ಮಂಜುನಾಥ್ ಶೆಟ್ಟಿ…

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ನಿರುದ್ಯೋಗಿಗಳ ದಿನ’ವನ್ನಾಗಿ ಆಚರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಎದುರು ಕಪ್ಪು ಧಿರಿಸು ಧರಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ವಿಚಾರಗಳಲ್ಲಿ ಟೀಕೆ ವ್ಯಕ್ತಪಡಿಸಿದರು.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಕುರಿತು ನೀಡಲಾಗಿದ್ದ ಭರವಸೆಗಳನ್ನು ಉಲ್ಲೇಖಿಸಿದ ಅವರು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಲಾಗಿತ್ತು. ಆದರೆ ನಿರುದ್ಯೋಗ ಸಮಸ್ಯೆ ಮುಂದುವರಿದಿದೆ ಎಂದು ಆರೋಪಿಸಿದರು.

ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಜನರು ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಬಳಿಕ ಯುವಕರು ಉದ್ಯೋಗದ ಬಗ್ಗೆ ಪ್ರಶ್ನಿಸಿದಾಗ ‘ಬ್ರೀಥ್ ಇನ್, ಬ್ರೀಥ್ ಔಟ್’ ಎಂದು ಯೋಗ ಮಾಡುವಂತೆ ಹೇಳಲಾಯಿತು ಎಂದು ಯೋಗೇಶ್ ವ್ಯಂಗ್ಯವಾಡಿದರು. ಅಂತಿಮವಾಗಿ ಉದ್ಯೋಗದ ಬದಲಿಗೆ ಪಕೋಡಾ ಮಾರಾಟದ ಕುರಿತು ಮಾತನಾಡಲಾಯಿತು ಎಂದು ಟೀಕಿಸಿದರು.

NSUI ಕಾರ್ಯಕರ್ತರು ಪ್ರತಿಭಟನೆಯಲ್ಲಿ ಕಪ್ಪು ಧಿರಿಸು ಧರಿಸಿ ಭಾಗವಹಿಸಿ, ‘ನಿರುದ್ಯೋಗಿಗಳ ದಿನ’ ಎಂದು ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಮಧು, ದೇವೇಂದ್ರಪ್ಪ, ಉತ್ತರ ಬ್ಲಾಕ್ ನ ಶಿವುಕುಮಾರ್, ದಕ್ಷಿಣ ಬ್ಲಾಕ್ ನ ಅಧ್ಯಕ್ಷ ಕಲೀಂ ಪಾಷ, ಎನ್ ರಮೇಶ್, ಬಾಲಾಜಿ ಮುಂದಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *