ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ನಗರದ ಕೋಟೆ ಭೀಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ತುಂಗಾ ನದಿಯ ಭೀಮನ ಮಡುವಿನಲ್ಲಿ ಗಣಪತಿಯನ್ನ ವಿಸರ್ಜಿಸುವ ಮೂಲಕ ಶಿವಮೊಗ್ಗದ 82ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಸಂಪನ್ನಗೊಂಡಿದೆ.
ಅನಂತ ಚತುರ್ದಶಿಯ ಅಂಗವಾಗಿ ಸೆಪ್ಟೆಂಬರ್ 25ರಂದು ಬೆಳಗ್ಗೆ 11 ಗಂಟೆಗೆ ಕೋಟೆ ಭೀಮೇಶ್ವರ ದೇವಸ್ಥಾನದಿಂದ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಿದರು. ಮಂಗಳವಾದ್ಯಗಳೊಂದಿಗೆ ಆರಂಭಗೊಂಡ ಮೆರವಣಿಗೆಗೆ ಮಾರ್ಗದುದ್ದಕ್ಕೂ ಭಕ್ತರು ಹಾಗೂ ಸಾರ್ವಜನಿಕರು ಸಾಕ್ಷಿಯಾದರು.
ಕೋಟೆ ಭೀಮೇಶ್ವರ ದೇವಸ್ಥಾನದಿಂದ ಹೊರಟ ಗಣಪತಿ ಮೆರವಣಿಗೆ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಎಸ್.ಎನ್. ವೃತ್ತ, ಎಎ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ವೃತ್ತ, ವೀರ ಶಿವಮೂರ್ತಿ ವೃತ್ತ, ಮಹಾವೀರ ವೃತ್ತ, ಡಿವಿಎಸ್ ಸರ್ಕಲ್, ಬಿಹೆಚ್ ರಸ್ತೆ ಮೂಲಕ ಸಾಗಿತು.
ನಂತರ ಕೋಟೆ ಮಾರಿಕಾಂಬ ದೇವಸ್ಥಾನದ ರಸ್ತೆ ಮೂಲಕ ಸಾಗಿದ ರಾಜಬೀದಿ ಉತ್ಸವ ಮತ್ತೆ ಕೋಟೆ ಭೀಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ತುಂಗಾ ನದಿಯ ಭೀಮನ ಮಡುವಿನತ್ತ ತೆರಳಿತು. ಮರುದಿನ ಸೆಪ್ಟೆಂಬರ್ 26ರಂದು ಬೆಳಿಗ್ಗೆ ಸುಮಾರು 5 ಗಂಟೆಗೆ ಗಣಪತಿಯ ಜಲಸ್ಥಂಭನ ನೆರವೇರಿಸುವ ಮೂಲಕ 82ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ಉತ್ಸವಕ್ಕೆ ತೆರೆ ಎಳೆಯಲಾಯಿತು.
ಶಿವಮೊಗ್ಗದ ಸಮಸ್ತ ಜನತೆಯ ಪರವಾಗಿ ಜಿಲ್ಲಾಧಿಕಾರಿ ಡಾ ಪ್ರಭುಲಿಂಗ ಕವಳಿಕಟ್ಟಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಮತ್ತು ಜಿಲ್ಲೆ ಹೊರ ಜಿಲ್ಲೆಯ ಸಮಸ್ತ ಅಧಿಕಾರಿಗಳಿಗೆ ಅಭಿನಂದನೆಗಳು.