ಮಂಜುನಾಥ್ ಶೆಟ್ಟಿ…

11 ನಿರ್ಣಯಗಳೊಂದಿಗೆ ಜಿಲ್ಲಾ‌ 20 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

ಮಾನವೀಯ ಗುಣಗಳನ್ನು ಬಿತ್ತಲು ನೀತಿ ವಿಜ್ಞಾನ ಕಲಿಕೆ

ಶಿವಮೊಗ್ಗ: ಎಳೆಯ ಮನಸ್ಸುಗಳಲ್ಲಿ ಕಣ್ಮರೆಯಾಗುತ್ತಿರುವ ಸಂಸ್ಕೃತಿ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಬಿತ್ತಲು, ಶಾಲೆಗಳಲ್ಲಿ ನೀತಿ ವಿಜ್ಞಾನ ಕಲಿಕೆ ಪ್ರಾರಂಭಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಹೇಳಿದರು.

ನಗರದ ಸಾಹಿತ್ಯ ಗ್ರಾಮದಲ್ಲಿ ನಡೆದ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಮಕ್ಕಳಲ್ಲಿ ಮಾನವೀಯ ಗುಣಗಳು ಕಣ್ಮರೆಯಾಗುತ್ತಿರುವುದು ಆತಂಕದ ಸಂಗತಿ. ಹಿರಿಯರಿಗೆ, ಪೋಷಕರಿಗೆ, ಶಿಕ್ಷಕರಿಗೆ ಗೌರವ ನೀಡುವಂತಹ ಸಂಸ್ಕಾರವನ್ನು ಮರೆಯುತಿದ್ದಾರೆ. ಈ ಹಿನ್ನಲೆಯಲ್ಲಿ ನೀತಿ ವಿಜ್ಞಾನ ಕಲಿಸುವ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಪೂರಕ ಪಠ್ಯಕ್ರಮವನ್ನು ಉಚಿತವಾಗಿ ವಿತರಿಸಲಾಗುವುದು.

ಸಾಹಿತಿಗಳ‌ ಬಗ್ಗೆ ಬಂಗಾರಪ್ಪ ಅವರಿಗೆ ಅಪಾರ ಗೌರವವಿತ್ತು. ನನಗೆ ಸರಿಯಾದ ಕನ್ನಡ ಬರುವುದಿಲ್ಲ ಎಂಬ ಟೀಕೆಗಳು ತುಂಬಾ ಬೇಸರ ಮೂಡಿಸಿತ್ತು. ನಮ್ಮ ರಕ್ತದಲ್ಲಿ ಕನ್ನಡವಿದೆ. ಪೋಷಕರಿಗೆ ಇಂಗ್ಲೀಷ್ ಮಾಧ್ಯಮದ ವ್ಯಾಮೋಹ ಜಾಸ್ತಿಯಿದೆ. ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೆಯಿಲ್ಲ. ನಿಜವಾದ ಉತ್ತಮ ಶಿಕ್ಷಕರು ಇರುವುದು ಸರ್ಕಾರಿ ಶಾಲೆಗಳಲ್ಲಿ. ಅದರೇ ಸಮಾಜದಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಯಾವುದೇ ತಾತ್ಸಾರ ಬೇಡ.

ಡಿಜಿಟಲ್ ಕ್ಷೇತ್ರದಲ್ಲಿ ಕನ್ನಡದ ಬಳಕೆ ಹೆಚ್ಚಾಗುವಂತಹ ಯೋಜನೆಗಳನ್ನು ಸರ್ಕಾರದಿಂದ ರೂಪಿಸುತ್ತೇವೆ. ಭಾಷೆಗೆ ಪರಿಣಾಮಕಾರಿಯಾಗಿ ಕಲಿಸಲು, ಯಾವುದೇ ನಾವೀನ್ಯ ಯೋಚನೆಗಳನ್ನು ಮುಕ್ತವಾಗಿ ಸ್ವೀಕರಿಸುತ್ತೇವೆ ಎಂದು ಹೇಳಿದರು.


ಸಮ್ಮೇಳನಕ್ಕೆ 1.5 ಲಕ್ಷ ದೇಣಿಗೆ ಘೋಷಣೆ…

ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂಘಟನೆಗೆ ಅನುಕೂಲವಾಗುವಂತೆ ನನ್ನ ವೈಯುಕ್ತಿಕ ಸಂಬಳದಲ್ಲಿ 1.5 ಲಕ್ಷ ದೇಣಿಗೆ ನೀಡಲಾಗುವುದು ಎಂದು ಮಧು ಬಂಗಾರಪ್ಪ ಘೋಷಿಸಿದರು.


ಹಿರಿಯ ಸಾಹಿತಿ ಡಾ.ಎಸ್.ಪಿ.ಪದ್ಮಪ್ರಸಾದ್ ಸಮಾರೋಪ ಮಾತುಗಳನ್ನಾಡಿದರು. ವಿಧಾನಪರಿಷತ್ತಿನ‌ ಸದಸ್ಯರಾದ ಡಿ.ಎಸ್.ಅರುಣ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿದರು. ಜಿಲ್ಲಾ‌ ಪಂಚಾಯತಿ ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್, ಆಕಾಶವಾಣಿ ಸಹಾಯಕ ನಿರ್ದೇಶಕ ತುಕಾರಾಮ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘ ಕಾರ್ಯದರ್ಶಿ ಎ.ಎಂ.ಸುರೇಶ್, ರೈತನಾಯಕ ಎಚ್.ಆರ್.ಬಸವರಾಜಪ್ಪ, ಎಸ್.ಬಿ.ಐ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಗಂಗಾಧರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ನಾಡು ನುಡಿಗೆ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು.


