ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಸಂಚಾರ ವೃತ್ತ ಕಚೇರಿಯಲ್ಲಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಶಾಲಾ ಮಕ್ಕಳ ಸುರಕ್ಷತೆ ಹಾಗೂ ಸುಗಮ ಸಂಚಾರ ವ್ಯವಸ್ಥೆಯ ಕುರಿತು ಶಿವಮೊಗ್ಗ ನಗರದ ಎಲ್ಲಾ ಪಿಯು ಮತ್ತು ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಯ ಮುಖ್ಯಸ್ಥರು/ಪ್ರಾಂಶುಪಾಲರ ಸಭೆಯನ್ನು ಆಯೋಜಿಸಲಾಗಿತ್ತು.
ಸದರಿ ಸಭೆಯಲ್ಲಿ ಶ್ರೀ ಸಂಜೀವ್ ಕುಮಾರ್, ಮಾನ್ಯ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ‘ಬಿ’ ಉಪವಿಭಾಗ, ಅವರು ಭಾಗವಹಿಸಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆ ಕುರಿತು ಈ ಕೆಳಕಂಡಂತೆ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು:
- ಶಾಲಾ/ಕಾಲೇಜು ವಾಹನಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಶಾಲಾ/ಕಾಲೇಜು ವಾಹನಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿರುವಂತೆ ಖಚಿತಪಡಿಸಿಕೊಳ್ಳಬೇಕು.
- ಶಾಲಾ/ಕಾಲೇಜು ವಾಹನಗಳಲ್ಲಿ ಕಡ್ಡಾಯವಾಗಿ ಜಿಪಿಎಸ್ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು.
- ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಕಾಲೇಜುಗಳ ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು.
- ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ವಾಹನ ಚಲಾಯಿಸಿಕೊಂಡು ಕಾಲೇಜಿಗೆ ಬರುತ್ತಿರುವುದು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಪೋಷಕರ ಸಭೆಗಳನ್ನು ನಡೆಸಿ ಅಪ್ರಾಪ್ತ ವಿದ್ಯಾರ್ಥಿಗಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡದಂತೆ ಅರಿವು ಮೂಡಿಸಬೇಕು.
- ಅಪ್ರಾಪ್ತ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಚಾಲನೆ ಮಾಡುತ್ತಿರುವುದು ಕಂಡುಬಂದಲ್ಲಿ, ಅದರ ಫೋಟೋ, ವೀಡಿಯೊ ಹಾಗೂ ಸಂಬಂಧಿತ ಮಾಹಿತಿಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ “Public Eye” ವಾಟ್ಸಾಪ್ ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿ ನೀಡಬೇಕು.
ಸಭೆಯಲ್ಲಿ ಶ್ರೀ ದೇವರಾಜ್, ಪೊಲೀಸ್ ನಿರೀಕ್ಷಕರು (ಸಿಪಿಐ), ಶಿವಮೊಗ್ಗ ಸಂಚಾರ ವೃತ್ತ, ಶ್ರೀಮತಿ ಸ್ವಪ್ನಾ ಎಲ್., ಪೊಲೀಸ್ ಉಪನಿರೀಕ್ಷಕರು (ಪಿಎಸ್ಐ), ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಹಾಗೂ ಇತರ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಭೆಯ ಮೂಲಕ ಶಾಲಾ ಮಕ್ಕಳ ಸುರಕ್ಷತೆ, ಸಂಚಾರ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಅಪ್ರಾಪ್ತ ವಯಸ್ಸಿನ ವಾಹನ ಚಾಲನೆಯನ್ನು ತಡೆಗಟ್ಟುವ ಕುರಿತು ಮಹತ್ವದ ಚರ್ಚೆಗಳೊಂದಿಗೆ ಮತ್ತು ರಸ್ತೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.