ಮಂಜುನಾಥ್ ಶೆಟ್ಟಿ…

ಪ್ರಧಾನಮಂತ್ರಿ ಮೋದೀಜಿಯವರ ವಿಕಸಿತ ಭಾರತ ಕಲ್ಪನೆಯ ಕನಸು ಸಾಕಾರಗೊಳಿಸುವಲ್ಲಿ ಬ್ಯಾಂಕುಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಆದಾಗ್ಯೂ ಬ್ಯಾಂಕುಗಳು ಇನ್ನಷ್ಟು ಬಲಿಷ್ಟಗೊಂಡು ರೈತರ ಆದಾಯ ದ್ವಿಗುಣಗೊಳಿಸುವಲ್ಲಿ, ಯುವಕರು ಹೊಸ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಬ್ಯಾಂಕುಗಳು ಮುಂದಾಗಬೇಕು ಎಂದು ಸಾಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.


ಅವರು ಜಿಲ್ಲಾ ಪಂಚಾಯಿತಿಯ ಅಬ್ದುಲ್‌ ನಜೀರ್‌ಸಾಬ್‌ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಏರ್ಪಡಿಸಲಾಗಿದ್ದ ಜಿಲ್ಲಾ ಮಾಸಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ನಾಗರೀಕರಿಗೂ ಆರ್ಥಿಕ ಭದ್ರತೆ ದೊರೆಯುವಲ್ಲಿ ಭವಿಷ್ಯದ ಬ್ಯಾಂಕಿಂಗ್‌ ವ್ಯವಸ್ಥೆ ಬಲಿಷ್ಟಗೊಳ್ಳಬೇಕು ಎಂದ ಅವರು, ರೈತರ ಆರ್ಥಿಕ ಚಟುವಟಿಕೆಗಳಿಗೆ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಸಹಕಾರಿಯಾಗಬೇಕೆಂದವರು ಆಶಿಸಿದರು.


ದೇಶದ ರಾಷ್ಟ್ರೀಕೃತ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕುಗಳ ನಡುವೆ ಆರೋಗ್ಯಕರ ಸ್ಪರ್ಧೆ ನಡೆದು ಜನಸಾಮಾನ್ಯರಿಗೆ ಆರ್ಥಿಕ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ನಿಗಧಿಪಡಿಸಲಾಗಿರುವ ಗುರಿ ಅತ್ಯಂತ ಕಡಿಮೆ ಇದೆ. ಆದರೆ, ಜನಸಾಮಾನ್ಯರಿಗೆ ಆರ್ಥಿಕ ಸೌಲಭ್ಯ ಒದಗಿಸುವಲ್ಲಿ ನಿಗಧಿತ ಗುರಿ ತಲುಪದಿರುವುದು ಸಮಾಧಾನದ ಸಂಗತಿಯಲ್ಲ ಎಂದ ಅವರು, ಮುಂದಿನ ಸಭೆಯಲ್ಲಾದರೂ ನಿರೀಕ್ಷಿತ ಪ್ರಗತಿ ಸಾಧಿಸಬೇಕು ಎಂದವರು ನುಡಿದರು.


ಶೈಕ್ಷಣಿಕ ಸಾಲ ನೀಡಿಕೆಯಲ್ಲಿ ಅ‍ಭ್ಯರ್ಥಿಗಳ ಸಿಬಿಲ್‌ ಸ್ಕೋರ್‌ನಲ್ಲಿ ಸಡಿಲಿಕೆ ಮಾಡುವಂತೆ ಸೂಚಿಸಿದ ಅವರು, ಬ್ಯಾಂಕಿಂಗ್‌ ವ್ಯವಹಾರಕ್ಕೆ ಇನ್ನಷ್ಟು ಬಲತುಂಬಿ ಜನಸಾಮಾನ್ಯರಿಗೆ ತಲುಪುವಂತಾಗಬೇಕು. ಸರ್ಕಾರಿ ಯೋಜನೆಗಳು ಸುಲಭವಾಗಿ ಸರಳವಾಗಿ ತಲುಪುವಲ್ಲಿ ಶ್ರಮಿಸುವಂತೆ ಅವರು ಸಲಹೆ ನೀಡಿದರು.
ಗೃಹ ಸಾಲ ನೀಡಿಕೆಯಲ್ಲಿಯೂ ನಿರೀಕ್ಷಿತ ಪ್ರಗತಿ ಕಾಣದಾಗಿದೆ. ಗೋವಿಂದಾಪುರದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ವಸತಿ ಸಂಕೀರ್ಣಗಳಲ್ಲಿ 1200ಮನೆಗಳು ಮಾತ್ರ ನಿರ್ಮಾಣಗೊಂಡು ಅದರಲ್ಲಿಯೂ 400ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.

