ಮಂಜುನಾಥ್ ಶೆಟ್ಟಿ…
ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಸರ್ಕಾರದ ಉದ್ಯೋಗಾವಕಾಶದ ಮೀಸಲಾತಿಯಲ್ಲಿ ಶೇಕಡ ಎರಡರಷ್ಟು ಹೆಚ್ಚುವರಿ ಅವಕಾಶವನ್ನು ಸರ್ಕಾರ ನೀಡಿದ್ದು, ಇದನ್ನು ಕ್ರೀಡಾಪಟುಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್ ಮೋಹನ್ ಕುಮಾರ್ ತಿಳಿಸಿದರು.
ಅವರು ನೆಹರು ಕ್ರೀಡಾಂಗಣದಲ್ಲಿ ಆರಂಭಗೊಂಡ ಬೆಂಗಳೂರು ವಿಭಾಗ ಮಟ್ಟದ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ ಈ ಅವಕಾಶವನ್ನು ಎಲ್ಲಾ ಕ್ರೀಡಾಪಟುಗಳು ಬಳಸಿಕೊಳ್ಳಲು ಕರೆ ನೀಡಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆ ಮುಖ್ಯ. ಯಾವುದೇ ಗೆಲುವು ನಮ್ಮ ಮುಂದಿನ ಸಾಧನೆಗೆ ಅವಕಾಶ ನೀಡುತ್ತದೆ ಹಾಗೆಯೇ ಸೋಲು ಸಹ ನಂತರದ ಗೆಲುವನ್ನು ಪಡೆಯಲು ಕಾತುರತೆಯನ್ನು, ಸಾಧನೆಯನ್ನು ಹೆಚ್ಚಿಸಬೇಕು ಎಂದರು.
ಮಹಾವೀರ ವಿದ್ಯಾಸಂಸ್ಥೆ, ಅನುದಾನ ರಹಿತ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಒಟ್ಟು 11 ಜಿಲ್ಲೆಗಳಿಂದ ಬಾಲಕ- ಬಾಲಕಿಯರ ತಂಡಗಳು ಆಗಮಿಸಿದ್ದು ಇಲ್ಲಿ ಗೆದ್ದ ಮೊದಲ ಎರಡು ತಂಡಗಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ.
ಶಿವಮೊಗ್ಗ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಜಿ. ಕಾಮತ್ ಅವರು ಮಾತನಾಡಿ, ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹರಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಆರ್. ಮಂಜುನಾಥ್ ಅವರು ಮಾತನಾಡುತ್ತಾ ಕ್ರೀಡಾಕೂಟದಲ್ಲಿ ಎಲ್ಲರೂ ಸ್ನೇಹ, ವಿಶ್ವಾಸ ಹಾಗೂ ಪ್ರೀತಿಯಿಂದ ಆಡಿ, ಸಾಹಸಾತ್ಮಕವಾದ ಗೆಲುವನ್ನು ಪಡೆಯಿರಿ. ಸೋತಾಗ ನಿರಾಶರಾಗದಿರಿ ಮುಂದಿನ ಗೆಲುವಿಗೆ ಪ್ರಯತ್ನಿಸಿ ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಶಿಕ್ಷಕ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಹೆಚ್. ಆರ್. ಕೃಷ್ಣಮೂರ್ತಿ, ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಮಹಾವೀರ ಶಾಲೆಯ ಕಾರ್ಯದರ್ಶಿ ಕಾಂತಿಲಾಲ್, ತುಂಗಾ ತರಂಗ ದಿನಪತ್ರಿಕೆ ಸಂಪಾದಕ ಎಸ್. ಕೆ. ಗಜೇಂದ್ರ ಸ್ವಾಮಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಗಿರೀಶ್, ಅನುದಾನ ರಹಿತ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ. ತಿಮ್ಮೇನಹಳ್ಳಿ, ಕಾರ್ಯದರ್ಶಿ ಕೆ.ಜಿ. ಮಠಪತಿ, ಬಿ.ಹೆಚ್. ನಿರಂಜನ್ ಮೂರ್ತಿ, ಮಹಾವೀರ ಶಾಲೆಯ ಮುಖ್ಯ ಶಿಕ್ಷಕ ಅಜಿತ್, ಕಾಳನಾಯ್ಕ್, ಅಂಜನಪ್ಪ, ಭೋಜೇಗೌಡರ ಆಪ್ತ ಸಹಾಯಕ ಪರಶುರಾಮ್ ಹಾಗೂ ಇತರರು ಉಪಸ್ಥಿತರಿದ್ದರು.
ಬಿ ಆರ್ ಪಿ ಯ ಎನ್.ಇ.ಎಸ್. ಶಾಲೆಯ ದೈಹಿಕ ಶಿಕ್ಷಕ ದೇವರಾಜ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಎಲ್.ಎಸ್. ರಘು ಸ್ವಾಗತಿಸಿದರು. ಡಿಪಿಇಓ ರಮೇಶ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಕರಣ್ ಸಿಂಗ್ ವಂದಿಸಿದರು.