ಮಂಜುನಾಥ್ ಶೆಟ್ಟಿ…

ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ , ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ನಗರದ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ದಿನಾಂಕ 05-11-2026 ರಂದು ಆಯೋಜಿಸಲಾಗಿದ್ದ “ಬೆಂಗಳೂರು ಸ್ಕಿಲ್ ಸಮ್ಮಿಟ್ 2026” ಕಾರ್ಯಕ್ರಮದಲ್ಲಿ ಶಿವಮೊಗ್ಗ ಸರ್ಕಾರದ ಜಿಟಿಟಿಸಿ ಕೇಂದ್ರದ ಹೆಚ್. ಪಿ. ನಾಗರಾಜ್ ಅವರಿಗೆ “ಕರ್ನಾಟಕದ ಅತ್ಯುತ್ತಮ ತರಬೇತುದಾರ” ಪ್ರಶಸ್ತಿ ನೀಡಿ ಗೌರವಿಸಲಾಯಿತು.ಎಸ್ ಡಿ ಇ ಎಲ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಸುಬೋಧ್ ಯಾದವ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾದ ಈ ಶೃಂಗಸಭೆಯನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದ ಗೌರವಾನ್ವಿತ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರು ಸರ್ಕಾರದ ಭವಿಷ್ಯದ ಯೋಜನೆ ಹಾಗೂ ಆಶಯಗಳನ್ನು ವ್ಯಕ್ತಪಡಿಸಿದರು. “ಸರ್ಕಾರವಾಗಿ ನಮ್ಮ ಜವಾಬ್ದಾರಿ ಯುವಜನರನ್ನು ಇಂದಿನ ಉದ್ಯೋಗಗಳಿಗೆ ಸಿದ್ಧಪಡಿಸುವುದು ಮಾತ್ರವಲ್ಲ, ನಾಳೆ ಹೊರಹೊಮ್ಮುವ ಹೊಸ ಅವಕಾಶಗಳಿಗೆ ತಕ್ಕಂತೆ ಅವರನ್ನು ಸಜ್ಜುಗೊಳಿಸುವುದಾಗಿದೆ” ಎಂದು ಅವರು ಹೇಳಿದರು.


ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದ್ದ “ಕೌಶಲ್ಯ ಕರ್ನಾಟಕ ಪ್ರಶಸ್ತಿಗಳು” ವಿಭಾಗದಲ್ಲಿ ರಾಜ್ಯದ ಅತ್ಯುತ್ತಮ ತರಬೇತಿ ಸಂಸ್ಥೆಗಳು, ಅತ್ಯುತ್ತಮ ಐಟಿಐ ಹಾಗೂ ಜಿಟಿಟಿಸಿ ಕೇಂದ್ರಗಳನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಶಿವಮೊಗ್ಗ ಜಿಟಿಟಿಸಿ ಕೇಂದ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹೆಚ್. ಪಿ. ನಾಗರಾಜ್ ಅವರಿಗೆ ಗೌರವಾನ್ವಿತ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರು ಅತ್ಯುತ್ತಮ ತರಬೇತುದಾರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.


ಈ ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಿವಕಾಂತಮ್ಮ (ಕಾಂತ) ನಾಯಕ್, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಇ. ವಿ. ರಮಣ ರೆಡ್ಡಿ , ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿದ್ದಲಿಂಗಪ್ಪ ಬಿ. ಪೂಜಾರಿ, ಎಸ್ ಡಿ ಇ ಎಲ್ ಪ್ರಧಾನ ಕಾರ್ಯದರ್ಶಿ ಸುಬೋಧ್ ಯಾದವ್ , ಕೆ ಎಸ್ ಡಿ ಸಿ ಹೆಚ್ ಮತ್ತು ಕೆ ಬಿ ಟಿ ಹೆಚ್ ಸಿ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರವಿ ಎಂ. ತಿರ್ಲಾಪುರ್ ಹಾಗೂ ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರಾದ ಶ್ರೀಮತಿ ಶಿಲ್ಪಾ ಎಂ. ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *