ಶಿವಮೊಗ್ಗ: ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರ ಸಂಘದ ಶಿವಮೊಗ್ಗ ತಾಲೂಕು ಘಟಕದ ವತಿಯಿಂದ ಜಾಗೃತಿ ಜಾಥಾ ನಡೆಸಿ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಯಿತು.

ನೂತನ ಪಿಂಚಣಿ ಯೋಜನೆಯು ಅತ್ಯಂತ ಕೆಟ್ಟ ಯೋಜನೆಯಾಗಿದ್ದು, ಸರ್ಕಾರಿ ನೌಕರರ ನಿವೃತ್ತಿ ಜೀವನಕ್ಕೆ ಮಾರಕವಾಗಿದೆ. ನಿವೃತ್ತಿ ಜೀವನದ ಸಮಯದಲ್ಲಿ ಅತ್ಯಂತ ಹೀನ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಆಳಲು ತೋಡಿಕೊಂಡರು.
ಎನ್‌ಪಿಎಸ್‌ ರದ್ದುಗೊಳಿಸುವುದು ಕೇಂದ್ರ ಸರ್ಕಾರದ ನಿರ್ಧಾರ ಹಾಗೂ ರಾಜ್ಯ ಸರ್ಕಾರಗಳಿಗೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಇತ್ತು. ಆದರೆ 2022ರ ರಾಜ್ಯ ಬಜೆಟ್‌ನಲ್ಲಿ ರಾಜಸ್ತಾನ ಹಾಗೂ ಚತ್ತೀಸ್ ಘಡ, ಜಾರ್ಖಂಡ್,ಪಂಜಾಬ್ ರಾಜ್ಯ ಸರ್ಕಾರಗಳು ಎನ್‌ಪಿಎಸ್‌ ರದ್ದು ಮಾಡಿ ಆದೇಶಿಸಿವೆ. ಪ್ರಸ್ತುತ ಹಿಮಾಚಲ ಪ್ರದೇಶದ ಹೊಸ ಸರ್ಕಾರ NPS ರದ್ದತಿ ಮಾಡುವ ಘೋಷಣೆ ಮಾಡಿದ್ದು, ಈಗ ಕರ್ನಾಟಕ ರಾಜ್ಯದಲ್ಲಿಯೂ ನೂತನ ಪಿಂಚಣಿ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಅನುಷ್ಠಾನ ಗೊಳಿಸಬೇಕು ಎಂದು ಆಗ್ರಹಿಸಿದರು.

ನಾಲ್ಕು ಲಕ್ಷ ಎನ್‌ಪಿಎಸ್‌ ನೌಕರರು ಹಾಗೂ ಅವಲಂಬಿತ ಕುಟುಂಬ ಸದಸ್ಯರು ರಾಜ್ಯಮಟ್ಟದಲ್ಲಿ ಡಿಸೆಂಬರ್ 19ರಿಂದದ ಬೃಹತ್ ಅನಿರ್ಧಿಷ್ಟ ಅವಧಿ ಹೋರಾಟ ನಡೆಸಲಿದ್ದೇವೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. ಹಳೇ ಪಿಂಚಣಿ ಯೋಜನೆಯನ್ನು ಅನುಷ್ಠಾನ ಮಾಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿ ಮೇಯರ್ ಎಸ್.ಶಿವಕುಮಾರ್ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ನಂತರ ಜಿಲ್ಲಾಧಿಕಾರಿಗಳ ಕಛೇರಿವರೆಗೂ ಪಾದಾಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ಶಾಸಕರಾದ ಶ್ರೀ ಕೆ ಎಸ್ ಈಶ್ವರಪ್ಪ ಹಾಗೂ ಆಯನೂರು ಮಂಜುನಾಥರವರಿಗೆ ಮನವಿ ಸಲ್ಲಿಸಲಾಯಿತು. ಈ ಜಾಥಾದಲ್ಲಿ ಶಿವಮೊಗ್ಗ ತಾಲ್ಲೂಕಿನ ಎಲ್ಲಾ ಇಲಾಖೆಯ ಸುಮಾರು ಒಂದುವರೆ ಸಾವಿರ ಸಂಖ್ಯೆಯಲ್ಲಿ ನೌಕರರು ಭಾಗವಹಿಸಿ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ರಾಘವೇಂದ್ರ, ತಾಲೂಕು ಅಧ್ಯಕ್ಷ ಎಸ್.ಪ್ರಭಾಕರ್, ತಾಲೂಕು ಗೌರವ ಅಧ್ಯಕ್ಷ ಡಾ. ನಾಗರಾಜ್ ಪರಿಸರ, ಗೋವಿಂದರಾಜು, ಡಾ. ಹಾಲಮ್ಮ, ಶರತ್‌ ಕುಮಾರ್‌, ಕಿರಣ್.ಜಿ.ಜೆ, ವಿಜಯ್‌ ಕುಮಾರ್‌ ಬಿ ಟಿ.ಹೂವ್ಯಾ ನಾಯ್ಕ ,ರಂಗನಾಥ ಎ ಸೇರಿದಂತೆ ವಿವಿಧ ತಾಲೂಕುಗಳಿಂದ ಎನ್‌ಪಿಎಸ್‌ ನೌಕರರು ಆಗಮಿಸಿ ಪ್ರತಿಭಟನೆ ಹಾಗೂ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಕೋಟ್
ಹಳೇ ಪಿಂಚಣಿ ಹೋರಾಟ ಅತ್ಯಂತ ನ್ಯಾಯಸಮ್ಮತ. ವಿಧಾನ ಮಂಡಲದ ಕಲಾಪದಲ್ಲಿ ಧ್ವನಿ ಎತ್ತುವ ಕೆಲಸ ನಾನು ಮಾಡುತ್ತೇನೆ. ನೌಕರರ ಬದುಕನ್ನು ಸಂಕಷ್ಟಕ್ಕೆ ದೂಡುವ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಲು ಸಂಪೂರ್ಣ ಶ್ರಮಿಸುತ್ತೇನೆ ಎಂದು ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಹೇಳಿದರು.

ಬೆಂಗಳೂರಿನಲ್ಲಿ ಡಿಸೆಂಬರ್ 19ಕ್ಕೆ ಮಾಡು ಇಲ್ಲವೇ ಮಡಿ ಹೋರಾಟ…

ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಡಿಸೆಂಬರ್ 19ರಿಂದ ಎನ್‌ಪಿಎಸ್‌ ನೌಕರರಿಂದ “ಮಾಡು ಇಲ್ಲವೆ ಮಡಿ” ಹೋರಾಟ ನಡೆಯಲಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಎನ್‌ಪಿಎಸ್‌ ಸಂಘ 2014ರಿಂದ ಹೋರಾಟ ಆರಂಭಿಸಿ ಈವರೆಗೂ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ, ಪೋಸ್ಟ್ ಕಾರ್ಡ್ ಅಭಿಯಾನ, ರಾಷ್ಟ್ರೀಯ ವಿಚಾರ ಸಂಕಿರಣ, ಫ್ರೀಡಂ ಪಾರ್ಕ್ ಚಲೋ, ರಕ್ತ ಕೊಟ್ಟೇವು ಪಿಂಚಣಿ ಬಿಡೆವು, ಪಾರ್ಲಿಮೆಂಟ್ ಚಲೋ, ಬೆಳಗಾವಿ ಚಲೋ, ಪ್ರತಿಭಟನಾ ಜಾಥಾ ಹಾಗೂ ಧರಣಿ ನಡೆಸಿದೆ. ಆದರೂ ನಮ್ಮ ಬೇಡಿಕೆ ಈಡೇರಿಲ್ಲ. ಆದ್ದರಿಂದ ಡಿಸೆಂಬರ್ 19ರಿಂದ ಮಾಡು ಇಲ್ಲವೇ ಮಡಿ ಹೋರಾಟ ನಡೆಯಲಿದೆ.

ವರದಿ ಪ್ರಜಾಶಕ್ತಿ…