ಮಂಜುನಾಥ್ ಶೆಟ್ಟಿ…
ಪ್ರಜಾಪ್ರಭುತ್ವವೆಂದರೆ ಕೇವಲ ಮತದಾನ ಮಾಡುವ ಅಥವಾ ಸರ್ಕಾರ ರಚಿಸುವ ವ್ಯವಸ್ಥೆಯಲ್ಲ. ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಸ್ವತಂತ್ರವಾಗಿ ಆಲೋಚಿಸುವ ಹಕ್ಕು, ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಹಾಗೂ ಪರಸ್ಪರ ಗೌರವ ಮತ್ತು ಸೌಹಾರ್ದತೆಯಿಂದ ಬದುಕುವ ಅವಕಾಶವನ್ನು ಖಾತರಿಪಡಿಸುವ ಜೀವನ ವಿಧಾನವಾಗಿದೆ. ನಮ್ಮ ಸಂವಿಧಾನವೇ ಈ ಪ್ರಜಾಪ್ರಭುತ್ವದ ಮೂಲ ಆಧಾರ.
ಪ್ರಜಾಪ್ರಭುತ್ವದ ಮೌಲ್ಯಗಳು ಜನರ ಬದುಕಿನಲ್ಲಿ ಬೇರೂರಬೇಕಾದರೆ ಅವುಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಪರಿಚಯಿಸುವುದು ಅತ್ಯಂತ ಅಗತ್ಯ. ಈ ಆಶಯದೊಂದಿಗೆ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರತಿದಿನ ರಾಜ್ಯದ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವನಾಗಿ ನಾನು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿದಂತೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಓದುವ ಕಾರ್ಯಕ್ರಮವನ್ನು ರೂಪಿಸಿ, ಸಚಿವ ಸಂಪುಟದ ಅನುಮೋದನೆ ಪಡೆದು ಅನುಷ್ಠಾನಗೊಳಿಸಿರುವುದು ನನಗೆ ಹೆಮ್ಮೆಯ ಸಂಗತಿ.
2023ರ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯಾದ್ಯಂತ ಈ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಇಂದು ಈ ಕಾರ್ಯಕ್ರಮ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ ಎಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವಾದ ಇಂದು ನಿಮ್ಮೆಲ್ಲರಿಗೂ ತಿಳಿಸಲು ಹೆಮ್ಮೆ ಎನಿಸುತ್ತದೆ.
ಪ್ರತಿದಿನ ಶಾಲಾ-ಕಾಲೇಜುಗಳ ಅಂಗಳದಲ್ಲಿ ಸಂವಿಧಾನದ ಪೀಠಿಕೆ ಮೊಳಗುವುದರ ಮೂಲಕ ನಮ್ಮ ಮಕ್ಕಳ ಮನಸ್ಸಿನಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಗಟ್ಟಿಯಾಗುತ್ತಿವೆ. ಇದು ಕೇವಲ ಪೀಠಿಕೆಯನ್ನು ಓದುವ ಕಾರ್ಯಕ್ರಮವಲ್ಲ; ಸಂವಿಧಾನದ ಆಶಯಗಳನ್ನು ಮುಂದಿನ ಪೀಳಿಗೆಯ ಬದುಕಿನ ಭಾಗವಾಗಿಸುವ ಪ್ರಯತ್ನವಾಗಿದೆ.
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆಶಯಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲಕ ಮಕ್ಕಳಲ್ಲಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ತರಗತಿಗಳಲ್ಲಿ ಮಕ್ಕಳಲ್ಲಿ ಮೂಡುವ ಪ್ರಶ್ನೆಗಳು, ವೈಚಾರಿಕ ಚಿಂತನೆ, ಚರ್ಚೆಗಳು ಹಾಗೂ ಸಾಮಾಜಿಕ ಜಾಗೃತಿಯೇ ನಾಳಿನ ಪ್ರಬುದ್ಧ ಸಮಾಜದ ಬುನಾದಿ. ಶಿಕ್ಷಣವು ಕೇವಲ ಅಂಕಗಳು ಮತ್ತು ಉದ್ಯೋಗಕ್ಕಾಗಿ ಮಾತ್ರವಲ್ಲ; ಉತ್ತಮ ನಾಗರಿಕರನ್ನು ರೂಪಿಸುವ ಶಕ್ತಿಯೂ ಆಗಬೇಕು.
ನಮ್ಮ ಶಾಲಾ ಅಂಗಳಗಳಿಂದಲೇ ಸಂವಿಧಾನ ಬದ್ಧ ಮೌಲ್ಯಗಳನ್ನು ಬಿತ್ತುವ ಮೂಲಕ ಸ್ವತಂತ್ರವಾಗಿ ಚಿಂತಿಸುವ, ಸಮಾನತೆಯನ್ನು ಗೌರವಿಸುವ, ವೈವಿಧ್ಯತೆಯಲ್ಲಿ ಏಕತೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಪೀಳಿಗೆಯನ್ನು ನಿರ್ಮಿಸುವುದು ನಮ್ಮ ಆದ್ಯತೆಯಾಗಿದೆ.
ಈ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ನಮ್ಮ ಸಂವಿಧಾನದ ಆಶಯಗಳನ್ನು ಗೌರವಿಸುವ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ಎಲ್ಲರಿಗೂ ಸಮಾನ ಅವಕಾಶವಿರುವ ಸಮಾಜ ನಿರ್ಮಾಣಕ್ಕೆ ಮತ್ತಷ್ಟು ಬದ್ಧರಾಗೋಣ.
ಸಂವಿಧಾನ ನಮ್ಮ ಹೆಮ್ಮೆ.
ಪ್ರಜಾಪ್ರಭುತ್ವ ನಮ್ಮ ಶಕ್ತಿ.
ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ನಮ್ಮ ದಾರಿ.