ಉಳಿದ ಮನೆಗಳನ್ನು ಹಸ್ತಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆ ಆರಂಭಗೊಂಡು 6-8ವರ್ಷಗಳೇ ಸಂದಿವೆ. ಆದರೆ, ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಪೂರ್ಣಗೊಳಿಸಿ, ಅರ್ಹ ಫಲಾನುಭವಿಗೆ ತಲುಪಿಸುವಲ್ಲಿ ಇರಬಹುದಾದ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡು ತ್ವರಿತಗತಿಯಲ್ಲಿ ಮನೆಗಳನ್ನು ನಿರ್ಮಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದವರು ನುಡಿದರು.
ಜನ್‌ಧನ್‌ ಖಾತೆಗಳಿಂದಾಗಿ ಬ್ಯಾಂಕುಗಳಲ್ಲಿನ ಠೇವಣಿ ಪ್ರಮಾಣ ದ್ವಿಗುಣವಾಗಿದೆ. ಅದಕ್ಕಾಗಿ ಶ್ರಮಿಸಿದ ಎಲ್ಲಾ ಬ್ಯಾಂಕ್‌ ಅಧಿಕಾರಿ ಸಿಬ್ಬಂಧಿಗಳು ಅಭಿನಂದನಾರ್ಹರು.

• ದೇಶದ ಪ್ರತಿಯೊಬ್ಬರಿಗೂ ಬ್ಯಾಂಕಿಂಗ್ ಸೌಲಭ್ಯಗಳನ್ನು ತಲುಪಿಸುವ ಪ್ರಧಾನಮಂತ್ರಿ ಜನ್‌ಧನ್‌ ಯೋಜನೆಯಡಿ ಬ್ಯಾಂಕ್‌ಖಾತೆಗಳನ್ನು ಆರಂಭಿಸಲು ಇದ್ದ ನಿಬಂಧನೆಗಳನ್ನು ಸಡಿಲಗೊಳಿಸಿ, ಶೂನ್ಯ ಬ್ಯಾಲೆನ್ಸ್‌ನಲ್ಲಿ ಖಾತೆ ತೆರೆಯಲು ಅವಕಾಶ ಕಲ್ಪಿಸುವ ಅತ್ಯಪರೂಪದ ಯೋಜನೆ ಆರಂಭಗೊಂಡು ಇಂದಿಗೆ 12 ವರ್ಷಗಳು ಪೂರ್ಣಗೊಂಡಿದೆ.
ದೇಶದಲ್ಲಿ 59ಕೋಟಿ ಮಂದಿ ಖಾತೆಗಳನ್ನು ತೆರೆದರು. ಇದರಿಂದಾಗಿ 3.17ಲಕ್ಷ ಕೋಟಿ ರೂ.ಗಳ ಆರ್ಥಿಕ ವ್ಯವಹಾರ ನಡೆದಿರುವುದು ವಿಶೇಷವಾಗಿದೆ.

ಈ ಯೋಜನೆಯಡಿ ಖಾತೆದಾರರಿಗೆ ಉಚಿತವಾಗಿ ರುಪೇ ಕಾರ್ಡ್‌ನೊಂದಿಗೆ ರೂ. 2 ಲಕ್ಷದವರೆಗೆ ಅಪಘಾತ ವಿಮಾ ರಕ್ಷಣೆ, ರೂ. 10,000 ವರೆಗೆ ಓವರ್‌ಡ್ರಾಫ್ಟ್ (ಸಾಲದ) ಸೌಲಭ್ಯ ಹಾಗೂ ಸರ್ಕಾರದ ಸಬ್ಸಿಡಿ ಮತ್ತು ಯೋಜನೆಗಳ ಹಣ ನೇರವಾಗಿ ಖಾತೆಗೆ ಜಮೆಯಾಗಲಿದೆ.
ಶೇ.78ರಷ್ಟು ಗ್ರಾಮೀಣ ಪ್ರದೇಶದ ಜನಸಾಮಾನ್ಯರು ಅದರಲ್ಲೂ ವಿಶೇಷವಾಗಿ ಖಾತೆ ಆರಂಭಿಸಿದವರಲ್ಲಿ ಶೇ.56ರಷ್ಟು ಮಹಿಳೆಯರೇ ಇದ್ದಾರೆ. ಆಗಸ್ಟ್‌ 19ರ ವೇಳೆಗೆ ಪ್ರತಿ ಖಾತೆಯ ಠೇವಣಿ 5,256ರೂ.ಗಳಿಗೆ ಏರಿಕೆಯಾಗಿದೆ.

ಆರಂಭದ ವರ್ಷದಲ್ಲಿನ ಠೇವಣಿಯನ್ನು ಗಮನಿಸಿದಾಗ 3-4ರಷ್ಟು ಹೆಚ್ಚಾಗಿದೆ. ಜನ್‌ಧನ್‌ – ಆಧಾರ್‌ – ಮೊಬೈಲ್‌ ವ್ಯವಸ್ಥೆ ಮೂಲಕ ಸರ್ಕಾರದ ಕಲ್ಯಾಣ ನೆರವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ. ಪಾರದರ್ಶಕವಾಗಿರುವ ಈ ವ್ಯವಸ್ಥೆಯಿಂದಾಗಿ ಸಮಾಜದ ಕೊನೆಯ ವ್ಯಕ್ತಿಗೂ ಆರ್ಥಿಕ ವ್ಯವಹಾರ ಸಾಧ್ಯವಾಗಿದೆ.

ಬಿ.ವೈ.ರಾಘವೇಂದ್ರ, ಸಾಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ, ಶಿವಮೊಗ್ಗ.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.‌ಹೇಮಂತ್‌, ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಸಂಜೀವ್‌ ಕುಮಾರ್‌, ಆರ್.ಬಿ.ಐ. ಜನರಲ್‌ ಮ್ಯಾನೇಜರ್‌ ಬಾಲುಲ್‌ ಬಾರ್ಡೋಲಿ, ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶರತ್‌ ಗೌಡ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *