ಮಂಜುನಾಥ್ ಶೆಟ್ಟಿ…

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕೆಂಬುದು ನಮ್ಮ ಸರಕಾರದ ಧೋರಣೆ. ಅದಕ್ಕಾಗಿ 1995 ರಿಂದಲೂ ನಮ್ಮ ರಾಜಕಾರಣಿಗಳು ವೇದಿಕೆಯ ಮೇಲೆ ಮಾತಾಡಿದ್ದು ಮಾತಾಡಿದೆ. ಆದರೆ 1995 ರಿಂದೀಚೆಗೆ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡುವತ್ತ ಯಾರೂ ಮುಂದೆ ಬರಲಿಲ್ಲ. ಆದರೆ ಆ ಕೊರತೆಯನ್ನು ನೀಗಿಸಿದ ನಮ್ಮ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪನವರು ಅಭಿನಂದನಾರ್ಹರು.

ಸಹಸ್ರಾರು ಮಂದಿ ಶಿಕ್ಷಕರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಅವರ ಆತಂಕವೀಗ ಕೊನೆಗೊಳ್ಳುತ್ತಿರುವುದು ಸಂತೋಷದ ವಿಚಾರ.
ನಮ್ಮ ಲೋಕಪ್ರಿಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಇತ್ತೀಚೆಗೆ ಎಲ್ಲ ವೇದಿಕೆಯಲ್ಲೂ ಕನ್ನಡ ಶಾಲೆಗಳಿಗೆ ಅನುದಾನ ಕೊಡಿಸುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳುತ್ತಿದ್ದರು. ಇತ್ತೀಚಿಗೆ ವಿಧಾನಸಭೆಯಲ್ಲಿ ಮಾತನಾಡುತ್ತಾ ಕನ್ನಡವೇ ನನ್ನ ಉಸಿರು ನನ್ನ ದೇಹದಲ್ಲಿ ಹರಿಯುವುದು ಕನ್ನಡದ ರಕ್ತ ಎಂದು ಅಬ್ಬರಿಸಿದ್ದರು ಇದು ಕೇವಲ ವೇದಿಕೆಯ ಘೋಷಣೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೇ ನವೆಂಬರ್ ಒಂದರಂದು ಕನ್ನಡಾಭಿಮಾನಿ ಮುಖ್ಯಮಂತ್ರಿಗಳು ಸ್ವತಃ 1995ರ ನಂತರ ಪ್ರಾರಂಭವಾದ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಲಾಗುವುದೆಂದು ಘೋಷಿಸಿದಾಗ, ಎಷ್ಟೋ ಜನ ನಿರಾಶೆಗೊಂಡಿದ್ದ ಶಿಕ್ಷಕರ ಮೊಗವರಳಿತು. ಇಂತಹ ಒಂದು ಐತಿಹಾಸಿಕ ನಿರ್ಧಾರ ಕೈಗೊಳ್ಳುವುದರ ಹಿಂದೆ ನಮ್ಮ ಹೆಮ್ಮೆಯ ಶಿಕ್ಷಣ ಸಚಿವರಾದ ಮಧುಬಂಗಾರಪ್ಪನವರ ಅವಿರತ ಪ್ರಯತ್ನ ಪ್ರಮುಖ ಪಾತ್ರ ವಹಿಸಿದೆ ಎಂದರೆ ಅತಿಶಯೋಕ್ತಿಯಲ್ಲ ಈ ಸಂದರ್ಭದಲ್ಲಿ ಅವರ ತಂದೆ ಎಸ್. ಬಂಗಾರಪ್ಪನವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಕನ್ನಡದ ಹಿರಿಮೆಯ ಬೆಳವಣಿಗೆಗಾಗಿ ಕೈಗೊಂಡ ನಿರ್ಧಾರಗಳು ನಾವು ಸ್ಮರಿಸಬೇಕು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಹಾಗೂ ಸರ್ಕಾರಿ ಕಡತಗಳಿಗೆ ಕನ್ನಡದಲ್ಲಿ ಟಿಪ್ಪಣಿ ಬರೆಯಲು ಆದೇಶಿಸಿದರು, ತಂದೆಯಂತೆ ಇಂದು ಮಗನು ಕೂಡ ಕನ್ನಡ ಶಾಲೆಗಳ ಉಳಿವಿಗೆ ಕೈಗೊಂಡ ಐತಿಹಾಸಿಕ ನಿರ್ಧಾರ ಇಡೀ ನಾಡಿನ ಜನತೆ ಪ್ರಶಂಸುತ್ತಿದೆ.

