ಮಂಜುನಾಥ್ ಶೆಟ್ಟಿ…
ಶಿವಮೊಗ್ಗ: ಅಧಿಕಾರಶಾಹಿ ಹಾಗೂ ಭ್ರಷ್ಟ ವ್ಯವಸ್ಥೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಯುವ ಸಮೂಹದ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಹೇಳಿದರು.
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಇಂಜಿನಿಯರಿಂಗ್ ವಿಭಾಗಕ್ಕೆ ಪ್ರವೇಶಾತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಶಕ್ತಿ ಗಾಂಧೀ ಮಾರ್ಗದ ಮೂಲಕ ನಡೆಸುತ್ತಿರುವ ಹೋರಾಟಗಳು, ಸರ್ಕಾರಗಳನ್ನು ಎಚ್ಚರಿಸುವ ಹಾಗೂ ವ್ಯವಸ್ಥೆಯನ್ನು ಅಲುಗಾಡಿಸುವಲ್ಲಿ ಯಶಸ್ವಿಯಾಗಿವೆ. ಮಹಾಭಾರತ ಮತ್ತು ರಾಮಾಯಣಗಳು ಎಲ್ಲಿಯವರೆಗೆ ಪ್ರಸ್ತುತವಾಗಿರುತ್ತವೆಯೋ, ಅಲ್ಲಿಯವರೆಗೆ ಗಾಂಧೀ ಮಾರ್ಗವೂ ಪ್ರಸ್ತುತವಾಗಿರುತ್ತದೆ ಎಂದರು.
ಶಿಕ್ಷಣ ಪಡೆದವರಿಂದಲೇ ವ್ಯವಸ್ಥೆಗೆ ಸವಾಲುಗಳು ಎದುರಾಗುತ್ತಿರುವುದು ವಿಷಾದನೀಯ. ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು, ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತವೆ. ಹೀಗಾಗಿ ಯುವಕರು ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಜೀವನದ ಮೌಲ್ಯಗಳನ್ನಾಗಿಸಿಕೊಂಡು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.
ಸುಶಿಕ್ಷಿತರಾಗುವುದರ ಜೊತೆಗೆ ಸುಸಂಸ್ಕೃತರಾಗಬೇಕು. ಪೋಷಕರ ಆಶಯಗಳನ್ನು ಸದಾ ಗೌರವಿಸುವುದರೊಂದಿಗೆ, ಜ್ಞಾನಕ್ಕಿಂತಲೂ ಮಿಗಿಲಾದ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ, ಸಮಾಜಕ್ಕೆ ಬೆಳಕಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ದೂರದೃಷ್ಟಿಯ ಫಲವಾಗಿ ಸ್ಥಾಪನೆಯಾದ ಸಂಸ್ಥೆ, ಇಂದಿಗೂ ಅದೇ ಧ್ಯೇಯೋದ್ದೇಶಗಳೊಂದಿಗೆ ಸಮಾಜದ ಶೈಕ್ಷಣಿಕ ಅಗತ್ಯಗಳಿಗೆ ಸ್ಪಂದಿಸುತ್ತಾ ಮುನ್ನಡೆಯುತ್ತಿದೆ. ಸಮಾಜದ ಅಗತ್ಯವನ್ನು ಅರಿತು ಹಿರಿಯರು ಕಾಲಕಾಲಕ್ಕೆ ವಿವಿಧ ವಿಷಯಗಳನ್ನು ಹೊಂದಿದ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿರುವುದು ಸಂಸ್ಥೆಯ ವಿಶೇಷತೆ.
ಶಿಕ್ಷಣವು ಕೇವಲ ಕೊಠಡಿಯ ಕಲಿಕೆಗೆ ಸೀಮಿತವಾಗದೆ, ಪ್ರಯೋಗ, ಸಂಶೋಧನೆ ಹಾಗೂ ಆವಿಷ್ಕಾರದ ಮೂಲಕ ವಿಸ್ತರಿಸಬೇಕು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಯೋಗಾಲಯದ ಅನುಭವಕ್ಕೆ ಹೆಚ್ಚಿನ ಮಹತ್ವ ನೀಡಿ, ಆವಿಷ್ಕಾರಿ ಮನೋಭಾವದೊಂದಿಗೆ ಕಲಿಯುವುದನ್ನು ರೂಢಿಸಿಕೊಳ್ಳಬೇಕು. ಅದುವೇ ವೃತ್ತಿಪರ ಶಿಕ್ಷಣದ ಮುಖ್ಯ ಲಕ್ಷಣ.
