ಮಂಜುನಾಥ್ ಶೆಟ್ಟಿ…



ಶಿವಮೊಗ್ಗ ನಗರದ ಕೋಟೆ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಐತಿಹಾಸಿಕ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ನೆರವೇರಿತು.
ನಗರದ ಕುಂಬಾರ ನಂಜುಡಪ್ಪ ಅವರ ಮನೆಯಲ್ಲಿ ಬೆಳಿಗ್ಗೆ ವಿಶೇಷ ಪೂಜೆ ನೆರವೇರಿಸಿ ಗಣಪತಿ ಮೂರ್ತಿಯನ್ನು ಮೆರವಣಿಗೆಯ ಮೂಲಕ ಭೀಮೇಶ್ವರ ದೇವಸ್ಥಾನದತ್ತ ಕರೆ ತಂದರು.ರಾಮಣ್ಣ ಶ್ರೇಷ್ಠಿ ಪಾರ್ಕ್ ಮೂಲಕ ಕೋಟೆ ಮಾರಿಕಾಂಬ ದೇವಸ್ಥಾನದ ರಸ್ತೆಯಾಗಿ ಸಾಗಿದ ಮೆರವಣಿಗೆಯಲ್ಲಿ ಭಕ್ತರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯುದ್ದಕ್ಕೂ ಮಂಗಳವಾದ್ಯಗಳ ಸದ್ದು ಮೊಳಗಿದ್ದು, “ಗಣಪತಿ ಬಪ್ಪ ಮೋರೆಯಾ”, “ಭಾರತ್ ಮಾತಾಕಿ ಜೈ” ಸೇರಿದಂತೆ ವಿವಿಧ ಘೋಷಣೆಗಳು ಕೇಳಿಬಂದವು. ವಿಶೇಷವಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮೆರವಣಿಗೆಯಲ್ಲಿ ಭಾಗವಹಿಸಿ ಗಣಪತಿ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದು ಗಮನ ಸೆಳೆಯಿತು.
ಹಿಂದೂ ಮಹಾಮಂಡಳಿಯ ಅಧ್ಯಕ್ಷ ಶರಾಫ್ ಶ್ರೀಧರ್ ರಾವ್ ಮಾತನಾಡಿ, ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಾಗೂ ಪ್ರತಿಷ್ಠಾಪನೆಯ ಹಿಂದೆ ಹಲವು ವರ್ಷಗಳ ಹೋರಾಟ ಮತ್ತು ಏಳುಬೀಳುಗಳ ಇತಿಹಾಸವಿದೆ ಎಂದು ಸ್ಮರಿಸಿದರು.
ಹಿಂದೆ ಗಣಪತಿ ಮೆರವಣಿಗೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿರಲಿಲ್ಲ. ಮಹಿಳೆಯರ ಭಾಗವಹಿಸುವಿಕೆಯೂ ಕಡಿಮೆಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುತ್ತಿದ್ದಾರೆ. ಯಾರನ್ನೂ ಒತ್ತಾಯಪೂರ್ವಕವಾಗಿ ಕರೆತರುವ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದರು.
ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮ ಇನ್ನಷ್ಟು ಶಾಂತಿಯುತವಾಗಿ ನಡೆಯಲು ಸಾಧ್ಯವಾಗುತ್ತಿದೆ. ಮಹಿಳಾ ಶಕ್ತಿ ಹೆಚ್ಚಾದಷ್ಟು ಕಾರ್ಯಕ್ರಮಗಳು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆಯುತ್ತವೆ ಎಂಬುದು ತಮ್ಮ ನಂಬಿಕೆ ಎಂದು ಶ್ರೀಧರ್ ರಾವ್ ಹೇಳಿದರು.
ಪತ್ರಿಕೆ, ಟಿವಿ, ಯೂಟ್ಯೂಬ್ ಸೇರಿದಂತೆ ವಿವಿಧ ಮಾಧ್ಯಮಗಳು ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ನೀಡುತ್ತಿವೆ. ಸರ್ಕಾರ, ಪೊಲೀಸ್ ಇಲಾಖೆ, ಆಡಳಿತಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು ನೀರು, ಮಜ್ಜಿಗೆ, ಪಾನಕ ಹಾಗೂ ಲಘು ಉಪಾಹಾರ ವಿತರಿಸುವ ಮೂಲಕ ಭಕ್ತರಿಗೆ ನೆರವಾಗುತ್ತಿದ್ದಾರೆ. ಇದೇ ರೀತಿಯ ಸಹಕಾರವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.