ಮಂಜುನಾಥ್ ಶೆಟ್ಟಿ…
ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೊಳಪಡುವ ಅವಳಿ ನಗರಗಳನ್ನು ಸ್ವಚ್ಚ, ಸುಂದರ ನಗರಗಳನ್ನಾಗಿ ಮಾರ್ಪಡಿಸಲು ಅಗತ್ಯವಿರುವ ಎಲ್ಲಾ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಕೆರೆ, ಉದ್ಯಾನವನಗಳ ನಿರ್ಮಾಣ, ವರ್ತುಲ ರಸ್ತೆ, ಶುದ್ಧ ಕುಡಿಯುವ ನೀರು, ರಸ್ತೆ, ನಿಲ್ದಾಣಗಳು, ಘನತ್ಯಾಜ್ಯ ನಿರ್ವಹಣೆ ಮುಂತಾದ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್‌ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸೂಡಾ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಕ್ಷೇತ್ರ ವ್ಯಾಪ್ತಿಯಲ್ಲಿನ 15ಕೆರೆಗಳ ಅಭಿವೃದ್ಧಿಗೆ 45ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದ್ದು, ಆ ಪೈಕಿ 5ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ ಎಂದರು.
ವಿಶೇಷವಾಗಿ ಕೆರೆ ಏರಿ , ಪಾದಚಾರಿ ಮಾರ್ಗ, ರಕ್ಷಣಾ ಬೇಲಿ, ವಿದ್ಯುದ್ದೀಪ, ಕೆರೆಯ ಸುತ್ತಮುತ್ತಲಿನ ಪಾರ್ಕ್‌ಅಭಿವೃದ್ಧಿ, ಉದ್ಯಾನವನದಲ್ಲಿ ಮಕ್ಕಳ ಕ್ರೀಡಾಪರಿಕರಗಳ ಅಳವಡಿಸಲು ಕ್ರಮ ವಹಿಸಲಾಗಿದೆ. ಅಲ್ಲದೇ ಕೆರೆಯ ಮಧ್ಯಭಾಗದಲ್ಲಿ ನಡುಗಡ್ಡೆ(ದ್ವೀಪ) ನಿರ್ಮಿಸಿ, ಸುಂದರವಾಗಿ ರೂಪುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಾರ್ವಜನಿಕರಿಗೆ ಪ್ರತಿ ಬಾರಿ ಗಣೇಶೋತ್ಸವದಲ್ಲಿ ಗಣೇಶ ವಿಸರ್ಜನೆಗೆ ಅನುಕೂಲವಾಗುವಂತೆ ಅಲ್ಲಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಕೆರೆಗಳ ಸಮಗ್ರ ಸೌಂದರ್ಯೀಕರಣಕ್ಕೆ ವಿಶೇಷ ಗಮನಹರಿಸಲಾಗುತ್ತಿದೆ ಅಲ್ಲದೇ ಅಲ್ಲಿನ ಪರಿಸರ ಸದಾ ಹಸಿರಿನಿಂದ ಕಂಗೊಳಿಸುವಂತೆ ಗಿಡಮರಗಳನ್ನು ನೆಡಲಾಗುತ್ತಿದೆ. ಅಲ್ಲದೇ ಹಣ್ಣಿನ ಗಿಡ ಮತ್ತು ಔಷಧೀಯ ಸಸ್ಯಗಳನ್ನು ನೆಟ್ಟು ಬೆಳೆಸಲು ಯೋಜನೆ ರೂಪಿಸಲಾಗಿದೆ ಎಂದರು.
ಸ್ಥಳೀಯ ನಿವಾಸಿಗಳ ಆಶಯದಂತೆ ಸಾರ್ವಜನಿಕರ ಉದ್ಯಾನವನಗಳು, ಕೆರೆಗಳು ಹಾಗೂ ದೇವಸ್ಥಾನ ಮುಂತಾದ ಪ್ರದೇಶಗಳಲ್ಲಿ ಜನರ ಅನುಕೂಲಕ್ಕಾಗಿ ಕಲ್ಲುಬೆಂಚುಗಳ ಅಳವಡಿಕೆ, ದೀಪದ ವ್ಯವಸ್ಥೆ, ಕೊಳವೆಬಾವಿಗಳನ್ನು ಕೊರೆಸಿಕೊಡಲು ಉದ್ದೇಶಿಸಲಾಗಿದೆ. ಅಲ್ಲದೇ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಠಿಯಿಂದ ನಗರದ ನಾಲ್ಕು ಭಾಗಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಿ, ಲಿಫ್ಟ್‌ಗಳನ್ನು ಅಳವಡಿಸಲಾಗುವುದು ಎಂದ ಅವರು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಾಕಷ್ಟು ಉದ್ಯಾನವನ ಮತ್ತು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ 30ಉದ್ಯಾನವನಗಳು, 10ಆಟೋ ಸ್ಟ್ಯಾಂಡ್‌ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ನಗರದ ವಿವೇಕಾನಂದ ಬಡಾವಣೆಯ ಮಹಿಳಾ ಪಾಲಿಟೆಕ್ನಿಕ್‌ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಅದರ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಾಧಿಕಾರದ ವ್ಯಾಪ್ತಿಯಲ್ಲದೇ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ ಅಲ್ಲದೆ ಜಿಲ್ಲೆಯ ಸಂತರು, ಶರಣರು, ಪ್ರಸಿದ್ಧ ಸಾಹಿತಿಗಳು ಜನಿಸಿದ ಊರುಗಳನ್ನು ಸರ್ಕಾರದ ಅನುದಾನ ಮತ್ತು ಅನುಮೋದನೆ ಪಡೆದು ಅಭಿವೃಧ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೇ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರಾದ ಈಸೂರಿನಲ್ಲಿ ಅಕ್ಟೋಬರ್‌ಮಾಹೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಇಷ್ಟೇ ಅಲ್ಲದೇ ಊರುಗಡೂರು, ವಾಜಪೇಯಿ ಬಡಾವಣೆ, ಕುವೆಂಪು ನಗರ, ಗೋಪಾಳ, ವಿವೇಕಾನಂದ ಬಡಾವಣೆಗಳಲ್ಲಿ ಔಷಧೀಯ ಸಸ್ಯಗಳು, ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಿ, ಸುಂದರ ಹಸಿರು ಪರಿಸರ ನಿರ್ಮಿಸಿ ಉತ್ತಮ ವಾತಾವರಣದ ನಿರ್ಮಿಸಲಾಗುವುದು. ನಗರದ ಸುತ್ತಲು ಸುಮಾರು 34ಕಿ.ಮೀ. ಪ್ರದೇಶದಲ್ಲಿ 200ಮೀ. ವಿಸ್ತೀರ್ಣದ ರಸ್ತೆ ನಿರ್ಮಿಸಲಾಗುವುದು. ನಗರದ ಆಟೋ ಚಾಲಕರಿಗೆ, ಮಾಧ್ಯಮದ ಪ್ರತಿನಿಧಿಗಳಿಗಾಗಿ 40*60 ಆಕಾರ ನಿವೇಶನಗಳನ್ನು ಸೃಜಿಸಿ, ಅರ್ಹರಿಗೆ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಯೋಜನಾಧಿಕಾರಿ ಅಭಿಲಾಷ್, ಅಭಿಯಂತರ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.