ಮಂಜುನಾಥ್ ಶೆಟ್ಟಿ…
ಮನೆ ಮತ್ತು ಸಮಾಜ ಎರಡನ್ನೂ ನೋಡಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಅವರು ನಾಳಿನ ಸತ್ಪ್ರಜೆಗಳನ್ನು ಮತ್ತು ನಾಯಕರನ್ನು ರೂಪಿಸುವ ಶಿಲ್ಪಿಗಳಾಗಿದ್ದಾರೆ ಎಂದು
ಸಂಸದರಾದ ಬಿ.ವೈ.ರಾಘವೇಂದ್ರ ಶ್ಲಾಘಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಬಲಿಷ್ಠ, ಸುಸಂಸ್ಕೃತ ಮತ್ತು ಶಿಸ್ತುಬದ್ಧ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ತ್ಯಾಗ ಹಾಗೂ ಸಮರ್ಪಣೆ ಭಾವವನ್ನು ಗೌರವಿಸುತ್ತೇನೆ ಎಂದರು.
ಮಕ್ಕಳಿಗೆ ಅರಿವಿನ ಬೆಳಕನ್ನು, ಜ್ಞಾನವನ್ನು ಕೊಡುವ ದೀವಿಗೆ ಶಿಕ್ಷಕ. ಆಧುನಿಕ ತಂತ್ರಜ್ಞಾನ, ಎಐ ಯುಗದಲ್ಲಿ ಮಕ್ಕಳಿಗೆ ಕೂತಲ್ಲೇ ಅನೇಕ ಮಾಹಿತಿ, ವಿಚಾರಗಳು ಲಭಿಸುತ್ತಿವೆ. ಆದರೆ ನಿಜವಾದ ಜ್ಞಾನ, ಅಂತಃಶಕ್ತಿ, ಪ್ರಾಯೋಗಿಕ ಜ್ಞಾನ ಶಿಕ್ಷಕರಿಂದ ಮಾತ್ರ ಸಿಗಲು ಸಾಧ್ಯ. ಮಕ್ಕಳ ಮನಸ್ಥಿತಿ ಅರಿತು ಆತ್ಮಸ್ಥೈರ್ಯ ತುಂಬುವ, ಭವಿಷ್ಯ ರೂಪಿಸುವ ಕೆಲಸ ಶಿಕ್ಷಕರಿಂದ ಮಾತ್ರ ಸಾಧ್ಯವಿದೆ ಎಂದರು.
ಇಂದು ಮಕ್ಕಳಿಗೆ ಬೇಕಿರುವುದು ವೈದ್ಯರಲ್ಲ . ಬದಲಾಗಿ ಅಂಧಕಾರ ಹೋಗಲಾಡಿಸಿ ಬದುಕು ಕಟ್ಟಿಕೊಡುವ ಶಿಕ್ಷಕರು.
ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಏಳ್ಗೆ ಆದಾಗ ಮಾತ್ರ ದೇಶ ಹೆಚ್ಚೆಚ್ಚು ಅಭಿವೃದ್ದಿಗೊಳ್ಳುವುದು. ವಿಕಸಿತ ಭಾರತದ ಕನಸು ನನಸಾಗುವುದು.
ನಮ್ಮ ಜಿಲ್ಲೆಯ ಹುಂಚ-ರಿಪ್ಪನಪೇಟೆಯ ಶಿಕ್ಷಕಿ
ರತ್ನಕುಮಾರಿ ಅವರು ರಾಷ್ಟ್ರ ಪ್ರಶಸ್ತಿ ಪಡೆದಿರುವುದು ಅತ್ಯಂತ ಹೆಮ್ಮೆಯ ವಿಷಯ. ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶಿಕ್ಷಕರನ್ನು ಗುರುತಿಸುತ್ತಿರುವುದು ಅರ್ಥಪೂರ್ಣ ಎಂದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಶ್ರೇಷ್ಠ ತತ್ತ್ವಜ್ಞಾನಿ, ಶಿಕ್ಷಣತಜ್ಞ ಹಾಗೂ ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದು ತಮ್ಮಜನ್ಮದಿನವನ್ನು ಶಿಕ್ಷಕ ದಿನವೆಂದು ಘೋಷಿಸಿದ ಮಹಾನ್ ವ್ಯಕ್ತಿ.
ಶಿಕ್ಷಕನಿಲ್ಲದಿದ್ದರೆ ವ್ಯಕ್ತಿಯ ಜೀವನ ಅಪೂರ್ಣವಾಗಿರುತ್ತಿತ್ತು. ಗುರುಕುಲದಿಂದ ಹಿಡಿದು ಈವರೆಗೂ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ಇದೆ. ಸರಿಯಾದ ಮಾರ್ಗದರ್ಶನ ದೊರೆತಲ್ಲಿ ವೈಯಕ್ತಿಕ ಹಾಗೂ ದೇಶ ಅಭಿವೃದ್ಧಿ ಸಾಧ್ಯ. ಭಾರತ ಜಗತ್ತಿಗೆ ಗುರು ಆಗುತ್ತಿದೆ. ಶಿಕ್ಷಣದ ಪರಿಣಾಮ ಇದಾಗಿದ್ದು, ನಮ್ಮ ದೇಶದ ಮಹಾನ್ ಪುರುಷರು, ಆದರ್ಶ ಪುರುಷರು ಉತ್ತಮ ಮಾರ್ಗದರ್ಶಕರಾಗಿದ್ದಾರೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನು ಬೇರೆಡೆ ನೋಡಲು ಸಾಧ್ಯವಿಲ್ಲ.
ಶಿಕ್ಷಕರಾದ ನೀವು ವಿದ್ಯಾರ್ಥಿಗಳ ಬದುಕು ಕಟ್ಟಿಕೊಟ್ಟಿದ್ದೀರಿ. ಜೀವನ ರೂಪಿಸುವ ಮೌಲ್ಯಾಧಾರಿತ ಶಿಕ್ಷಣ ನೀಡಿದ್ದೀರಿ. ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬಿದ್ದೀರಿ. ಇದಕ್ಕಾಗಿ ಅಭಿನಂದಿಸುತ್ತೇನೆ. ನಿಮ್ಮ ಅಗತ್ಯ ಬೇಡಿಕೆಗಳ ಬಗ್ಗೆ ಪೂರಕ ಚಿಂತನೆ ಮಾಡೋಣ ಎಂದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ತಮ್ಮ ಜನ್ಮದಿನವನ್ನು ವೈಯಕ್ತಿಕವಾಗಿ ಆಚರಿಸುವ ಬದಲು ದೇಶದ ಸಮಸ್ತ ಶಿಕ್ಷಕರ ಗೌರವಾರ್ಥವಾಗಿ ಆಚರಿಸಲು ಕರೆ ನೀಡಿದ ಮಹಾನ್ ವ್ಯಕ್ತಿತ್ವವನ್ನು ನಾವೆಲ್ಲ ತುಂಬು ಹೃದಯದಿಂದ ಸ್ಮರಿಸಬೇಕು.ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಸಾವಿತ್ರಿ ಬಾಯಿ ಫುಲೆ, ಫಾತಿಮಾ ಶೇಕ್ ಅವರನ್ನೂ ಸಹ ನಾವು ಸ್ಮರಿಸಬೇಕಿದೆ ಎಂದರು.
ಶಿಕ್ಷಕರ ಮಕ್ಕಳೊಂದಿನ ನಿಕಟ ಪ್ರೀತಿ, ವಿಶ್ವಾಸ ವಿಶೇಷವಾಗಿದ್ದು, ಶಿಕ್ಷಕರು ಔಪಚಾರಿಕ ಮಾತ್ರವಲ್ಲದೇ, ಅನೌಪಚಾರಿಕ ಶಿಕ್ಷಣ, ಮೌಲ್ಯಗಳು ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಎಲ್ಲ ರೀತಿಯ ಶಿಕ್ಷಣ ನೀಡುತ್ತಿದ್ದೀರಿ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ ಅವರು ಪ್ರಸ್ತುತ ಚಿಕ್ಕ ವಯಸ್ಸಿಗೇ ಆಡುವ ಮಕ್ಕಳನ್ನು ಪ್ರೀ ಸ್ಕೂಲ್ ಗೆ ಸೇರಿಸಲಾಗುತ್ತಿದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಹೆಚ್ಚಿನ ಒತ್ತಡ ನೀಡಲಾಗುತ್ತಿದ್ದು, ಹೀಗೆ ಮಾಡಬಾರದು ಎಂದರು.
