ಶಿವಮೊಗ್ಗ: ಇತ್ತಿಚೀನ ದಿನಗಳಲ್ಲಿ ಯುವತಿಯರಲ್ಲಿ ಅತಿ ಹೆಚ್ಚು ಕಾಣುತ್ತಿರುವ ಸ್ತನದ ಕ್ಯಾನ್ಸರ್ ಬಗ್ಗೆ ಸಕಾಲದಲ್ಲಿ ತಪಾಸಣೆ ಒಳಪಟ್ಟರೆ ಪ್ರಾರಂಭಿಕ ಹಂತದಲ್ಲಿ ಗುಣಪಡಿಸಬಹುದು ಹಾಗೂ ಕಾಯಿಲೆಯಿಂದ ದೂರವಿರಬಹುದು ಎಂದು ನಗರದ ಶಿವಮೊಗ್ಗ ಡಯಾಗ್ನಾಸ್ಟಿಕ್ ವೈದ್ಯೆ ಡಾ. ಕೌಸ್ತುಭ ಅರುಣ್ ಹೇಳಿದರು.

ರಾಜೇಂದ್ರನಗರದ ರೋಟರಿ ಶಾಲೆಯ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ವತಿಯಿಂದ ಮಹಿಳೆಯರು, ಶಿಕ್ಷಕಿಯರು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ತನ ಕ್ಯಾನ್ಸರ್ ಕಾಯಿಲೆಗೆ ಮುಖ್ಯವಾಗಿ ಸರಿಯಾದ ಜೀವನಶೈಲಿ ಪಾಲಿಸದೇ ಇರುವುದು, ದೈಹಿಕ ಚಟುವಟಿಕೆ ಇಲ್ಲದಿರುವುದು, ಮಕ್ಕಳಿಗೆ ತಾಯಿಯ ಎದೆ ಹಾಲು ಉಣಿಸಲು ವಂಚಿಸುವುದು ಪ್ರಮುಖ ಕಾರಣವಾಗಿದೆ. ಆದ್ದರಿಂದ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ತಪಾಸಣೆಯಲ್ಲಿ ಕ್ಯಾನ್ಸರ್ ರೋಗ ಲಕ್ಷಣ ಕಂಡುಬಂದರೆ ಮೆಮೊಗ್ರಾಫಿ ಮಾಡಿಸುವುದು ಒಳ್ಳೆಯದು. ಇತ್ತಿಚೀನ ಆರೋಗ್ಯ ಸಂಸ್ಥೆ ವರದಿ ಪ್ರಕಾರ 40 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣ ಪತ್ತೆ ಆಗುತ್ತಿದ್ದು, ಸಾವಿನ ಪ್ರಮಾಣವು ಜಾಸ್ತಿ ಆಗಿದೆ ಎಂದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಹಿಳೆಯರು ಪ್ರಶ್ನೆಗಳಿಗೆ ಕೌಸ್ತುಭ ಅರುಣ್ ಅವರು ಉತ್ತರಿಸಿದರು.
ಆರೋಗ್ಯ ಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಮಹಿಳೆಯರು ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ರೋಗ ಲಕ್ಷಣಗಳು ಕಂಡುಬAದಲ್ಲಿ ಕೂಡಲೇ ತಪಾಸಣೆ ನಡೆಸಿ ವೈದ್ಯರ ಸಲಹೆ ಪಡೆಯಬೇಕು. ಮುಂದಿನ ದಿನಗಳಲ್ಲಿ ಮಹಿಳಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಜಾಗೃತಿ ಶಿಬಿರ ನಡೆಸಲಾಗುವುದು ಎಂದು ಹೇಳಿದರು.

ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಮಧುರಾ ಮಹೇಶ್, ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ಡಾ. ಅರುಣ್, ನಾಗವೇಣಿ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಕೇಶವಪ್ಪ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…