ಮಂಜುನಾಥ್ ಶೆಟ್ಟಿ…

ದೇಹಧಾಡ್ಯ ಎನ್ನುವುದು ಕೇವಲ ಸ್ನಾಯುಗಳನ್ನು ಬೆಳೆಸಿಕೊಂಡು ದೇಹದಾರ್ಢ್ಯವನ್ನು ಪ್ರದರ್ಶಿಸುವ ಸ್ಪರ್ಧೆಯಲ್ಲ. ಅದರ ಹಿಂದೆ ನಿರಂತರ ಪರಿಶ್ರಮ, ಶಿಸ್ತು, ತಾಳ್ಮೆ, ಆತ್ಮವಿಶ್ವಾಸ ಮತ್ತು ಗುರಿ ಸಾಧಿಸುವ ಛಲ ಅಡಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್‌ ವಿ. ಅವರು ಹೇಳಿದರು.


ಅವರು ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆಯ ವತಿಯಿಂದ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2026ರ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾ ಮತ್ತು ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇಂದಿನ ಯುವಜನತೆ ದೇಶದ ಭವಿಷ್ಯದ ಶಕ್ತಿ. ಯುವಕರು ದೈಹಿಕವಾಗಿ ಸದೃಢರಾಗಿರುವುದರ ಜೊತೆಗೆ ಮಾನಸಿಕವಾಗಿಯೂ ಸದೃಢರಾಗಿರಬೇಕು. ಆರೋಗ್ಯವಂತ ಯುವಜನತೆಯಿಂದಲೇ ಆರೋಗ್ಯವಂತ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದವರು ನುಡಿದರು.


ಇಂದಿನ ಆಧುನಿಕ ಜೀವನಶೈಲಿಯಲ್ಲಿ ವ್ಯಾಯಾಮದ ಕೊರತೆ, ದೈಹಿಕ ಚಟುವಟಿಕೆಗಳ ಅಭಾವ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಇಂತಹ ಸಂದರ್ಭದಲ್ಲಿ ದೇಹಧಾಡ್ಯ ಮತ್ತು ಇತರ ಕ್ರೀಡಾ ಚಟುವಟಿಕೆಗಳು ಯುವಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಮಹತ್ವದ ವೇದಿಕೆಗಳಾಗಿವೆ. ಇಂತಹ ಸದವಕಾಶವನ್ನು ಯುವಜನತೆ ಬಳಸಿಕೊಳ್ಳಬೇಕು ಎಂದ ಅವರು, ಕ್ರೀಡೆ ನಮ್ಮ ದೇಹವನ್ನು ಸದೃಢಗೊಳಿಸುವುದಷ್ಟೇ ಅಲ್ಲದೆ, ನಮ್ಮ ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಸೋಲನ್ನು ಸ್ವೀಕರಿಸುವ ಮನೋಭಾವ, ಗೆಲುವನ್ನು ವಿನಯದಿಂದ ಸಂಭ್ರಮಿಸುವ ಗುಣ ಮತ್ತು ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದರು.


