ಮಂಜುನಾಥ್ ಶೆಟ್ಟಿ…
ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹಾಗೂ ಕಲಿಕೆಯ ತುಡಿತವನ್ನು ಹೆಚ್ಚಿಸಲು ಎಐ ಜೊತೆಗೆ ಮಾನವೀಯ ಕೌಶಲಗಳು ಮತ್ತು ಭಾವನಾತ್ಮಕ ಬುದ್ಧಿಮತ್ತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಕುವೆಂಪು ವಿವಿ (ಆಡಳಿತ) ಕುಲಸಚಿವರಾದ ಹೇಮಂತ್.ಎನ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ: ನವೀನ ಭವಿಷ್ಯಕ್ಕಾಗಿ ಸೃಜನಶೀಲ ಶಿಕ್ಷಕರ ನಿರ್ಮಾಣ’ ಕುರಿತ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಎಐ ಮಾಹಿತಿ ಒದಗಿಸುವ ಅತ್ಯುತ್ತಮ ಸಾಧನವಾಗಿರಬಹುದು. ಆದರೆ ಅನುಭವ, ಸಹಾನುಭೂತಿ, ಮಾನವೀಯ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಎಐ ನೀಡಲು ಸಾಧ್ಯವಿಲ್ಲ. ಇಂತಹ ಕೌಶಲಗಳು ಜೀವನಾನುಭವದ ಮೂಲಕ ರೂಪುಗೊಳ್ಳುತ್ತವೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ ಬುದ್ಧಿಮತ್ತೆಯನ್ನು ಬೆಳೆಸುವತ್ತ ಶಿಕ್ಷಣ ವ್ಯವಸ್ಥೆ ಹೆಚ್ಚು ಗಮನಹರಿಸಬೇಕು.
ಇಂದಿನ ದಿನಗಳಲ್ಲಿ ಅನೇಕ ಶಿಕ್ಷಕರು, ತರಗತಿಯಲ್ಲಿ ಒಂದು ಕಪ್ಪು ಹಲಗೆಯನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಸ್ಮಾರ್ಟ್‌ಬೋರ್ಡ್, ಸ್ಮಾರ್ಟ್‌ಫೋನ್ ಸೇರಿದಂತೆ ಡಿಜಿಟಲ್ ಸಾಧನಗಳ ಮೇಲಿನ ಅತಿಯಾದ ಅವಲಂಬನೆಯಿಂದ ಸ್ವಂತ ಬೋಧನಾ ಕೌಶಲಗಳು ಕುಂಠಿತವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಎಂಟನೇ ತರಗತಿಯ ನಂತರ, ಸುಮಾರು 1,500 ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಈ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಮನವರಿಕೆಯ ಪ್ರಯತ್ನ ಮಾಡುವಾಗ, ಕಲಿಕೆಯ ಹೊರತಾಗಿ, ಆಡಂಬರದ ಜೀವನಶೈಲಿಗಾಗಿ ಹಣ ಸಂಪಾದಿಸುವ ಆಸಕ್ತಿ ವಿದ್ಯಾರ್ಥಿಗಳಿಂದ ವ್ಯಕ್ತವಾಗಿದ್ದು ಬೇಸರದ ಸಂಗತಿ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಶೀಲಾ. ಜಿ ಮಾತನಾಡಿ, ಎಐ ಮಾನವ ಬುದ್ಧಿಮತ್ತೆಗೆ ಪರ್ಯಾಯವಾಗಿ ನೋಡುವುದಕ್ಕಿಂತ, ಡಿಜಿಟಲ್ ಯುಗದ ವೇಗಕ್ಕೆ ತಕ್ಕಂತೆ ಮನುಷ್ಯನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ಪೂರಕ ಶಕ್ತಿಯಾಗಿ ಬಳಸಿಕೊಳ್ಳಬೇಕು. ಎಐ ವೇಗವಾಗಿ ಮಾಹಿತಿ ನೀಡಬಹುದು. ಆದರೆ ವಿದ್ಯಾರ್ಥಿಯ ಮನಸ್ಸನ್ನು ಅರ್ಥಮಾಡಿಕೊಂಡು, ಪ್ರೇರೇಪಿಸಿ, ಆತ್ಮವಿಶ್ವಾಸ ತುಂಬುವ ಮಾನವೀಯ ಶಕ್ತಿ ಶಿಕ್ಷಕರಲ್ಲಿ ಮಾತ್ರ ಇದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಕೃತಕ ಬುದ್ಧಿಮತ್ತೆಯಿಂದ ಜನರೇಟಿವ್ ಎಐ ಯುಗಕ್ಕೆ ಪ್ರವೇಶಿಸಿದ್ದೇವೆ. ಇದು ಪಠ್ಯ, ಧ್ವನಿ ಹಾಗೂ ವಿಡಿಯೊಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ.
ಜನರೇಟಿವ್ ಎಐ ಮೂಲತಃ ಸಂಭವನೀಯತೆ ಆಧಾರಿತ ಮಾದರಿಯಾಗಿದ್ದು, ಇದರಲ್ಲಿ ಹಲವು ರೀತಿಯ ದೋಷಗಳು ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಎಐ ಅನ್ನು ಎಷ್ಟು ವಿವೇಚನೆ ಮತ್ತು ಜವಾಬ್ದಾರಿಯುತವಾಗಿ ಬಳಸುತ್ತೇವೆ ಎಂಬುದೇ ಮುಖ್ಯ. ಜನರೇಟಿವ್ ಎಐನಿಂದ ಬೋಧನಾ ಕ್ಷೇತ್ರದ ಉದ್ಯೋಗಿಗಳು ಅಸ್ತಿತ್ವದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಜನರೇಟಿವ್ ಎಐ ಉತ್ತಮ ಜ್ಞಾನ ಮೂಲಗಳನ್ನು ಒದಗಿಸುತ್ತಿರುವಾಗ, ನಾವು ತರಗತಿಗೆ ಏಕೆ ಬರಬೇಕು? ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೋಧನೆಯಲ್ಲಿ ವಿದ್ಯಾರ್ಥಿಗಳು ಹೇಗೆ ಕಲಿಯಬೇಕು ಎಂಬುದನ್ನು ಕಲಿಸುವುದು ಅತ್ಯಂತ ಅಗತ್ಯ. ಪದವಿ ಪೂರ್ಣಗೊಂಡ ನಂತರವೂ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಪ್ರಸ್ತುತವಾಗಿರುವ, ಅಗತ್ಯ ಸಾಮರ್ಥ್ಯವನ್ನು ಬೆಳೆಸುವುದು ಶಿಕ್ಷಣದ ಉದ್ದೇಶವಾಗಬೇಕು. ಹೊಸ ತಂತ್ರಜ್ಞಾನದೊಂದಿಗೆ ವಿಷಯಗಳನ್ನು ವಿಶ್ಲೇಷಿಸುವ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ಹೇಳಿದರು.
ಶ್ರೀಲಂಕಾದ ಕೊಲಂಬೊ ಮುಕ್ತ ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕರಾದ ರವೀಂತಿರಾನ್ ವಿವೇಕಾನಂದರಾಸ ಮಾತನಾಡಿದರು. ಮೈಸೂರು ವಿವಿ ಪ್ರಾಧ್ಯಾಪಕರಾದ ಡಾ.ಪುಷ್ಪ.ಎನ್, ಸಮ್ಮೇಳನದ ನಿರ್ದೇಶಕರಾದ ಡಾ.ಎನ್.ಕೆ.ಚಿದಾನಂದ, ಸಂಘಟನಾ ಕಾರ್ಯದರ್ಶಿ ಮಂಜುನಾಥ.ಡಿ.ಎಸ್, ಡಾ.ಎನ್.ಡಿ.ಮಂಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.