ಮಂಜುನಾಥ ಶೆಟ್ಟಿ…
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಗರಿಗೆದರಿದ್ದು, ಅದರಂತೆ, ಚುನಾವಣಾ ಆಯೋಗವು ರಾಜ್ಯದ ಒಟ್ಟು ಮತದಾರರ ಪಟ್ಟಿಯನ್ನು ಅತ್ಯಂತ ಕಟ್ಟುನಿಟ್ಟಾಗಿ ಮರುಪರಿಶೀಲನೆ ಮಾಡುತ್ತಿದೆ. ಇನ್ನು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ತಪ್ಪುಗಳು ಅಥವಾ ಮಾಹಿತಿ ಕೊರತೆ ಕಂಡುಬಂದಿರುವ ಬರೋಬ್ಬರಿ 43.80 ಲಕ್ಷ ಮತದಾರರನ್ನು ಆಯೋಗ ಗುರುತಿಸಿದೆ. ಅದರಂತೆ, ಈ ಎಲ್ಲರಿಗೂ ಶೀಘ್ರದಲ್ಲೇ ಅವರವರ ವಿಳಾಸಕ್ಕೆ ಅಧಿಕೃತ ನೋಟಿಸ್ ತಲುಪಲಿದ್ದು, ನಿಗದಿತ ಸಮಯದೊಳಗೆ ಸೂಕ್ತ ದಾಖಲೆ ನೀಡದಿದ್ದರೆ ಮತದಾನದ ಹಕ್ಕನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಹೌದು, ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಯುತ್ತಿದ್ದು, ಮ್ಯಾಪಿಂಗ್ ಆಗದ ಮತ್ತು ಮಾಹಿತಿ ದೋಷವಿರುವ ಒಟ್ಟು 43.80 ಲಕ್ಷ ಮತದಾರರಿಗೆ ಭಾರತೀಯ ಚುನಾವಣಾ ಆಯೋಗ ದಿಂದ (ಎಸ್‌ಐಆರ್) ಶೀಘ್ರದಲ್ಲೇ ನೋಟಿಸ್ ಜರಿಯಾಗಲಿದೆ. ಆದರೆ ಇದು ಕೇವಲ ಪರಿಶೀಲನೆಗಾಗಿ ನೀಡುತ್ತಿರುವ ನೋಟಿಸ್ ಆಗಿದ್ದು, ಯಾವುದೇ ಕಾರಣಕ್ಕೂ ನಿಮ್ಮ ಹೆಸರು ಪಟ್ಟಿಯಿಂದ ನೇರವಾಗಿ ಡಿಲೀಟ್ ಆಗುವುದಿಲ್ಲ. ಜೊತೆಗೆ, ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಬಿಡುಗಡೆಯಾಗಲಿದ್ದು, ಅಂದಿನಿಂದಲೇ ಅಂದರೆ ಆ. 24ರಿಂದ ಅಕ್ಟೋಬರ್ 22ರ ವರೆಗೆ ಈ ನೋಟಿಸ್ ಜರಿ ಮತ್ತು ತಕರಾರು ವಿಲೇವಾರಿ ಪ್ರಕ್ರಿಯೆ ನಡೆಯಲಿದೆ.
ಯಾರಿಗೆಲ್ಲ ನೋಟಿಸ್ ಬರಲಿದೆ?
ರಾಜ್ಯದ ಒಟ್ಟು ೫.೫೪ ಕೋಟಿ ಮತದಾರರ ಪೈಕಿ ಕರಡು ಪಟ್ಟಿಯ ಲ್ಲಿರುವ 4.46 ಕೋಟಿ ಮತದಾರರಲ್ಲಿ ಸುಮಾರು ಶೇ. 9.41 ರಷ್ಟು ಜನರಿಗೆ ಈ ನೋಟಿಸ್ ತಲುಪಲಿದೆ. ಪ್ರಮುಖ ವಾಗಿ ಎರಡು ಕಾರಣಗಳಿಗಾಗಿ ನೋಟಿಸ್ ನೀಡಲಾಗುತ್ತಿದೆ: ಮ್ಯಾಪಿಂಗ್ ಆಗದ ಮತದಾರರು (23.45 ಲಕ್ಷ ಜನ) 2002ರ ಚುನಾವಣಾ ಪಟ್ಟಿಯೊಂದಿಗೆ ತಮ್ಮ ಅಥವಾ ತಮ್ಮ ಪೋಷಕರ ವಿವರ ಹೊಂದಾಣಿಕೆಯಾಗದ ಮತದಾರರು. ಮಾಹಿತಿ ದೋಷ ವಿರುವ ಮತದಾರರು (20.35 ಲಕ್ಷ ಜನ): ಹೆಸರು, ವಯಸ್ಸು ಅಥವಾ ತಂದೆಯ ಹೆಸರಿನಲ್ಲಿ ಕಾಗುಣಿತ ದೋಷ ಹಾಗೂ ಇನ್ನಿತರ 9 ರೀತಿಯ ತಾಂತ್ರಿಕ ವ್ಯತ್ಯಾಸಗಳಿರುವ ಮತದಾರರು.
ನೋಟಿಸ್ ಬಂದ ತಕ್ಷಣ ಏನು ಮಾಡಬೇಕು?
ಬಿಎಲ್‌ಒ ಭೇಟಿ : ನಿಮ್ಮ ಬೂತ್ ಮಟ್ಟದ ಅಧಿಕಾರಿಗಳು ಖುದ್ದಾಗಿ ನಿಮ್ಮ ಮನೆಗೆ ಬಂದು ನೋಟಿಸ್ ನೀಡಲಿದ್ದಾರೆ. ಆನ್‌ಲೈನ್ ಅಪ್‌ಲೋಡ್ : ನೋಟಿಸ್ ಮೇಲೆ ಒಂದು ಕ್ಯೂಆರ್ ಕೋಡ್ ಇರಲಿದ್ದು, ಅದನ್ನು ಸ್ಕ್ಯಾನ್ ಮಾಡಿ ನಿಮ್ಮ ನಿಗದಿತ ದಾಖಲೆಗಳನ್ನು ಆನ್‌ಲೈನ್‌ನಲ್ಲೇ ಅಪ್‌ಲೋಡ್ ಮಾಡಬಹುದು. ನೋಟಿಸ್‌ನಲ್ಲಿ ನೀಡಲಾಗಿರುವ ದಿನಾಂಕ ಮತ್ತು ಸಮಯದ ಪ್ರಕಾರ ನಿಗದಿತ ಸರ್ಕಾರಿ ಕಚೇರಿ ಅಥವಾ ಮತಗಟ್ಟೆ ಕೇಂದ್ರದಲ್ಲಿ ನಿಮ್ಮ ದಾಖಲೆಗಳೊಂದಿಗೆ ಪರಿಶೀಲನೆಗೆ ಹಾಜರಾಗಬೇಕಾಗು ತ್ತದೆ. ಗುರುತು ಮತ್ತು ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಹೊರತುಪಡಿಸಿ ಇನ್ನೂ ಎರಡು ನಿಗದಿತ ದಾಖಲೆಗಳನ್ನು ಒದಗಿಸಬೇಕಾಗಬಹುದು. ಮೊದಲ ಬಾರಿ ವಿಚಾರಣೆಗೆ ಹಾಜರಾಗದಿದ್ದರೆ ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮತ್ತೊಂದು ದಿನಾಂಕವನ್ನು ನೀಡಲಾಗುತ್ತದೆ. ಆದರೆ ಎರಡನೇ ಬಾರಿಯೂ ಗೈರುಹಾಜ ರಾದರೆ, ಮೂರನೇ ಅವಕಾಶ ಇರುವುದಿಲ್ಲ ಮತ್ತು ಅಂತಹವರ ಹೆಸರನ್ನು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ.