ಮಂಜುನಾಥ್ ಶೆಟ್ಟಿ…
ಕರಾವಳಿ ಭಾಗದ ಜನರ ದಶಕಗಳ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವಂತೆ ‘ತುಳು’ ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಆಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ಕರಡು ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ ಎಂದರು.
ತುಳು ಹೆಚ್ಚುವರಿ ಅಧಿಕೃತ ಭಾಷೆ…
ದಕ್ಷಿಣ ಕನ್ನಡ ಮತ್ತು ಉಡುಪಿ ಅವಿಭಜಿತ ಜಿಲ್ಲೆಯ ಜನರ ದೀರ್ಘಕಾಲದ ಕನಸಾಗಿದ್ದ ತುಳು ಭಾಷೆಗೆ ಎರಡೂ ಜಿಲ್ಲೆಗಳ ಮಟ್ಟಿಗೆ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ.
32,611 ಕೋಟಿ ರೂ. ಮೊತ್ತದ ಯೋಜನೆಗಳು…
ಸಂಪುಟ ಸಭೆಯಲ್ಲಿ ಒಟ್ಟು 32,611 ಕೋಟಿ ರೂ. ಅನುದಾನದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ 16,000 ಕೋಟಿ ರೂ. ಗ್ರಾಮೀಣಾಭಿವೃದ್ಧಿಗೆ ಹಾಗೂ ಉಳಿದ 16,000 ಕೋಟಿಗೂ ಅಧಿಕ ಮೊತ್ತವನ್ನು ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ರಸ್ತೆ, ಮೂಲಸೌಕರ್ಯ, ಬಂದರು ಹಾಗೂ ನಗರಾಭಿವೃದ್ಧಿ ಯೋಜನೆಗಳಿಗೆ ಮೀಸಲಿಡಲಾಗಿದೆ ಎಂದರು.