ಮಂಜುನಾಥ್ ಶೆಟ್ಟಿ…
ಜಿಲ್ಲೆಯಲ್ಲಿ ಕಳೆದ ಆರೆಂಟು ವರ್ಷಗಳಿಂದ ಆರಂಭಗೊಂಡು ವಿವಿಧ ಕಾರಣಗಳಿಂದಾಗಿ ಈವರೆಗೂ ಪೂರ್ಣಗೊಳ್ಳದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ವಿಳಂಬಕ್ಕೆ ಅವಕಾಶವಿಲ್ಲದಂತೆ ಹಾಗೂ ಸಲ್ಲದ ಕಾರಣ ಹೇಳದೆ ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಅನುಕೂಲವಾಗುವಂತೆ ಲೋಕಾರ್ಪಣೆಗೊಳಿಸಲು ಸಜ್ಜಾಗುವಂತೆ ಸಾಂಸದ ಬಿ.ವೈ.ರಾಘವೇಂದ್ರ ಅವರು ರಾಷ್ಟ್ರೀಯ ಹೆದ್ದಾರಿ ಮತ್ತು ನ್ಯಾಷನಲ್ ಹೈವೆ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತುಮಕೂರು-ಶಿವಮೊಗ್ಗ, ಚಿತ್ರದುರ್ಗ-ಶಿವಮೊಗ್ಗ, ಶಿಕಾರಿಪುರ-ರಾಣೇಬೆನ್ನೂರು, ಸಾಗರ ಟೌನ್ ಮತ್ತಿತರ ಸ್ಥಳಗಳಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಭೂ ದಾಖಲೆಗಳ ಸರ್ವೆ ಇಲಾಖೆ, ತೋಟಗಾರಿಕೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಅಲ್ಲಿನ ನಿವಾಸಿಗಳು, ಭೂಸ್ವಾದೀನ ಪ್ರಕ್ರಿಯೆಯ ನಂತರ ಪರಿಹಾರಧನ ವಿತರಣೆಯಲ್ಲಿ ವಿಳಂಬ ಮತ್ತಿತರ ಕಾರಣಗಳಿಂದಾಗಿ ಕೆಲವೆಡೆ ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವುದು ಗಮನಕ್ಕೆ ಬಂದಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಿಕೊಂಡು ಇರುವ ಸಮಸ್ಯೆ-ಸವಾಲುಗಳಿಗೆ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.
ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕಾದ ಕಾಮಗಾರಿಗಳು ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ಪಾವತಿ, ಜಂಟಿ ಸರ್ವೆ ವರದಿ, ಅರಣ್ಯ ಭೂಮಿ ವರ್ಗಾವಣೆ ಹಾಗೂ ಅನುಮತಿ, ಮರಗಳ ತೆರವು, ಸ್ಥಳಾಂತರಿಸಬೇಕಾದ ಕಟ್ಟಡಗಳು ಮತ್ತು ಇತರೆ ಇಲಾಖೆಗಳ ಅನುಮತಿಗಳ ಕಾರಣದಿಂದ ಸ್ಥಗಿತಗೊಂಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಷ್ಟ್ರೀಯ ಹೆದ್ದಾರಿ-206ರ ತುಮಕೂರು–ಶಿವಮೊಗ್ಗ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಎಂ.ಸಿ.ಹಳ್ಳಿ, ಕಾರೇಹಳ್ಳಿ ಟವರ್ ಪ್ರದೇಶ ಹಾಗೂ ಮಲವಗೊಪ್ಪ ಭಾಗದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಕಾಮಗಾರಿಗೆ ಅಡಚಣೆಯಾಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಈ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ ಕಾಮಗಾರಿಗೆ ಅಗತ್ಯವಿರುವ ಜಾಗವನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ–ಮಂಗಳೂರು ರಾಷ್ಟ್ರೀಯ ಹೆದ್ದಾರಿ-169ರ ವಿವಿಧ ಭಾಗಗಳಲ್ಲಿಯೂ ಬಾಕಿ ಇರುವ ಭೂಸ್ವಾಧೀನ ಪ್ರಕರಣಗಳಿಗೆ ಪರಿಹಾರ ಪಾವತಿಸಿ ಕಾಮಗಾರಿ ಸ್ಥಳವನ್ನು ಹಸ್ತಾಂತರಿಸುವಂತೆ ಸೂಚಿಸಿದ ಅವರು, ಶಿವಮೊಗ್ಗ ನಗರ ವ್ಯಾಪ್ತಿಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಬಾಕಿ ಇರುವ ಫಲಾನುಭವಿಗಳ ಪರಿಹಾರ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿ-766ಸಿ ಬೈಂದೂರು–ರಾಣೇಬೆನ್ನೂರು ರಸ್ತೆಯ ಶಿಕಾರಿಪುರ ಬೈಪಾಸ್ ಕಾಮಗಾರಿಗೆ ಸಂಬಂಧಿಸಿದಂತೆ ಬಾಕಿ ಇರುವ ಭೂಸ್ವಾಧೀನ ಪ್ರಕರಣಗಳು, ಜಂಟಿ ಸರ್ವೆ ಹಾಗೂ ಪರಿಹಾರ ಪಾವತಿ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗಬ್ಬೂರು ಗ್ರಾಮದ ಸರ್ವೆ ನಂ.58ಕ್ಕೆ ಸಂಬಂಧಿಸಿದ ಜಂಟಿ ಸರ್ವೆ ವರದಿ ಹಾಗೂ ಬಾಕಿ ಇರುವ ಪರಿಹಾರ ಪ್ರಕರಣಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೈಂದೂರು–ನಿಟ್ಟೂರು ಭಾಗದ 37.85 ಕಿ.ಮೀ.ವರೆಗೆ ದ್ವಿಪಥ ರಸ್ತೆ ಕಾಮಗಾರಿಗೆ ಅರಣ್ಯೇತರ ಪ್ರದೇಶದಲ್ಲಿರುವ ಮರಗಳನ್ನು ತೆರವುಗೊಳಿಸಲು ಅಗತ್ಯ ಅನುಮತಿ, Stage-1 ಅನುಮೋದನೆಗೆ ಸಂಬಂಧಿಸಿದ ಪ್ರಮಾಣಪತ್ರ ಹಾಗೂ ಭೂಮಿ ಹಸ್ತಾಂತರ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ-169ಎ ತೀರ್ಥಹಳ್ಳಿ–ಮಲ್ಪೆ ರಸ್ತೆಯ ಮೇಗರವಳ್ಳಿ–ಆಗುಂಬೆ ಭಾಗದ ಕಾಮಗಾರಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ, ಅರಣ್ಯ ಭೂಮಿಯಲ್ಲಿ ಮರ ತೆರವು ಸೇರಿದಂತೆ ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಬೇಕು. ಸಂಬಂಧಪಟ್ಟ ಇಲಾಖೆಗಳು ಅಗತ್ಯ ಹಣ ಪಾವತಿ ಮತ್ತು ದಾಖಲೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದ ಅವರು, ಶಿವಮೊಗ್ಗ–ಮಂಗಳೂರು ರಾಷ್ಟ್ರೀಯ ಹೆದ್ದಾರಿ-169ರ ನೆಲ್ಯಾಡಿ–ತೀರ್ಥಹಳ್ಳಿ ಹಾಗೂ ಇತರೆ ಭಾಗಗಳ ಕಾಮಗಾರಿಗಳಿಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ-206ರ ಶಿವಮೊಗ್ಗ–ಆನಂದಪುರ ಭಾಗದಲ್ಲಿ ಕಿ.ಮೀ. 