ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ ತಿಲಕ ನಗರದ ರಾಘವೇಂದ್ರ ಸ್ವಾಮಿ ಮಠದ ಎದುರಿನ ತನು ಜ್ಯೂಸ್ ಸೆಂಟರ್ ‌ನಲ್ಲಿ ಕೊಳೆತ ಹಣ್ಣುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜ್ಯೂಸ್ ಸೆಂಟರ್‌ನ್ನು ಸೀಜ್ ಮಾಡಿದ್ದಾರೆ.

ಡಾ. ಮೈತ್ರಿ ನೇತೃತ್ವದಲ್ಲಿ ನಡೆದ ಆಹಾರ ಮಳಿಗೆಗಳ ತಪಾಸಣೆಯಲ್ಲಿ ತನು ಜ್ಯೂಸ್ ಸೆಂಟರ್‌ನಲ್ಲಿ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಲೋಪಗಳು ಕಂಡುಬಂದಿವೆ. ಕೊಳೆತ ಹಣ್ಣುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಎಸಿ ದಾಳಿಯ ಬಳಿಕ ಮಾತನಾಡಿದ ಎಸಿ ಡಾ. ಮೈತ್ರಿ, ಆಹಾರ ಮಳಿಗೆಗಳಲ್ಲಿ FSSAI ಮಾರ್ಗಸೂಚಿಗಳಂತೆ ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ದುರ್ಗಿಗುಡಿ ದರ್ಗಾ ಕಾಂಪ್ಲೆಕ್ಸ್ ಸೇರಿದಂತೆ ವಿವಿಧೆಡೆ ಸುಮಾರು 15 ಹೋಟೆಲ್‌ಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಲವು ಆಹಾರ ಮಳಿಗೆಗಳಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ವಿಶೇಷವಾಗಿ ಅಡುಗೆ ಪ್ರದೇಶ, ಪಾತ್ರೆ ತೊಳೆಯುವ ಸ್ಥಳ ಹಾಗೂ ಇತರ ಪ್ರದೇಶಗಳಲ್ಲಿ ಗಲೀಜು ಕಂಡುಬಂದಿದೆ. ಕೆಲವು ಕಡೆ ಜಿರಳೆಗಳು ಓಡಾಡುತ್ತಿರುವುದು ಕೂಡ ಪತ್ತೆಯಾಗಿದೆ ಎಂದು ಎಸಿ ತಿಳಿಸಿದರು.

ಆಹಾರ ಮಳಿಗೆಗಳ ಮಾಲೀಕರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ಲೋಪಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಗಡವು ನೀಡಲಾಗಿದೆ. ಈ ಅವಧಿಯ ಬಳಿಕ ಮತ್ತೆ ಪರಿಶೀಲನೆ ನಡೆಸಲಾಗುವುದು. ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಆಹಾರ ಪರವಾನಗಿ ರದ್ದುಪಡಿಸಲು ಯಾವುದೇ ಹಿಂಜರಿಕೆ ಇರುವುದಿಲ್ಲ ಎಂದು ಡಾ. ಮೈತ್ರಿ ಎಚ್ಚರಿಸಿದರು.

Leave a Reply

Your email address will not be published. Required fields are marked *