ನಿರ್ಣಯಗಳು…

೧. ಪ್ರಾಥಮಿಕದಿಂದ ಇಂಜಿನಿಯರಿಂಗ್ ಹಾಗೂ‌ ಮೆಡಿಕಲ್ ಶಿಕ್ಷಣದ ಕಲಿಕೆಯಲ್ಲಿ, ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವಂತಹ ನಾವೀನ್ಯಯುತ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು.

೨. ಕನ್ನಡದ ಶಾಲೆಗಳ ಅಭಿವೃದ್ಧಿಯ ಜೊತೆಯಲ್ಲಿ, ಪ್ರಪಂಚದ ವೇಗಕ್ಕೆ ತಕ್ಕಂತೆ ಭವಿಷ್ಯತ್ತಿನ ಆವಿಷ್ಕಾರಗಳ ಕಲ್ಪನೆಯೊಂದಿಗೆ ಪಠ್ಯಕ್ರಮಗಳು ರೂಪಗೊಳ್ಳುವುದರ ಜೊತೆಯಲ್ಲಿ, ಪದೇ ಪದೇ ಪಠ್ಯಕ್ರಮಗಳ ಬದಲಾವಣೆ ನಿಲ್ಲಬೇಕು.

೩. ಕನ್ನಡದ ಕ್ರಿಯಾಶೀಲ ಸಾಹಿತ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಆಯೋಜನೆ ಹಾಗೂ ಭಾಗವಹಿಸುವಿಕೆಗೆ ಶಿಕ್ಷಣ ಇಲಾಖೆ ಯಾವುದೇ ನಿರ್ಬಂಧಗಳನ್ನು ವಿಧಿಸಬಾರದು.

೪. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿರುವ ಭಾರಿ ಭ್ರಷ್ಟಾಚಾರ ಆರೋಪಿಗಳ ವಿರುದ್ಧ ಸರ್ಕಾರವು ಕಠಿಣ ಕ್ರಮ‌ ಕೈಗೊಳ್ಳಬೇಕು.

೫. ಮಲೆನಾಡಿನ ಪರಿಸರಕ್ಕೆ ಮಾರಕವಾದ ಅಭಿವೃದ್ಧಿ ಯೋಜನೆಗಳ ಬದಲಿಗೆ, ಪರಿಸರಕ್ಕೆ ಪೂರಕವಾದ ಅಭಿವೃದ್ಧಿ ನೀತಿಗಳನ್ನು ಸರ್ಕಾರ ಅನುಷ್ಟಾನಗೊಳಿಸಲು ಒತ್ತಾಯಿಸುತ್ತೇವೆ.

೬. ಸಾಹಿತ್ಯ ಗ್ರಾಮ ಯೋಜನೆಯು ನೀಲ ನಕ್ಷೆಯಂತೆ ಪೂರ್ಣಗೊಳಿಸಲು, ಸರ್ಕಾರದಿಂದ ಅಗತ್ಯ ಅನುದಾನ ನೀಡುವಂತೆ ಸಮ್ಮೇಳನವು ಒತ್ತಾಯಿಸುತ್ತದೆ.

೭. ನ್ಯಾಯಾಲಯ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಛೇರಿ, ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಬಳಕೆ ಕಡ್ಡಾಯಗೊಳಿಸಬೇಕು.

೮. ಹೊಸನಗರ ತಾಲ್ಲೂಕಿಗೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರವೆಂದು ಘೋಷಿಸಬೇಕು.

೯. ಯುನಿಕೋಡ್, ನುಡಿ ಸೇರಿದಂತೆ ತಂತ್ರಾಂಶಗಳಲ್ಲಿ ಕನ್ನಡದ ಬಳಕೆಗೆ ಇರುವ ತೊಡಕುಗಳನ್ನು ಪರಿಹರಿಸಿ, ಡಿಜಿಟಲ್ ವೇದಿಕೆಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವಂತಹ ಯೋಜನೆಗಳು ಸರ್ಕಾರದಿಂದ ರೂಪಿಸಬೇಕು.

೧೦. ವೈದ್ಯಕೀಯ ಶಿಕ್ಷಣದಲ್ಲಿ, ಆಯಾ ಕೋಟಾದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಮೂಲಕ, ಸಮುದಾಯದಲ್ಲಿ ಸೇವಾ ಮನೋಭಾವಕ್ಕೆ ಒತ್ತು ನೀಡಬೇಕು ಹಾಗೂ ವ್ಯಾಪಾರಿ ವೈದ್ಯಕೀಯ ವಲಯವನ್ನು ಮುಕ್ತಗೊಳಿಸಬೇಕು.

೧೧. ೧ ರಿಂದ ೫ ನೇ ತರಗತಿಯ ವರೆಗೆ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಬೇಕು.

Leave a Reply

Your email address will not be published. Required fields are marked *