111.50ರಿಂದ 148.088ರವರೆಗೆ ಚತುಷ್ಪಥ ರಸ್ತೆನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸಾಗರ ಮತ್ತು ಶಿವಮೊಗ್ಗ ಉಪವಿಭಾಗಗಳಲ್ಲಿ ಬಾಕಿ ಇರುವ ಭೂಸ್ವಾಧೀನ ಪರಿಹಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಬಾಕಿ ಇರುವ ಪ್ರಕರಣಗಳಿಗೆ ಪರಿಹಾರ ಪಾವತಿ, ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಗತ್ಯ ಕ್ರಮ ಹಾಗೂ ಜಂಟಿ ಸರ್ವೆ ವರದಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಷ್ಟ್ರೀಯ ಹೆದ್ದಾರಿ-206ರ ತುಮಕೂರು–ಹೊನ್ನಾವರ ರಸ್ತೆಯ ಎಲ್.ಸಿ.110 (ಹೊಸೂರು) ಹಾಗೂ ಎಲ್.ಸಿ.152 (ತಾಳಗುಪ್ಪ) ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕರಣಗಳ ಜಂಟಿ ಸರ್ವೆ ನಕ್ಷೆ, ಪರಿಹಾರ ಪಾವತಿ ಹಾಗೂ ಅರಣ್ಯ ಇಲಾಖೆಯ ಅನುಮೋದನೆ ದೊರೆತಿದ್ದು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಸ್ಥಳವನ್ನು ಹಸ್ತಾಂತರಿಸುವಂತೆ ಸಂಸದರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಕೇವಲ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ವಿಳಂಬವಾಗುವುದು ಸಹಿಸಲಾಗುವುದಿಲ್ಲ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು, ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು, ಭೂಸ್ವಾಧೀನ, ಪರಿಹಾರ ಪಾವತಿ, ಸರ್ವೆ, ಅರಣ್ಯ ಅನುಮತಿ, ಮರಗಳ ತೆರವು, ರೈಲ್ವೆ ಸಂಬಂಧಿತ ಅನುಮತಿಗಳು ಹಾಗೂ ಇತರೆ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಒಂದು ಇಲಾಖೆಯ ಕಡತ ಮತ್ತೊಂದು ಇಲಾಖೆಯಲ್ಲಿ ಬಾಕಿ ಉಳಿಯುವ ಪರಿಸ್ಥಿತಿ ಮರುಕಳಿಸದಂತೆ ಕ್ರಮ ವಹಿಸಲು ಸೂಚಿಸಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಇಲಾಖೆಗಳು ಪರಸ್ಪರ ಹೊಣೆಗಾರಿಕೆ ವರ್ಗಾಯಿಸದೆ, ಒಟ್ಟಾಗಿ ಕುಳಿತು ಪರಿಹರಿಸಬೇಕು. ಪ್ರತಿಯೊಂದು ಕಾಮಗಾರಿಗೂ ಸ್ಪಷ್ಟವಾದ ಕಾಲಮಿತಿ ನಿಗದಿಪಡಿಸಿಕೊಂಡು, ಆ ಅವಧಿಯೊಳಗೆ ಪ್ರಗತಿ ಸಾಧಿಸಬೇಕು. ಅಗತ್ಯವಿರುವಲ್ಲಿ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಮನ್ವಯ ಸಭೆಗಳನ್ನು ನಡೆಸಿ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಂದಾಗಿ ಸಾರಿಗೆ ಸಂಪರ್ಕ, ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ರಾಷ್ಟ್ರೀಯ ಹೆದ್ದಾರಿ ಚೀಫ್ ಇಂಜಿನಿಯರ್ ರಾಜೇಶ್, ಅರಣ್ಯಾಧಿಕಾರಿ ಅಜ್ಜಯ್ಯ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂಧಿತ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಸಿಬ್ಬಂಧಿಗಳು ಉಪಸ್ಥಿತರಿದ್ದರು.