ಮಂಜುನಾಥ್ ಶೆಟ್ಟಿ…

ಸಂಚಾರಿ ಸಿಪಿಐ ದೇವರಾಜ್ ನೇತೃತ್ವದಲ್ಲಿ ಶಿವಮೊಗ್ಗ ನಗರದ ಪ್ರಮುಖ ರಸ್ತೆ ಹಾಗೂ ಚಾನೆಲ್ ಪ್ರದೇಶಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದ್ದ ಕೊಟ್ಟಿಗೆಗಳು ರ‍್ಯಾಂಪ್‌ಗಳು, ಕಬ್ಬಿಣದ ಸಾಮಗ್ರಿಗಳು ಸೇರಿದಂತೆ ವಿವಿಧ ರೀತಿಯ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ನಗರದ ಲಕ್ಷ್ಮಿ ಟಾಕೀಸ್‌ನಿಂದ ಜೈಲ್ ಸರ್ಕಲ್‌ವರೆಗೆ ಜೈಲ್ ರಸ್ತೆಯಲ್ಲಿ ಹಾಗೂ ನಿರ್ಮಲ ನರ್ಸಿಂಗ್ ಹೋಮ್‌ ಬಳಿಯಿಂದ ಶರಾವತಿ ನಗರದ 60 ಅಡಿ ರಸ್ತೆಯವರೆಗಿನ ಶರಾವತಿ ಚಾನೆಲ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಶರಾವತಿ ಚಾನೆಲ್ ಪಕ್ಕದಲ್ಲಿ ಕೆಲವರು ಜಾನುವಾರುಗಳನ್ನು ಕಟ್ಟಲು ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡಿದ್ದರು. ಜಾನುವಾರುಗಳನ್ನು ಸಮರ್ಪಕವಾಗಿ ಕೊಟ್ಟಿಗೆಯಲ್ಲಿ ಕಟ್ಟದೆ ರಸ್ತೆಯಂಚಿನಲ್ಲಿ ಬಿಡುತ್ತಿದ್ದರಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಜಾನುವಾರುಗಳ ಓಡಾಟದಿಂದ ಸಗಣಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಬೀಳುತ್ತಿದ್ದು, ಶಾಲಾ ಮಕ್ಕಳ ಬಟ್ಟೆಗೂ ಅಂಟಿಕೊಳ್ಳುವಂತಹ ಪರಿಸ್ಥಿತಿ ಇತ್ತು ಎಂದು ಅವರು ಹೇಳಿದ್ದಾರೆ.

ಚಾನೆಲ್ ಪಕ್ಕದಲ್ಲಿದ್ದ ಕೊಟ್ಟಿಗೆಗಳನ್ನು ತೆರವುಗೊಳಿಸಿ, ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಹಲವು ವರ್ಷಗಳಿಂದ ಇದ್ದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಇದೇ ವೇಳೆ ಜೈಲ್ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದ ರ‍್ಯಾಂಪ್‌ಗಳು ಹಾಗೂ ಅಡ್ಡಿಪಡಿಸುತ್ತಿದ್ದ ಫಲಕಗಳನ್ನು ತೆರವುಗೊಳಿಸಲಾಗಿದೆ. ರಸ್ತೆ ಬದಿಯಲ್ಲಿದ್ದ ಕೆಇಬಿ ಹಾಗೂ ಬಿಎಸ್‌ಎನ್‌ಎಲ್ ಕಂಬಗಳಿಂದ ಉಂಟಾಗುತ್ತಿದ್ದ ಅಡಚಣೆಯನ್ನೂ ಸರಿಪಡಿಸಿ ಸಂಚಾರಕ್ಕೆ ಅನುಕೂಲವಾಗುವಂತೆ ಸ್ಥಳವನ್ನು ತೆರವುಗೊಳಿಸಲಾಗಿದೆ.

ತೆರವುಗೊಳಿಸಿರುವ ಜಾಗದಲ್ಲಿ ಮತ್ತೆ ಒತ್ತುವರಿ ಮಾಡಿಕೊಳ್ಳದಂತೆ ಮುಂದಿನ ದಿನಗಳಲ್ಲಿಯೂ ನಿಗಾ ವಹಿಸಲಾಗುವುದು. ನಿಯಮ ಉಲ್ಲಂಘಿಸಿ ಮತ್ತೆ ಕೊಟ್ಟಿಗೆ ಅಥವಾ ಇತರೆ ನಿರ್ಮಾಣಗಳನ್ನು ಮಾಡಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *