ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ಕಲ್ಪನಾಶಕ್ತಿ ಹೊಸ ಆಲೋಚನೆಗಳಿಗೆ ಜೀವ ತುಂಬಿದರೆ, ಆತ್ಮವಿಶ್ವಾಸ ಅವುಗಳನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತದೆ. ಆದರೆ ಗೆಲುವಿಗೆ ಅರ್ಥಪೂರ್ಣ ಮೌಲ್ಯ ತಂದುಕೊಡುವುದು ಉತ್ತಮ ವ್ಯಕ್ತಿತ್ವ ಎಂದು ವಿಧಾನಪರಿಷತ್ತಿನ ಸದಸ್ಯರಾದ ಡಾ. ಧನಂಜಯ ಸರ್ಜಿ ಹೇಳಿದರು.

ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ ‘ಕೌಶಲ್ಯ-3.0’ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ವಿದ್ಯೆ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ. ಕಾಲ ಬದಲಾದಂತೆ ಜ್ಞಾನದ ಸ್ವರೂಪವೂ ಬದಲಾಗುತ್ತಿದೆ. ಒಂದು ಕಾಲದಲ್ಲಿ ಜ್ಞಾನ ಮಸ್ತಕದಲ್ಲಿದ್ದರೆ, ಇಂದು ಅದು ತಂತ್ರಜ್ಞಾನದ ವಿಶಾಲ ಲೋಕದಲ್ಲಿ ಹುದುಗಿದೆ. ತಂತ್ರಜ್ಞಾನ ಮತ್ತು ಜೀವನ ಪದ್ದತಿಯ ಒಲವು ಬದಲಾಗುವಂತೆ, ನಮ್ಮ ಕೌಶಲ್ಯಗಳೂ ವಿಕಸನಗೊಳ್ಳಬೇಕು ಎಂದರು.

ಪ್ರತಿಯೊಂದು ಸಾಧನೆಯ ಮೊದಲ ಹೆಜ್ಜೆ ಕಲ್ಪನಾಶಕ್ತಿಯಿಂದಲೇ ಆರಂಭವಾಗುತ್ತದೆ. ಮನಸ್ಸಿನಲ್ಲಿ ಮೂಡುವ ಕನಸುಗಳಿಗೆ ಸ್ಪಷ್ಟ ಗುರಿ ನೀಡಿ, ಅವುಗಳನ್ನು ಸಾಕಾರಗೊಳಿಸುವ ಸಂಕಲ್ಪ ಬೆಳೆಸಿಕೊಳ್ಳಬೇಕು.

ಇಂದಿನ ಯುವಜನತೆಯಲ್ಲಿ ಆತ್ಮವಿಶ್ವಾಸದ ಜೊತೆಗೆ ಉತ್ತಮ ವ್ಯಕ್ತಿತ್ವ, ಪರಸ್ಪರ ನಂಬಿಕೆ, ಸೌಜನ್ಯ ಮತ್ತು ಮಾನವೀಯ ಮೌಲ್ಯಗಳು ಅರಳಬೇಕು. ವಿದ್ಯಾರ್ಥಿಗಳಲ್ಲಿರುವ ವಿಭಿನ್ನ ಆಲೋಚನೆಗಳು ಮತ್ತು ಸುಪ್ತ ಪ್ರತಿಭೆಗಳು ಆತ್ಮವಿಶ್ವಾಸದಿಂದ ಅಭಿವ್ಯಕ್ತಗೊಳ್ಳಲು ಇಂತಹ ವೇದಿಕೆಗಳು ಅತ್ಯುತ್ತಮ ಅವಕಾಶ ಕಲ್ಪಿಸುತ್ತವೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಅಂಕಗಳು ಶೈಕ್ಷಣಿಕ ಸಾಧನೆಯ ಮಾನದಂಡವಾಗಬಹುದೇ ಹೊರತು, ಬದುಕಿನ ಯಶಸ್ಸಿನ ಏಕೈಕ ಅಳತೆಯಲ್ಲ. ಅಂಕಗಳಾಚೆಗಿನ ಕೌಶಲ್ಯಗಳೇ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕುತ್ತವೆ. ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಅದರ ಬಗ್ಗೆ ಆಳವಾದ ಜ್ಞಾನ ಸಂಪಾದಿಸುವುದು ಮುಖ್ಯ. ಜ್ಞಾನ, ಕೌಶಲ್ಯ ಮತ್ತು ವೃತ್ತಿಪರತೆ ಇವು ಸಾಧನೆಯ ಸರಪಳಿಯ ಕೊಂಡಿಗಳಿದ್ದಂತೆ. ಇಂತಹ ವೇದಿಕೆಗಳು ವಿದ್ಯಾರ್ಥಿಗಳು ತಮ್ಮೊಳಗಿನ ಪ್ರತಿಭೆ ಮತ್ತು ಸಾಮರ್ಥ್ಯವನ್ನು ವಿಮರ್ಶಿಸಿಕೊಳ್ಳಲು ನೆರವಾಗುತ್ತವೆ ಎಂದರು.

ಎನ್ಇಎಸ್ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ, ನಿರ್ದೇಶಕ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಹಿರಿಯ ವಿದ್ಯಾರ್ಥಿಗಳಾದ ಉದ್ಯಮಿ ಟಿ.ಆರ್. ಗಗನ್ ಹಾಗೂ ಗಾಯಕಿ ಚಾರ್ವಿ ಮುರಳೀಧರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಯೋಜಕರಾದ ಅರುಣ್ ಕುಮಾರ್ ಎಂ.ಎಸ್. ಉತ್ಸವದ ಆಶಯಗಳನ್ನು ವಿವರಿಸಿದರು. ಪ್ರಾಂಶುಪಾಲರಾದ ಡಾ. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಸುಜಾತ.ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ವಿವಿಧ ಸ್ಪರ್ಧೆಗಳಲ್ಲಿ ಪ್ರತಿಭೆಗಳ ಕಲರವ

‘ಕೌಶಲ್ಯ-3.0’ ಉತ್ಸವದಲ್ಲಿ ಹತ್ತುಕ್ಕೂ ಹೆಚ್ಚು ವೈವಿಧ್ಯಮಯ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಮೊಬೈಲ್ ಫೋಟೋಗ್ರಫಿ, ಏಕವ್ಯಕ್ತಿ ಗಾಯನ, ಸಮನ್ವಯ, ಸವ್ಯಸಾಚಿ, ರಸಪ್ರಶ್ನೆ, ಚಿತ್ರಕಲೆ, ಸಮೂಹ ನೃತ್ಯ, ಮುಖಚಿತ್ರ, ಫ್ಯಾಷನ್ ಶೋ, ವಾಲಿಬಾಲ್ ಹಾಗೂ ಥ್ರೋಬಾಲ್ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಮೆರೆದರು. ವಿವಿಧ ಪದವಿಪೂರ್ವ ಕಾಲೇಜುಗಳ 550 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.


Leave a Reply

Your email address will not be published. Required fields are marked *