ಮಂಜುನಾಥ್ ಶೆಟ್ಟಿ…

(ದಾವಣಗೆರೆ) ಚೀಲೂರು: ಯಾವುದೇ ಸ್ಪರ್ಧಾತ್ಮಕ ಯುಗದಲ್ಲಿ ಹೋರಾಟ ನಡೆಸಿ ಯಶಸ್ಸು ಸಾಧಿಸಲು ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬರಿಗೂ ತಲುಪಬೇಕು ಎಂಬ ಬದ್ಧತೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್ಇಎಸ್) ಸ್ಥಾಪನಾ ದಿನದಿಂದಲೂ ಉಳಿಸಿಕೊಂಡು ಬಂದಿದೆ ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಶಾಂತನಗೌಡ ಹೇಳಿದರು.

ದಾವಣಗೆರೆ ಜಿಲ್ಲೆಯ ಚೀಲೂರಿನಲ್ಲಿರುವ ಎನ್ಇಎಸ್ ವಿದ್ಯಾಸಂಸ್ಥೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, ನ್ಯಾಷನಲ್ ಇಂಗ್ಲೀಷ್ ಶಾಲೆಯ ನೂತನ ಕಟ್ಟಡ ಹಾಗೂ ರೋಟರಿ ಜಾಗತಿಕ ಅನುದಾನದಲ್ಲಿ ನವೀಕರಣಗೊಂಡ ರಾಷ್ಟ್ರೀಯ ಪ್ರೌಢಶಾಲೆಯ ಕಟ್ಟಡ ಲೋಕಾರ್ಪಣೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸಿದ ಶಾಲೆಗಳ ಅಧ್ಯಾಪಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಎನ್ಇಎಸ್ ಸಂಸ್ಥೆಯ ಸ್ಥಾಪನೆ ಹಾಗೂ ಬೆಳವಣಿಗೆಯಲ್ಲಿ ಪಾಲ್ಗೊಂಡ ಸಮಾಜ ಸೇವಕರ ಸೇವೆ ಎಂದೆಂದಿಗೂ ಸ್ಮರಣೀಯ. ಶಿಕ್ಷಣದ ಮೂಲಕ ಸಮಾಜದ ಸಬಲೀಕರಣಕ್ಕೆ ಸಂಸ್ಥೆ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಗ್ರಾಮೀಣ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉತ್ತಮ ಮೂಲಸೌಕರ್ಯ ಮತ್ತು ಗುಣಮಟ್ಟದ ವಿದ್ಯಾಭ್ಯಾಸ ಒದಗಿಸುವ ಉದ್ದೇಶದಿಂದ ಸರ್ಕಾರ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಿದೆ. ಇದರ ನಡುವೆಯೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತರಿಗೆ ಶಿಕ್ಷಣ ಮತ್ತು ಉನ್ನತೀಕರಣದ ಅವಕಾಶಗಳನ್ನು ಕಲ್ಪಿಸಲು ಎನ್ಇಎಸ್‌ ನಂತಹ ಸಂಸ್ಥೆಗಳ ಸಹಭಾಗಿತ್ವ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾಗಿದೆ ಎಂದರು.


₹1.06 ಕೋಟಿ ವೆಚ್ಚದಲ್ಲಿ ಕನ್ನಡ ಮಾಧ್ಯಮ ಶಾಲೆ ನವೀಕರಣ…

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ರೋಟರಿಯ ಜಾಗತಿಕ ಅನುದಾನದೊಂದಿಗೆ ಸಂಸ್ಥೆಯ ಅನುದಾನವನ್ನು ಸೇರಿಸಿ ರಾಷ್ಟ್ರೀಯ ಕನ್ನಡ ಮಾಧ್ಯಮ ಶಾಲೆಯನ್ನು ಒಟ್ಟು ₹1.06 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿದೆ. ನೂತನ ಶೌಚಾಲಯಗಳು, ಕಂಪ್ಯೂಟರ್ ಪ್ರಯೋಗಾಲಯ, ಸ್ಮಾರ್ಟ್ ತರಗತಿಗಳು ಹಾಗೂ ಶಿಕ್ಷಕರ ವೃತ್ತಿಪರ ಕೌಶಲ್ಯಾಭಿವೃದ್ಧಿ ತರಬೇತಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಈ ಅನುದಾನ ಒಳಗೊಂಡಿದೆ.

ಜೊತೆಯಲ್ಲಿ ಎನ್ಇಎಸ್ ಸಂಸ್ಥೆಯ ಅನುದಾನದಲ್ಲಿ, ಆಂಗ್ಲ‌ ಮಾಧ್ಯಮ ಶಾಲೆಗೆ ನೂತನ ಕಟ್ಟಡ, ಡಿಜಿಟಲ್ ತರಗತಿಗಳು, ಭಾಷೆ, ವಿಜ್ಞಾನ ಹಾಗೂ ಕಂಪ್ಯೂಟರ್ ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದೆ. ಶಾಲೆಗಳ ಮೂಲಸೌಕರ್ಯವನ್ನು ಜವಾಬ್ದಾರಿಯುತವಾಗಿ ಸಂರಕ್ಷಿಸಿ, ಸದ್ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.


ರೋಟರಿ ಜಿಲ್ಲಾ ಗವರ್ನರ್ ರೋ.ಬಿ.ಎಂ.ಭಟ್ ಮಾತನಾಡಿ, ಅನುದಾನಿತ ಸಂಸ್ಥೆಯಲ್ಲಿ ‘ಹ್ಯಾಪಿ ಸ್ಕೂಲ್’ ನಿರ್ಮಾಣಕ್ಕೆ ರೋಟರಿ ಸಹಕಾರ ನೀಡಿರುವುದು ಸಂತಸದ ಸಂಗತಿ. ರೋಟರಿ ನೀಡಿರುವುದು ಕೇವಲ ಕೊಡುಗೆಯಲ್ಲ; ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಮಾಡಿರುವ ಹೂಡಿಕೆ. ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡುವ ವಿದ್ಯಾರ್ಥಿಗಳು ಮುಂದೆ ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಜವಾಬ್ದಾರಿ ಹೊಂದಬೇಕು ಎಂದು ಕರೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ, ರೋಟರಿ ಶಿವಮೊಗ್ಗ ಅಧ್ಯಕ್ಷರಾದ ಗೋಪಿನಾಥ್, ಮಾಜಿ ಅಧ್ಯಕ್ಷರಾದ ಆನಂದ್, ರಾಷ್ಟ್ರೀಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಹಾಗೂ ರಾಷ್ಟ್ರೀಯ ಆಂಗ್ಲ‌ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯರಾದ ಆದರ್ಶ್ ಮಾತನಾಡಿದರು.

ಎನ್ಇಎಸ್ ನಿರ್ದೇಶಕರಾದ ಪಿ.ಮೈಲಾರಪ್ಪ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ರೋಟರಿ ಗವರ್ನರ್ ವಸಂತ ಹೋಬಳಿದಾರ್, ಎನ್ಇಎಸ್ ಖಜಾಂಚಿ ಡಿ.ಜಿ.ರಮೇಶ್ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *