ಮಂಜುನಾಥ್ ಶೆಟ್ಟಿ…

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ಅರಿವು ಹಾಗೂ ನ್ಯಾಯವನ್ನು ಒದಗಿಸುವ ಸದುದ್ದೇಶದಿಂದ “ನ್ಯಾಯ ನಿಮ್ಮದು ನೆರವು ನಮ್ಮದು” ಎನ್ನುವ ಧ್ಯೇಯ ವಾಕ್ಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನೂನು ಸೇವೆಗಳ ಸಂಸ್ಥೆಗಳು, ಅಂದರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕ ಕಾನೂನು ಸೇವಾ ಸಮಿತಿಯಲ್ಲಿ ಲಭ್ಯವಿರುವ ಎಲ್ಲಾ ಕಾನೂನು ಸೇವೆಗಳ ಬಗ್ಗೆ ಸಮಾಜಕ್ಕೆ ಸರಿಯಾದ ಮಾಹಿತಿಯನ್ನು ತಲುಪಿಸಿ ಸಮಯೋಚಿತವಾಗಿ ನೊಂದವರಿಗೆ ನ್ಯಾಯ ಒದಗಿಸಲು ಅರೆಕಾಲಿಕ ಕಾನೂನು ಸ್ವಯಂಸೇವಕರು ಸೇತುವೆಯಂತೆ ಕಾರ್ಯನಿರ್ವಹಿಸುತ್ತಾರೆ ಎಂದು ಶಿವಮೊಗ್ಗ ಜಿಲ್ಲೆಯ ಗೌರವಾನ್ವಿತ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಪ್ರಭಾರ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಅಭಯ್ ಡಿ ಚೌಗಲಾ ರವರು ತಿಳಿಸಿದರು.

ಅವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರ ನಿರ್ದೇಶನದಂತೆ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೆಂಗಳೂರಿನ ಔಟ್ ಲಾಡ್ ಇಂಡಿಯಾ ರವರ ಸಹಯೋಗದಲ್ಲಿ ಸಿಮ್ಸ್ ನ ಸಭಾ ಭವನದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಹಮ್ಮಿಕೊಳ್ಳಲಾದ ಎರೆಡೂ ದಿನಗಳ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ಅರೆಕಾಲಿಕ ಕಾನೂನು ಸ್ವಯಂಸೇವಕರು ಪೊಲೀಸ್ ಠಾಣೆಗಳಲ್ಲಿ ನಿಯೋಜನೆಗೊಂಡು ನೊಂದ ವ್ಯಕ್ತಿಗಳಿಗೆ ಕಾನೂನು ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಬಹುದಾಗಿದೆ ಅಲ್ಲದೆ ಪೋಕ್ಸೋ ಪ್ರಕರಣಗಳಲ್ಲಿ ನೊಂದ ವ್ಯಕ್ತಿಗೆ ಬೆಂಬಲ ವ್ಯಕ್ತಿಯಾಗಿ ಸೇವೆಯನ್ನು ಸಲ್ಲಿಸಬಹುದಾಗಿದೆ ಮತ್ತು ಸಾಮಾನ್ಯವಾದ ಕಾನೂನುಗಳ ಬಗ್ಗೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಬಗ್ಗೆ ಸಮಾಜದಲ್ಲಿ ಅರಿವಿನ ಮೂಲಕ ಜಾಗೃತಿಯನ್ನು ಮೂಡಿಸುವ ಗುರುತರ ಜವಾಬ್ದಾರಿಯನ್ನು ಪಿ.ಎಲ್.ವಿ.ಗಳು ಹೊಂದಿರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂತೋಷ್ ಎಂ ಎಸ್ ರವರು ಮಾತನಾಡಿ ಇದೇ ವರ್ಷ ನಮ್ಮ ಜಿಲ್ಲೆಯ ಎಲ್ಲಾ ಅರೆಕಾಲಿಕ ಕಾನೂನು ಸ್ವಯಂಸೇವಕರಿಗೆ ನಾಲ್ಕು ದಿನಗಳ ಸುಧೀರ್ಘ ತರಬೇತಿಯನ್ನು ನೀಡಲಾಗಿದ್ದು ಈಗ ಪುನಶ್ಚೇತನ ತರಬೇತಿಯನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಹಾಗೂ ಈ ತರಬೇತಿ ಕಾರ್ಯಗಾರವನ್ನು ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಂಡು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಮ್ಸ್ನ ನಿರ್ದೇಶಕರಾದ ಶ್ರೀ ರಮೇಶ್ ಬಾಬು ಕೆ ರವರು ಹಾಗೂ ಔಟ್ ಲಾಡ್ ಇಂಡಿಯಾ ದಿಂದ ಆಗಮಿಸಿರುವ ತರಬೇತುದಾರರಾದ ಕುಮಾರಿ ತುಷಿತ ಗಾಯತ್ರಿ ಹಾಗೂ ಕುಮಾರಿ ವೈಷ್ಣವಿ ತಿವಾರಿ ರವರು ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 178 ಅರೆಕಾಲಿಕ ಕಾನೂನು ಸ್ವಯಂಸೇವಕರಿಗೆ ಎರಡು ದಿನಗಳ ಕಾಲ ಪುನಶ್ಚೇತನ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ, ಅಭಿಯೋಜನೆ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲರು ಹಾಗೂ ಎಲ್‌ಎಡಿಸಿ ವಕೀಲರ ಮೂಲಕ ಸಂವಾದದ ಜೊತೆಗೆ ತರಬೇತಿಯನ್ನು ಆಯೋಜಿಸಲಾಗಿದೆ.

Leave a Reply

Your email address will not be published. Required fields are marked *