ತಮ್ಮ ರಕ್ತದಲ್ಲಿಯೇ ಕನ್ನಡವಿದೆ ಎಂದು ಆಗಾಗ್ಗೆ ಹೇಳುತ್ತಿದ್ದ ಪ್ರೇಮಿಗಳು ಆದಷ್ಟೂ ಸಾಬೀತು ಮಾಡಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಆಗಿ ಹೋದ ಮುಖ್ಯಮಂತ್ರಿಗಳಾಗಲಿ, ಶಿಕ್ಷಣ ಸಚಿವರುಗಳಾಗಲೀ ಇಂತಹ ನಿರ್ಧಾರಕ್ಕೆ ಮುಂದಾಗಿರಲಿಲ್ಲ. ಇಂದು ಈ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ನಿಶ್ಚಿಂತರಾಗಿ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಿಂದ ಚುನಾಯಿತರಾದ ವಿಧಾನ ಪರಿಷತ್ ಸದಸ್ಯರೂ ಸಹ ಚುನಾವಣಾ ಸಮಯದಲ್ಲಿ ಮಾತ್ರ ಪೊಳ್ಳು ಆಶ್ವಾಸನೆ ನೀಡಿ ಮತಗಳಿಗಾಗಿ ದುಂಬಾಲು ಬೀಳುತ್ತಿದ್ದರು.
ಆ ನಂತರ ಈ ಸಮಸ್ಯೆಯ ಪರಿಹಾರಕ್ಕೆ ಯಾವ ಪ್ರಯತ್ನವನ್ನೂ ಸಮರ್ಥವಾಗಿ ಮಾಡುತ್ತಿರಲಿಲ್ಲ. ಈ ನಡುವೆ ಅನುದಾನ ರಹಿತ ಶಿಕ್ಷಕರು ಮುಷ್ಕರ ಮಾಡಿ, ಹಲವು ಬಾರಿ ಮನವಿ ಪತ್ರ ನೀಡಿ, ಒತ್ತಾಯಿಸುತ್ತಲೇ ಇದ್ದರು. ಇವರ ನೈಜವಾದ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದು ಒತ್ತಡ ಹೇರುವಲ್ಲಿ ಅನೇಕ ಪತ್ರಕರ್ತ ಮಿತ್ರರೂ ಸಹ ಕೈಜೋಡಿಸಿದ್ದು ಶ್ಲಾಘನೀಯ ವಿಚಾರ. ಎಷ್ಟೋ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿಯವರು ಕಳೆದ 30 ವರ್ಷಗಳಿಂದ ಕನ್ನಡ ಸೇವೆ ಮಾಡುತ್ತಾ ಕಷ್ಟ ನಷ್ಟಗಳನ್ನು ಅನುಭವಿಸುತ್ತಾ ಶಾಲೆಗಳನ್ನು ನಡೆಸುತ್ತಾ ಬಂದು ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ನಿರ್ಧಾರಕ್ಕೆ ಬರಲು ಚಿಂತಿಸುತ್ತಿದ್ದ ಈ ಸಮಯದಲ್ಲಿ ಮುಖ್ಯಮಂತ್ರಿಗಳ ಈ ನಿರ್ಧಾರ ಹೊಳೆಯುವ ಬೆಳಕಾಗಿ ಪರಿಣಮಿಸಿದೆ.
ಹೀಗಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಸಹ ಸರ್ಕಾರಕ್ಕೆ ಕೃತಜ್ಞರಾಗಿದ್ದಾರೆ. ಆದಷ್ಟು ಬೇಗ ಸರ್ಕಾರಿ ಆದೇಶವನ್ನು ಹೊರಡಿಸಿ, ಈ ನವೆಂಬರ್ ತಿಂಗಳು ನಿಜವಾಗಿಯೂ ಕನ್ನಡದ ಹಬ್ಬವಾಗಿ ಆಚರಿಸಲು ಸರ್ಕಾರ ಅನುವು ಮಾಡಿಕೊಡಬೇಕು. ಅಷ್ಟೇ ಅಲ್ಲ, ಖಾಸಗಿ ಶಾಲೆಗಳ ಇನ್ನಿತರ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಪ್ರತಿವರ್ಷ ಶಾಲೆಗಳಿಗೆ ಮಾನ್ಯತೆ ನವೀಕರಣ ಷರತ್ತುಗಳನ್ನು ಸರಳೀಕರಿಸಬೇಕು. ಇದರ ಜೊತೆ ಈಗ ಹೊಸದಾಗಿ ಅಗ್ನಿಶಾಮಕದಳದ ವತಿಯಿಂದ ಪ್ರಮಾಣ ಪತ್ರ, ಲೋಕೋಪಯೋಗಿ ಇಲಾಖೆಯಿಂದ ಕಟ್ಟಡ ಸುರಕ್ಷತೆ ಬಗ್ಗೆ ಪ್ರಮಾಣ ಪತ್ರ ಪಡೆಯಬೇಕು ಎಂಬ ಆದೇಶ ಅನೇಕ ಶಾಲೆಗಳ ಪಾಲಿಗೆ ಹೊರೆಯಾಗುತ್ತದೆ. ಆದ್ದರಿಂದ ಈ ಷರತ್ತುಗಳನ್ನು ಪಾಲಿಸಲು ಕನ್ನಡ ಮಾಧ್ಯಮ ಶಾಲೆಗಳಿಗೆ ಇನ್ನಷ್ಟು ಕಾಲ ಸಮಯಾವಕಾಶ ನೀಡುವ ಅಗತ್ಯತೆಯೂ ಇದೆ.
1995ರಿಂದ ಇತ್ತೀಚೆಗೆ ಪ್ರಾರಂಭವಾದ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಕೊಡಿಸಲು ಶಿಕ್ಷಕರು ಮಾಡಿದ ಪ್ರಯತ್ನವಲ್ಲ, ಬೆಂಗಳೂರು ಚಲೋ, ಬೆಳಗಾವಿ ಚಲೋ, ಅಮರಣಾಂತ ಉಪವಾಸ, ಶಿಕ್ಷಣ ಸಚಿವರಿಗೆ ಗೋಗರೆದು, ಅತ್ತೂ ಕರೆದು ಮನವಿ ಮಾಡಿದ ಪರಿಣಾಮವಾಗಿ, ಸಹೃದಯಿಗಳು, ಅಪ್ಪಟ ಕನ್ನಡ ಪ್ರೇಮಿಗಳು ಆದ ನಮ್ಮ ರಾಜ್ಯದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ನುಡಿದಂತೆ ನಡೆದಿದ್ದಾರೆ. ಎಲ್ಲ ಶಿಕ್ಷಕರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಅಧಿಕಾರ ದೊರೆತು, ರಾಜ್ಯದಲ್ಲಿ ಕನ್ನಡ ಡಿಂಡಿಮ ಇನ್ನೂ ಹೆಚ್ಚಾಗಿ ಚಿರಾಯುವ ಕಾಲ ಬರಲಿ ಎಂದು ಎಲ್ಲರೂ ಮನದುಂಬಿ ಹಾರೈಸುತ್ತಿದ್ದಾರೆ.
ಎಷ್ಟೋ ಕಡೆ 25-30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಧೃವೀಕರಣಗೊಂಡ ಶಿಕ್ಷಕರು, ತಮ್ಮ ಸಂಸಾರ ಸಾಗಿಸುವುದು ಹೇಗೆ ಎಂದು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಪ್ರಿಯ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಶಿಕ್ಷಣ ಸಚಿವರು ಅಭಿನಂದನಾರ್ಹರು.

ಲೇಖನ: ಎಂ.ಎನ್. ಸುಂದರ್ ರಾಜ್.

Leave a Reply

Your email address will not be published. Required fields are marked *