ಮಕ್ಕಳಿಗೆ ಓದುವ ಅಭ್ಯಾಸ ಬೆಳೆಸಲೇ ಬೇಕು ಎಂದ ಅವರು ನನ್ನ ಜೀವನದಲ್ಲಿ ಅತಿ ಹೆಚ್ಚಿನ ಪ್ರಭಾವ ಬೀರಿರುವುದು ಶಿಕ್ಷಕರು. ನನಗೆ ಇಂದು ಅತ್ಯಂತ ಹೆಮ್ಮೆಯ ದಿನವಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಶಿಕ್ಷಣ ಇಲಾಖೆಯು ಬಹುದೊಡ್ಡ ಸಂಖ್ಯೆಯ ಕುಟುಂಬ ಹೊಂದಿದೆ. ೩೧ ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಕೆಲಸ ಮಾಡುತ್ತಿದ್ದಾರೆ. ಅನೇಕ ಜವಾಬ್ದಾರಿಗಳಿರುವ ಇಲಾಖೆ ಇದಾಗಿದೆ. ಇಂತಹ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ ನೀಡುವ ಮೂಲಕ ಗೌರವಿಸುತ್ತಾ ಬರಲಾಗಿದೆ. ಅನೇಕ ಶಿಕ್ಷಕರು ಎಲೆ ಮರೆಯ ಕಾಯಿಯಂತೆ ಪ್ರಾಮಾಣಿಕವಾಗಿ, ಕಳಕಳಿಯಿಂದ, ಪ್ರೀತಿಯಿಂದ ಕೆಲಸ ಮಾಡುತ್ತಿದ್ದಾರೆ. ಅರ್ಜಿ ಹಾಕಿ ಪ್ರಶಸ್ತಿ ತೆಗೆದುಕೊಳ್ಳುವುದು ಸೂಕ್ತ ಅಲ್ಲ ಎಂಬ ಚರ್ಚೆ ನಡೆದಿದ್ದು,ಪ್ರಶಸ್ತಿ ನಮ್ಮನ್ನು ಹುಡುಕಿಕೊಂಡು ಬರುವ ಹಾಗೆ ನಾವು ಕೆಲಸ ಮಾಡಬೇಕು.
ಸಾಹಿತ್ಯ, ಸಂಸ್ಕೃತಿ, ತಂತ್ರಜ್ಞಾನ, ರಾಜಕೀಯ, ವಿಜ್ಞಾನ, ಕಲೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಶಿಕ್ಷಕರು ಇದ್ದಾರೆ. ಶಿಕ್ಷಕರಿಗೆ ಹೆಚ್ಚಿನ ಸವಾಲುಗಳೂ ಇವೆ. ಎಲ್ಲ ಸೇರಿ ಎದುರಿಸೋಣ ಎಂದ ಅವರು ಪ್ರಶಸ್ತಿ ಪಡೆದ ಶಿಕ್ಷಕರ ಜವಾಬ್ದಾರಿ, ಹೊಣೆಗಾರಿಕೆ ಹೆಚ್ಚಿದೆ ಎಂದರು.
ಇದೇ ವೇಳೆ ರಾಜ್ಯ ಸರ್ಕಾರಿ ನೌಕರರ ಸೌಲಭ್ಯಗಳು, ಪ್ರಸ್ತಾಪಿತ ಬೇಡಿಕೆಗಳ ಬಗ್ಗೆ ತಿಳಿಸಿದ ಅವರು ಶಿಕ್ಷಕರು/ನೌಕರರು ಕಾಯಕ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಂಡು ಮಾದರಿಯಾಗಿ ಸೇವೆ ಮಾಡಬೇಕೆಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಶಿಕ್ಷಕರ ಕ್ಷಮತೆ ಮತ್ತು ಮೌಲ್ಯ ಮಾಪನಕ್ಕೆ ಸರಿಸಾಟಿಯಿಲ್ಲ.ಶಿಕ್ಷಣ ಇಲಾಖೆ ಕೆಲಸದೊಂದಿಗೆ ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಕೆಲಸಗಳಿಗೆ ಸಹಕರಿಸುತ್ತಾ ಹೆಗಲು ನೀಡುತ್ತಿರುವುದರಿಂದ ಪರಿಣಾಮಕಾರಿ ಕೆಲಸಗಳಾಗುತ್ತಿವೆ. ಎಸ್ ಐ ಆರ್ ಪ್ರಕ್ರಿಯೆ ಯಲ್ಲಿ ತಮ್ಮ ಸಹಕಾರ ಅಮೂಲ್ಯವಾಗಿದೆ ಎಂದರು.
ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ನಾಲ್ಕು ದೆಸೆಗಳಿಂದ ಒಳ್ಳೆಯ, ಕೆಟ್ಟ ವಿಷಯಗಳು ವಿದ್ಯಾರ್ಥಿಗಳಿಗೆ ಸಿಗುತ್ತಿವೆ. ಮುಂದಿನ ದಿನಗಳಲ್ಲಿ ಶಿಕ್ಷಕರ
ಜವಾಬ್ದಾರಿ ಇನ್ನೂ ಹೆಚ್ಚಾಗಲಿದ್ದು ತಾವುಗಳು ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರೆಂಬ ನಂಬಿಕೆ ಇದೆ ಎಂದು ತಿಳಿಸಿದರು.