ವಿದ್ಯಾರ್ಥಿಗಳ ಕಲ್ಪನೆಗಳಿಗೆ ಉತ್ಪನ್ನದ ರೂಪ ನೀಡಲು ಕಾಲೇಜಿನಲ್ಲಿ ಐಡಿಯಾ ಲ್ಯಾಬ್‌ನಂತಹ ನಾವೀನ್ಯ ಉತ್ಪನ್ನ ನಿರ್ಮಾಣ ವೇದಿಕೆಗಳನ್ನು ರೂಪಿಸಲಾಗಿದೆ. ಅಂತಹ ವೇದಿಕೆಗಳನ್ನು ಪರಿಣಾಕಾರಿಯಾಗಿ ಬಳಸಿಕೊಳ್ಳಿ. ಅಂಕಗಳಿಗಿಂತ ಜ್ಞಾನ, ಕೌಶಲ್ಯ ಮತ್ತು ಪ್ರಾಯೋಗಿಕ ಅನುಭವಕ್ಕೆ ಆದ್ಯತೆ ನೀಡಿ. ಇದರಿಂದ ಉದ್ಯೋಗಾವಕಾಶದ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಸ್ಟಾರ್ಟ್‌ಅಪ್‌ಗಳ ನಿರ್ಮಾಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗೆ ಇಂಜಿನಿಯರಿಂಗ್ ಶಿಕ್ಷಣವು ಭದ್ರ ಬುನಾದಿಯಾಗಲಿ ಎಂದು ಆಶಿಸಿದರು.
ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ರೋಬೋ
ಕಾಲೇಜಿಗೆ ಹೊಸ ಹೆಜ್ಜೆಯಿಟ್ಟ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು, ಅಂತಿಮ ವರ್ಷದ ಎಐ ವಿದ್ಯಾರ್ಥಿಗಳು ನಿರ್ಮಿಸಿದ ರೋಬೋ ಆತ್ಮೀಯವಾಗಿ ಸ್ವಾಗತಿಸಿತು.
ಇದರೊಂದಿಗೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ನಾವೀನ್ಯಮಯ ಯೋಜನೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಕೈ ಸನ್ನೆಗಳ ಮೂಲಕ ಬ್ಲೂಟೂತ್ ಬಳಸಿ ನಿಯಂತ್ರಿಸಬಹುದಾದ ರೊಬೊಟಿಕ್ ಆರ್ಮ್, ದೃಷ್ಟಿಹೀನರು ಹಾಗೂ ಸವಾರರಿಗೆ ನೈಜ ಸಮಯದ ವಸ್ತು ಪತ್ತೆ ಮತ್ತು ಧ್ವನಿ ಮಾರ್ಗದರ್ಶನ ನೀಡುವ ಎಐ ಸ್ಮಾರ್ಟ್ ಹೆಲ್ಮೆಟ್, ತಂತ್ರಜ್ಞಾನದ ನೆರವಿನಿಂದ ಪ್ರಜ್ವಲಿಸಿದ ದೀಪಸ್ತಂಭ, ಜೈವಿಕ ಇಂಧನದ ಪ್ರಯೋಗಗಳು ನೋಡುಗರನ್ನು ಆಕರ್ಷಿಸಿತು. ಕೆನರಾ ಬ್ಯಾಂಕ್ ಸಿಬ್ಬಂದಿಗಳು ಶಿಕ್ಷಣ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಎಂ.ಎಸ್ ಅನಂತದತ್ತಾ, ಎಂ.ಆರ್.ಸೀತಾಲಕ್ಷ್ಮೀ, ಜಿ.ಎನ್.ಸುಧೀರ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಸ್ವಾಗತಿಸಿ, ಪ್ರವೇಶಾತಿ ಸಮಿತಿ ಮುಖ್ಯಸ್ಥರಾದ ಡಾ.ಮೊಯಿನುದ್ದಿನ್ ಖಾನ್ ವಂದಿಸಿ, ಡಾ.ಎಚ್.ಬಿ.ಸುರೇಶ್ ನಿರೂಪಿಸಿದರು.