ಮಂಜುನಾಥ್ ಶೆಟ್ಟಿ…
ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದರು.ಹೈಕೋರ್ಟ್ ಸಂಚಾರಿ ಪೀಠದ ಸಮಸ್ಯೆಯನ್ನು ಮುಕ್ತ ಚರ್ಚೆಯೊಡನೆ ಸರಕಾರ ಪರಿಹರಿಸಬೇಕು. ಇದಕ್ಕೆ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.
ವಕೀಲರ ಸಂಘದ ವತಿಯಿಂದ ಹೈಕೋರ್ಟ್ ಪೀಠಕ್ಕಾಗಿ ಏರ್ಪಡಿಸಲಾಗಿದ್ದ ಜಾಥಾ ಮುಕ್ತಾಯವಾದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಬಸವಕೇಂದ್ರದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಹೈಕೋರ್ಟ್ ಸಂಚಾರಿ ಪೀಠಕ್ಕೆ ಶಿವಮೊಗ್ಗ ಪ್ರಶಸ್ಥ ಸ್ಥಳ. ಸುತ್ತಮುತ್ತಲ ಜಿಲ್ಲೆಯವರಿಗೆ ಮಧ್ಯವರ್ತಿ ಕೇಂದ್ರವಾಗಿದೆ. ಎಲ್ಲ ಜಿಲ್ಲೆಗಳಿಂದ ಸಂಪರ್ಕವಿದೆ. ಇಲ್ಲಿನ ಜನಸಂಖ್ಯೆ ಮತ್ತು ಅಹವಾಲಿಗನುಗುಣವಾಗಿ ಪೀಠವನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ಮುಖ್ಯಸ್ಥರು ಮಾತನಾಡಿ, ನಮಗೆ ಮಂಗಳೂರಿಗಿಂತ ಶಿವಮೊಗ್ಗದಲ್ಲೇ ಪೀಠವಾಗಬೇಕು. ಜನಸಾಮಾನ್ಯರಿಗೆ ಅನುಕೂಲವಾಗಬೇಕು. ಜನಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಹಿರಿಯ ನ್ಯಾಯವಾದಿ ಅಶೋಕ್ ಭಟ್ ಮಾತನಾಡಿ, ವಾಸ್ತವದಲ್ಲಿ ಮಂಗಳೂರು ಪೀಠಕ್ಕೆ ಶಿವಮೊಗ್ಗ ಸೇರಿಸುವುದು ಸರಿಯಲ್ಲ. ಮಂಗಳೂರಿನಿಂದ ಮತ್ತು ಶಿವಮೊಗ್ಗದಿಂದ ಹೈಕೋರ್ಟ್‌ಗೆ ಎಷ್ಟು ಕೇಸುಗಳು ಹೋಗುತ್ತಿವೆ ಎನ್ನುವುದನ್ನು ಪರಿಶೀಲಿಸಬೇಕು. ಕೇಸುಗಳ ಸಂಖ್ಯೆಯ ಆಧಾರದಲ್ಲಿ ಶಿವಮೊಗ್ಗಕ್ಕೆ ಕೊಡಲಿ. ಮೂರ್ನಾಲ್ಕು ಜಿಲ್ಲೆ ಸೇರಿಸಿದರೆ ಜನಸಂಖ್ಯೆಯೂ ಸಾಕಷ್ಟಾಗುವುದರಿಂದ ಹೆಚ್ಚಿನ ಕೇಸು ಲಭ್ಯವಾಗುತ್ತದೆ ಎಂದರು.
ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ, ಎಚ್ ಸಿ ಯೋಗೇಶ್, ದಸಂಸ ರಾಜ್ಯ ಸಂಚಾಲಕ ಎಂ ಗುರುಮೂರ್ತಿ, ರೈತ ಸಂಘದ ರಾಜ್ಯಾಧ್ಯಕ್ಷ ಎಚ್ ಆರ್. ಬಸವರಾಜಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ್ರ ಸ್ವಾಮಿ ಮೊದಲಾದವರು ಮಾತನಾಡಿದರು. ಅಧ್ಯಕ್ಷತೆಯನ್ನು ಹಿರಿಯ ವಕೀಲ ಬಸಪ್ಪ ಗೌಡರು ವಹಿಸಿ ಮಾತನಾಡಿದರು. ನ್ಯಾಯವಾದಿ ಕೆ ಪಿ ಶ್ರೀಪಾಲ್ ಪ್ರಾಸ್ತಾವಿಕ ಮಾತನಾಡಿದರು.ನಂತರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆಗಮಿಸಿ ಮನವಿ ಸ್ವೀಕರಿಸಿದರು.