ಆರೋಗ್ಯವೇ ನಿಜವಾದ ಸಂಪತ್ತು…

ದೇಹಧಾಡ್ಯದಲ್ಲಿ ತೊಡಗಿರುವ ಕ್ರೀಡಾಪಟುಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸರಿಯಾದ ತರಬೇತಿ, ಸಮತೋಲಿತ ಪೌಷ್ಟಿಕ ಆಹಾರ, ಸಾಕಷ್ಟು ವಿಶ್ರಾಂತಿ ಮತ್ತು ತಜ್ಞರ ಮಾರ್ಗದರ್ಶನಕ್ಕೆ ಆದ್ಯತೆ ನೀಡಬೇಕು. ತ್ವರಿತವಾಗಿ ದೇಹವನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ ಆರೋಗ್ಯಕ್ಕೆ ಹಾನಿಕಾರಕವಾದ ಸ್ಟಿರಾಯ್ಡ್‌ಗಳು ಅಥವಾ ನಿಷೇಧಿತ ಔಷಧಗಳ ಬಳಕೆಯಿಂದ ದೂರವಿರಬೇಕು. ಅಡ್ಡದಾರಿಯಲ್ಲಿ ಸಾಧಿಸುವ ಗೆಲುವಿಗಿಂತ ಆರೋಗ್ಯವನ್ನು ಕಾಪಾಡಿಕೊಂಡು ಪ್ರಾಮಾಣಿಕ ಪರಿಶ್ರಮದ ಮೂಲಕ ಸಾಧಿಸುವ ಯಶಸ್ಸು ಹೆಚ್ಚು ಮೌಲ್ಯಯುತವಾಗಿದೆ. ಕ್ರೀಡೆಯಲ್ಲಿನ ನಿಜವಾದ ಸಾಧನೆ ಎಂದರೆ ಪ್ರಶಸ್ತಿಗಳನ್ನು ಗೆಲ್ಲುವುದರ ಜೊತೆಗೆ ಉತ್ತಮ ಆರೋಗ್ಯ, ಶಿಸ್ತು ಮತ್ತು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಾಗಿದೆ ಎಂದವರು ನುಡಿದರು.


ಪ್ರಶಸ್ತಿ ಗೆಲ್ಲುವುದು ಸಂತೋಷದ ಸಂಗತಿ. ಆದರೆ ಆ ಪ್ರಶಸ್ತಿಯನ್ನು ಗೆಲ್ಲಲು ಮಾಡಿದ ಪರಿಶ್ರಮ, ತ್ಯಾಗ ಮತ್ತು ಅಭ್ಯಾಸವೇ ನಿಜವಾದ ಸಾಧನೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಬೇಕು. ಎದುರಾಳಿಗಳ ಸಾಧನೆಯನ್ನು ಗೌರವಿಸಬೇಕು. ಗೆಲುವು ಸಾಧಿಸಲಾಗದವರು ನಿರಾಶರಾಗದೆ ಮುಂದಿನ ಸ್ಪರ್ಧೆಗೆ ಇನ್ನಷ್ಟು ಸಿದ್ಧತೆಯೊಂದಿಗೆ ಮರಳಬೇಕು. ಸೋಲು ಅಂತಿಮವಲ್ಲ; ಅದು ಗೆಲುವಿನತ್ತ ಸಾಗುವ ಮತ್ತೊಂದು ಪಾಠ ಎಂಬುದನ್ನು ಪ್ರತಿಯೊಬ್ಬ ಕ್ರೀಡಾಪಟುವೂ ಅರಿತುಕೊಳ್ಳಬೇಕು ಎಂದರು.


ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವುದಾದರೂ ಒಂದು ಕ್ರೀಡೆಯನ್ನು ರೂಡಿಸಿಕೊಳ್ಳಬೇಕು. ದೈಹಿಕ ವ್ಯಾಯಾಮವನ್ನು ದಿನನಿತ್ಯದ ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು. ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಅದನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಇಂತಹ ಸ್ಪರ್ಧೆಗಳು ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು, ಅವರಿಗೆ ಸೂಕ್ತ ವೇದಿಕೆ ಕಲ್ಪಿಸಲು ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡುತ್ತವೆ. ಕ್ರೀಡಾಪಟುಗಳಿಗೆ ಅಗತ್ಯವಾದ ಪ್ರೋತ್ಸಾಹ, ತರಬೇತಿ ಮತ್ತು ಅವಕಾಶಗಳನ್ನು ಕಲ್ಪಿಸುವುದು ಸಮಾಜದ ಜವಾಬ್ದಾರಿಯೂ ಆಗಿದೆ. ಕ್ರೀಡಾ ಸಂಘಟನೆಗಳು, ತರಬೇತುದಾರರು, ಪೋಷಕರು ಮತ್ತು ಸಾರ್ವಜನಿಕರು ಯುವ ಪ್ರತಿಭೆಗಳನ್ನು ಬೆಂಬಲಿಸಬೇಕು ಎಂದವರು ನುಡಿದರು.


ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್‌, ಸೂಡಾ ಅಧ್ಯಕ್ಷ ಮಧುಸೂದನ್‌, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೀಶ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಮಾರುತಿ, ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *