ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ ಫುಡ್ ಕೋರ್ಟ್‌ಗಳಲ್ಲಿ ಆಹಾರ ಸುರಕ್ಷತಾ ಕ್ರಮಗಳ ಪಾಲನೆ ಕುರಿತು ಎಸಿ ಡಾ.ಮೈತ್ರಿ ತಪಾಸಣೆ ನಡೆಸಿದರು.ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಮೊದಲು ಎಚ್ಚರಿಕೆ ನೀಡಿ ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ. 

ಫುಡ್ ಕೋರ್ಟ್‌ನಲ್ಲಿರುವ ವೆಜ್ ಹಾಗೂ ನಾನ್‌ವೆಜ್ ವಿಭಾಗಗಳಲ್ಲಿನ ಅಂಗಡಿಗಳಿಗೆ ಎಸಿ ಡಾ.ಮೈತ್ರಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಆಹಾರ ತಯಾರಿಕೆ ಮತ್ತು ಮಾರಾಟದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಸರ್ಕಾರ ಹಾಗೂ ಆಹಾರ ಸುರಕ್ಷತಾ ಇಲಾಖೆಯಿಂದ ನೀಡಲಾಗಿರುವ ಮಾರ್ಗಸೂಚಿಗಳನ್ನು ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಮುಖ್ಯವಾಗಿ ಪರಿಶೀಲಿಸಿದರು.

ಮೊದಲು ಎಚ್ಚರಿಕೆ…

ಈ ಕುರಿತು ಮಾಹಿತಿ ನೀಡಿರುವ ಎಸಿ ಡಾ.ಮೈತ್ರಿ ಅವರು ತಪಾಸಣೆ ವೇಳೆ ನಿಯಮಗಳ ಪಾಲನೆಯಲ್ಲಿ ಕೆಲವು ಕೊರತೆಗಳು ಕಂಡುಬಂದಿದ್ದರೂ, ತಕ್ಷಣ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂಗಡಿ ಮಾಲೀಕರಿಗೆ ಸ್ಥಳದಲ್ಲೇ ಅಗತ್ಯ ಸೂಚನೆ ಹಾಗೂ ಎಚ್ಚರಿಕೆ ನೀಡಲಾಗಿದೆ ಎಂದರು.

15 ದಿನಗಳೊಳಗೆ ಕಂಡುಬಂದಿರುವ ಕೊರತೆಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ನಿಗದಿತ ಅವಧಿಯೊಳಗೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ಹಂತದಲ್ಲಿ ಶಿಸ್ತುಕ್ರಮಕ್ಕೆ ಆದೇಶಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈಜೀನ್ ಕೊರತೆ ಪತ್ತೆ…

ತಪಾಸಣೆ ವೇಳೆ ಕೆಲವು ಅಂಗಡಿಗಳಲ್ಲಿ ಸ್ವಚ್ಛತೆ ಮತ್ತು ಹೈಜೀನ್ ನಿರ್ವಹಣೆಯಲ್ಲಿ ಕೊರತೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಮಹಾನಗರ ಪಾಲಿಕೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.

ಆಹಾರ ತಯಾರಿಕೆ ಮತ್ತು ಮಾರಾಟ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಅಗತ್ಯವಿರುವ ಸಂದರ್ಭಗಳಲ್ಲಿ ಕ್ಯಾಪ್, ಮಾಸ್ಕ್ ಮತ್ತು ಗ್ಲೌಸ್ ಧರಿಸಬೇಕು. ಆಹಾರ ಸುರಕ್ಷತಾ ಇಲಾಖೆಯ ಮಾರ್ಗಸೂಚಿಗಳಂತೆ ಅಡುಗೆ ಹಾಗೂ ಆಹಾರ ನಿರ್ವಹಣೆ ನಡೆಯಬೇಕು ಎಂದು ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ ಎಂದರು.

25ಕ್ಕೂ ಹೆಚ್ಚು ಅಂಗಡಿಗಳ ಪರಿಶೀಲನೆ…

ಫುಡ್ ಕೋರ್ಟ್‌ನ ವೆಜ್ ವಿಭಾಗದಲ್ಲಿ ಸುಮಾರು 12ರಿಂದ 15 ಅಂಗಡಿಗಳು ಇದ್ದವು. ಈ ಪೈಕಿ ಕೆಲವು ಅಂಗಡಿಗಳು ತಪಾಸಣೆ ನಡೆದ ಸಂದರ್ಭದಲ್ಲಿ ಅಂಗಡಿಗಳು ಓಪನ್ ಆಗಿರಲಿಲ್ಲ.  ನಾನ್‌ವೆಜ್ ವಿಭಾಗದಲ್ಲಿ ಸುಮಾರು ಅಂಗಡಿಗಳು ಇದ್ದು ಕೆಲವು ಅಂಗಡಿಗಳು ಬಂದ್ ಆಗಿದ್ದವು.

15 ದಿನಗಳ ಬಳಿಕ ಮತ್ತೆ ತಪಾಸಣೆ…

ಅಂಗಡಿ ಮಾಲೀಕರಿಗೆ ನೀಡಿರುವ ಸೂಚನೆಗಳನ್ನು ಪಾಲಿಸಲಾಗಿದೆಯೇ ಹೈಜೀನ್ ಕ್ರಮಗಳನ್ನು ಸರಿಪಡಿಸಲಾಗಿದೆಯೇ ಹಾಗೂ ಆಹಾರ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು 15 ದಿನಗಳ ಬಳಿಕ ಮತ್ತೊಮ್ಮೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ.

ಸಂದರ್ಭದಲ್ಲಿ ಸೂಚನೆಗಳನ್ನು ಪಾಲಿಸದಿರುವುದು ಕಂಡುಬಂದರೆ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.