೊಳ್ಳುವಂತೆಯೂ ಸೂಚಿಸಲಾಗಿದೆ ಎಂದರು. ಸಾರ್ವಜನಿಕರಿಗೆ ಯೋಗದ ಮಹತ್ವವನ್ನು ತಿಳಿಸಲು ಜೂನ್19ರಂದು ಬೆಳಿಗ್ಗೆ 10ಗಂಟೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಯುಷ್‌ಮಹಾವಿದ್ಯಾಲಯಗಳ ಸಹಕಾರದೊಂದಿಗೆ ಯೋಗಜಾಥಾವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ನೌಕರರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಉದ್ಯಾನವನಗಳಲ್ಲಿ ಯೋಗ ಕೇಂದ್ರಗಳನ್ನು ನಡೆಸಲಿಚ್ಚಿಸುವವರು http://yoga.ayush.gov.in/yogapark/home ಜಾಲತಾಣದ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಉದ್ಯಾನವನಗಳಲ್ಲಿ ಯೋಗಾಭ್ಯಾಸವನ್ನು ನಡೆಸುವ ಸಂಘಟನೆಗಳಿಗೆ ಸಹಾಯಧನವನ್ನು ಒದಗಿಸುವ ಅವಕಾಶ ಇರಲಿದೆ. – ಡಾ|| ಲಿಂಗರಾಜ್, ಆಯುಷ್‌ವೈದ್ಯಾಧಿಕಾರಿಗಳು, ಶಿವಮೊಗ್ಗ. ಸಭೆಯಲ್ಲಿ ಜಿಲ್ಲಾ ಆಯುಷ್‌ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ|| ವೀಣಾ, ಜಿಲ್ಲಾ ಆಯುಷ್‌ವೈದ್ಯಾಧಿಕಾರಿ ಡಾ|| ಲಿಂಗರಾಜ್, ಡಾ|| ಸಂಜಯ್, ಡಾ|| ಹಿರೇಮಠ್, ಡಾ|| ಸದಾನಂದ ಜೋಷಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್‌ಸೇರಿದಂತೆ ಸ್ಥಳೀಯ ಯೋಗ ಸಂಸ್ಥೆಗಳ ನಿರ್ವಾಹಕರು ಮತ್ತಿತರರು ಉಪಸ್ಥಿತರಿದ್ದರು.