ಉಪನ್ಯಾಸ…
ಬೆಂಗಳೂರಿನ ಕೇರಿಂಗ್ ವಿತ್ ಕಲರ‍್ಸ್-ಎ ಮಾನಸಿ ಕಿರ್ಲೋಸ್ಕರ್ ವ್ಯವಸ್ಥಾಪಕ ಡಾ. ಡಿ.ಆರ್.ಪ್ರಸನ್ನಕುಮಾರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ
ಶಿಕ್ಷಕರಲ್ಲಿ ಪರಿವರ್ತನಾ ಶಕ್ತಿ ಅತಿ ಮುಖ್ಯವಾಗಿದ್ದು, ಕತ್ತಲೆಯ ಬಯಲಿನಲ್ಲಿ ಅಕ್ಷರದ ಬೆಳೆ ಬಿತ್ತುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನೆಡಗೆ ಶಿಕ್ಷಕರು ಕರೆದೊಯ್ಯಬೇಕು. ಎಲ್ಲ ಗುರುಗಳು ಮಕ್ಕಳನ್ನು ಕತ್ತಲಿನಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ.
ಅಜ್ಞಾನದ ಕತ್ತಲಿನ ಅರಿವಿಲ್ಲದಿದ್ದರೆ ಅದನ್ನು ಹೊಗಲಾಡಿಸುವುದು ಕಷ್ಟ.
ಪ್ರತಿ ಮಗುವಿನ ಎದೆಯಲ್ಲಿರುವ ಕತ್ತಲಿಗೆ ಬೆಳಕನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ.
ಮಕ್ಕಳಲ್ಲಿರುವ ಅಂಧಕಾರ ಕಡಿಮೆಯಾದರೆ ದೇಶ ಉಜ್ವಲವಾಗುತ್ತದೆ.
ಶಿಕ್ಷಕ ನಿಜವಾದ ಗುರುವಾಗುವುದು ಅವರ ಅಂತಃಶಕ್ತಿ ಜಾಗೃತವಾಗಿ, ಉದ್ದೀಪನವಾದಾಗ. ಪ್ರತಿಯೊಬ್ಬ ಗುರು ಗುರುತ್ವವಾಗಬೇಕು. ಶಿಕ್ಷಕನ ಬಲ ಹೆಚ್ಚಾಗಬೇಕಾದರೆ ಓದಬೇಕು. ಬರೆಯಬೇಕು. ಗುರುವಿನೊಳಗೆ ಗುರುತ್ವವಿಲ್ಲದಿದ್ದರೆ ಗುರುವಾಗಲು ಸಾಧ್ಯವಿಲ್ಲ. ಆದ್ದರಿಂದ ಗುರುತ್ವವಾಗುವ ಸತ್ವಗಳನ್ನು ಹೊಂದಬೇಕು. ತಾರ್ಕಿಕಾನುಭವ, ಜ್ಞಾನಾನುಭವ, ಇಂದ್ರಯಾನುಭವ, ಅನುಭಾವ, ಅವರ್ಚನೀಯತೆ, ಉತ್ತರದಾಯಿತ್ವ , ಸಹಭಾಗಿತ್ವ ಇರಬೇಕು. ಹಾಗೂ ದಾರ್ಶನಿಕರ ದಾರಿಯಲ್ಲಿ ನಡೆಯಬೇಕು ಎಂದರು.
ಶಿಕ್ಷಣ ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರ ದಿನಾಚರಣೆಂದು ಜಿಲ್ಲೆಯ
೨೧ ಅತ್ಯುತ್ತಮ ಶಿಕ್ಷಕರು, ೩೧ ವಿಶೇಷ ಉತ್ತಮ ಶಿಕ್ಷಕರು ಹಾಗೂ ೮೪ ಜನ ನಿವೃತ್ತ ಶಿಕ್ಷಕರನ್ನು, ಅಭಿನಂದಿಸಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ನವರು ಸಂದೇಶದ ಮೂಲಕ ಶಿಕ್ಷಕ ದಿನಾಚರಣೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಗ್ಯಾರಂಟಿ ಯೋಜನೆಯ ತಾಲ್ಲೂಕು ಸಮಿತಿ ಅಧ್ಯಕ್ಷ ಹೆಚ್ ಎಂ.ಮಧು,ಜಿ.ಪಂ ಸಿಇಒ ಹೇಮಂತ್ ಎನ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮೋಹನ್, ಡಿಡಿಪಿಯು ಮಂಜುನಾಥ್, ಬಿಇಓ ರಮೇಶ್, ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು, ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.