ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ಸಂಪ್ರದಾಯದ ಸೊಬಗು, ಗೊಂಬೆಗಳ ವೈವಿಧ್ಯ, ಭಕ್ತಿಯ ಭಾವ ಮತ್ತು ವಿದ್ಯಾರ್ಥಿಗಳ ಉತ್ಸಾಹದ ಸಮ್ಮಿಲನಕ್ಕೆ ಸಾಕ್ಷಿಯಾದದ್ದು ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದಲ್ಲಿ ನಡೆದ ‘ಎಂಸಿಎ ದಸರಾ’ ಉದ್ಘಾಟನಾ ಕಾರ್ಯಕ್ರಮ.

ಸಾಂಪ್ರದಾಯಿಕ ಉಡುಗೆಯಲ್ಲಿ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದಿದ್ದ ವಿವಿಧ ಬಗೆಯ ಗೊಂಬೆಗಳನ್ನು ಕಲಾತ್ಮಕವಾಗಿ ಜೋಡಿಸಿ, ಮಧ್ಯದಲ್ಲಿ ದುರ್ಗಾದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ಮಾವಿನ ತೋರಣ ಹಾಗೂ ಬಾಳೆಕಂಬಗಳಿಂದ ಅಲಂಕರಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಉಪನ್ಯಾಸಕರು ಮತ್ತು ಸಹಪಾಠಿಗಳೊಂದಿಗೆ ಸಾಮೂಹಿಕವಾಗಿ ದೇವಿಯನ್ನು ಆರಾಧಿಸಿದ ವಿದ್ಯಾರ್ಥಿಗಳು, ಜಗತ್ತಿನ ಒಳಿತಿಗಾಗಿ ಹಾಗೂ ಬದುಕಿನ ಉನ್ನತಿಗಾಗಿ ಪ್ರಾರ್ಥಿಸಿದರು. ಕಲಿಕೆಯ ಅಂಗಳದಲ್ಲಿ ಸಂಸ್ಕೃತಿಯ ಕಂಪು ಹರಡಿದ ಈ ಕ್ಷಣಗಳು ವಿದ್ಯಾರ್ಥಿಗಳಲ್ಲಿ ಸಂಪ್ರದಾಯದ ಬಗೆಗಿನ ಅಭಿಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದವು.

ದಸರೆಯ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದ ಗೊಂಬೆಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ದಶಾವತಾರವನ್ನು ಪ್ರತಿಬಿಂಬಿಸುವ ಗೊಂಬೆಗಳು, ವಿವಾಹ ಸಂಪ್ರದಾಯದ ವಿವಿಧ ಆಚರಣೆಗಳನ್ನು ಬಿಂಬಿಸುವ ಗೊಂಬೆಗಳು, ಗಂಡು-ಹೆಣ್ಣಿನ ಜೋಡಿಗಳು, ಎತ್ತು, ಹಸು-ಕರು, ಆನೆ ಸೇರಿದಂತೆ ಜನಪದ ಬದುಕು ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಪ್ರತಿನಿಧಿಸುವ ಗೊಂಬೆಗಳು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿದವು. ಪ್ರತಿಯೊಂದು ಗೊಂಬೆಯೂ ಒಂದೊಂದು ಕಥೆಯನ್ನು ಹೇಳುವಂತಿದ್ದು, ಸಂಸ್ಕೃತಿಯ ಬೇರುಗಳನ್ನು ನೆನಪಿಸುವ ಸುಂದರ ಕಲಾಲೋಕವನ್ನು ಸೃಷ್ಟಿಸಿತು.

ನಾಲ್ಕು ದಿನಗಳ ವೈವಿಧ್ಯಮಯ ಸಂಭ್ರಮ…

ಎಂಸಿಎ ವಿಭಾಗದ ವತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ ದಸರಾ ಕಾರ್ಯಕ್ರಮದಲ್ಲಿ ಪೂಜೆ, ಕ್ರೀಡೆ, ಕಲೆ, ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ.

ಮೊದಲ ದಿನ ದೇವಿಯ ಪೂಜೆಯೊಂದಿಗೆ ಬೆಂಕಿ ರಹಿತ ಸಾಂಪ್ರದಾಯಿಕ ಅಡುಗೆ ಸ್ಪರ್ಧೆ ಆಯೋಜಿಸಲಾಗಿದೆ. ಎರಡನೇ ದಿನ ಕೆಂಪು ಬಣ್ಣದ ಉಡುಗೆ ಸಂಹಿತೆಯೊಂದಿಗೆ ಕಲೆ ಮತ್ತು ಕ್ರೀಡೆಯ ಸಂಗಮವಾಗಿ ರಂಗೋಲಿ, ಮೆಹಂದಿ, ಕೇರಂ ಹಾಗೂ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ.

ಮೂರನೇ ದಿನ ನೀಲಿ ಬಣ್ಣದ ಉಡುಗೆಯಲ್ಲಿ ತಾಂತ್ರಿಕ ಜ್ಞಾನ ಮತ್ತು ಸಾಂಸ್ಕೃತಿಕ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಸಿದ್ಧವಾಗಲಿದೆ. ವೆಬ್ ಡಿಸೈನ್, ಐಟಿ ಮ್ಯಾನೇಜರ್, ರಸಪ್ರಶ್ನೆ, ಚರ್ಚಾ ಹಾಗೂ ಪಿಕ್ ಆ್ಯಂಡ್ ಆ್ಯಕ್ಟ್ ಸ್ಪರ್ಧೆಗಳು ವಿದ್ಯಾರ್ಥಿಗಳ ಜ್ಞಾನ, ಸೃಜನಶೀಲತೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯಕ್ಕೆ ಪರೀಕ್ಷೆಯಾಗಲಿವೆ.

ನಾಲ್ಕನೇ ದಿನ ಹಳದಿ ಬಣ್ಣದ ಉಡುಗೆ ಸಂಹಿತೆಯೊಂದಿಗೆ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಮೂಲಕ ನಾಲ್ಕು ದಿನಗಳ ಸಂಭ್ರಮಕ್ಕೆ ತೆರೆ ಬೀಳಲಿದೆ.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಎಂಸಿಎ ವಿಭಾಗದ ಮುಖ್ಯಸ್ಥ ಡಾ. ಹೇಮಂತ್ ಕುಮಾರ್ ಸೇರಿದಂತೆ ವಿಭಾಗದ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *