ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ಕವಿಯೆಂದರೆ ಜಂಬ ಪಡಲು ಕೊಂಬಿಲ್ಲದವನು, ಇತರರಿಗಿಂತ ತುಸು ಹೆಚ್ಚಾಗಿ ನೋವಿಗೆ ಕರಗುವವನು, ಕಲ್ಲು ಕರಗುವ ಕ್ಷಣವನ್ನು ಕಾಣಬಲ್ಲವನು, ಇರುವೆಯ ಹೆಜ್ಜೆಯ ಸಪ್ಪಳವನ್ನೂ ಆಲಿಸಬಲ್ಲವನು. ಇಂತಹ ಸೂಕ್ಷ್ಮ ಸಂವೇದನೆಯೇ ನಿಜವಾದ ಕವಿಯ ಅಂತರಂಗದ ಶಕ್ತಿ ಎಂದು ಹಿರಿಯ ಸಾಹಿತಿ ಸವಿತಾ ನಾಗಭೂಷಣ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ‘ದಸರಾ ಕಾವ್ಯ ಸಂಭ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

ಕವಿತೆ ಎಂದರೆ ಕೇವಲ ಪದಗಳ ಜೋಡಣೆಯಲ್ಲ. ಅದು ಮನುಷ್ಯನ ಅಂತರಂಗದಲ್ಲಿ ಜೀವ ಸಂಚಾರ ಮಾಡುವ, ಸಮಾಜದ ನೋವಿಗೆ ಮಿಡಿಯುವ ಹಾಗೂ ಮಾನವೀಯತೆಯ ಬೆಳಕನ್ನು ಹರಿಸುವ ಅಭಿವ್ಯಕ್ತಿ. ಕವಿಯ ಮಾತುಗಳಲ್ಲಿ ಜೀವಂತಿಕೆ ಮೂಡಿದಾಗ, ಆ ಕವಿತೆ ಓದುಗನ ವ್ಯಕ್ತಿತ್ವ ಮತ್ತು ಜ್ಞಾನದ ಭಾಗವಾದಾಗ ಮಾತ್ರ ಅದು ನಿಜವಾದ ಕವಿತೆಯಾಗುತ್ತದೆ. ಇಲ್ಲವಾದರೆ ಅದು ಕೇವಲ ಶಬ್ದಗಳ ರಚನೆಯಾಗಿ ಉಳಿಯುತ್ತದೆ.

ದೇವರ ಎದುರು ನಿಂತ ಭಕ್ತನಿಗೆ ದೇವರು ಹೇಗೆ ಆತ್ಮೀಯನೋ, ಹಾಗೆಯೇ ಸಹೃದಯನಿಗೆ ಕವಿಯೂ ಅಷ್ಟೇ ಆತ್ಮೀಯನಾಗಿರುತ್ತಾನೆ. ಯಾವುದೇ ಭಾಷೆಯ ಕವಿಯಾದರೂ ಮನುಷ್ಯತ್ವದ ಪರವಾಗಿ ನಿಂತು, ಇತರರ ಸಂಕಷ್ಟಗಳಿಗೆ ಹೆಗಲು ನೀಡುವ ಮನೋಭಾವ ಹೊಂದಿರಬೇಕು. ಆದರೆ ಇಂದು ಪರಸ್ಪರ ಮಾತನಾಡುವ ಸಂಯಮವನ್ನು ಕಳೆದುಕೊಳ್ಳುತ್ತಿದ್ದೇವೆ. ಪ್ರೀತಿ, ವಿಶ್ವಾಸ ಮತ್ತು ಪರಸ್ಪರ ಗೌರವ ಮರೆಯಾಗುತ್ತಿದ್ದು, ಸಮಾಜ ಪೈಪೋಟಿಯ ಹಿಂದೆ ಓಡುತ್ತಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ಯುದ್ಧವೂ ಇಡೀ ವಿಶ್ವದ ಜನಜೀವನದ ಮೇಲೆ ಪರಿಣಾಮ ಬೀರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಅಸಮಾನತೆ ತುಂಬಿ ತುಳುಕುತ್ತಿರುವ ಇಂದಿನ ಸಂದರ್ಭದಲ್ಲಿ ಸಮಾಜದ ಸ್ಥಿತಿಗತಿಗಳನ್ನು ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಅನಾರೋಗ್ಯದ ಬದುಕು ವೈದ್ಯಕೀಯ ವ್ಯವಸ್ಥೆಯ ಮೇಲಿನ ಅವಲಂಬನೆಯನ್ನು ಹೆಚ್ಚಿಸಿದರೆ, ನೆಮ್ಮದಿಯ ಹುಡುಕಾಟ ಮನುಷ್ಯನನ್ನು ಆಧ್ಯಾತ್ಮಿಕ ನೆಲೆಗಳತ್ತ ಕರೆದೊಯ್ಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಬಳಸುವ ವಸ್ತುಗಳಿಂದ ಹಿಡಿದು ನಮ್ಮ ಜೀವನಶೈಲಿಯವರೆಗೆ ಎಲ್ಲದರ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಸಾಮಾಜಿಕ ಸ್ಥಿತ್ಯಂತರಗಳ ಸಂದರ್ಭದಲ್ಲಿ ಲೇಖಕರ ಜವಾಬ್ದಾರಿಯ ಕುರಿತು ಗಂಭೀರ ವಿಮರ್ಶೆ ನಡೆಯಬೇಕಿದೆ. ಪರಿಸರ ನಾಶಕ್ಕೆ ಕಾರಣವಾಗುವ ಯೋಜನೆಗಳು, ಜೆನ್‌ ಜಿ ಹೋರಾಟಗಳು ಸೇರಿದಂತೆ ಸಮಕಾಲೀನ ಸಾಮಾಜಿಕ ವಿದ್ಯಮಾನಗಳಿಗೆ ಕವಿಗಳು ಹೇಗೆ ಸ್ಪಂದಿಸುತ್ತಾರೆ ಎಂಬುದೇ ಇಂದಿನ ಕವಿಗೋಷ್ಠಿಯ ಆಶಯವಾಗಿದೆ. ಸಾಮಾಜಿಕ ಕಳಕಳಿಯನ್ನು ಅಭಿವ್ಯಕ್ತಿಸುವಾಗ ಬರಹಗಾರರಲ್ಲಿ ಬದ್ಧತೆ ಅತ್ಯಂತ ಮುಖ್ಯ ಎಂದು ಹೇಳಿದರು.


ಸಾಮಾಜಿಕ ಸ್ಥಿತ್ಯಂತರಕ್ಕೆ ಸ್ಪಂದಿಸಿದ ಕವಿ ಮನಸ್ಸು

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 60ಕ್ಕೂ ಹೆಚ್ಚು ಕವಿಗಳ ಕಾವ್ಯಧ್ವನಿಯಲ್ಲಿ ಸಮಕಾಲೀನ ಸಮಾಜದ ತಲ್ಲಣಗಳು, ಮನುಷ್ಯ ಸಂಬಂಧಗಳ ಸೂಕ್ಷ್ಮತೆಗಳು ಹಾಗೂ ಪ್ರಕೃತಿಯ ಸಂಕಟಗಳು ಅನಾವರಣಗೊಂಡವು. ಮನುಷ್ಯತ್ವದ ಹುಡುಕಾಟ, ಹಸಿರಿನ ಉಳಿವಿನ ಕಾಳಜಿ, ಒಡಲಾಳದ ಅಪನಂಬಿಕೆಯ ಗೋಡೆಗಳು, ಕೃಷಿಯಿಂದ ವಿಮುಖರಾಗಿ ಪಟ್ಟಣದತ್ತ ಮುಖ ಮಾಡುತ್ತಿರುವ ಯುವ ಸಮೂಹದ ಬದುಕಿನ ಆಯ್ಕೆಗಳು ಕವಿತೆಗಳ ವಸ್ತುವಾದವು.

ಬಿರುಕು ಬಿಟ್ಟ ಮಣ್ಣಿನ ಮೌನವೇ ವೇದನೆಯ ಕತೆಯಾದಾಗ, ಬರದ ಬೇಗುದಿ ಕವಿತೆಯ ಸಾಲುಗಳಲ್ಲಿ ಕಣ್ಣೀರಾಯಿತು. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಹೇರಲಾಗುತ್ತಿರುವ ಮಾರಕ ಯೋಜನೆಗಳು, ಪರಿಸರದ ನಾಶ ಮತ್ತು ಮನುಷ್ಯನ ಸ್ವಾರ್ಥದ ವಿರುದ್ಧ ಕವಿಗಳ ಅಕ್ಷರಗಳು ಪ್ರತಿಭಟನೆಯ ಧ್ವನಿಯಾದವು.


ಸಾಹಿತಿ ಡಾ. ಸರ್ಫ್ರಾಜ್ ಚಂದ್ರಗುತ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ದೇವೇಂದ್ರಯ್ಯ ಮಾತನಾಡಿದರು. ಪದಾಧಿಕಾರಿಗಳಾದ ಎಂ. ನವೀನ್ ಕುಮಾರ್, ಕೃಷ್ಣಮೂರ್ತಿ ಹಿಳ್ಳೋಡಿ, ಭಾರತಿ ರಾಮಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುಶೀಲಾ ಷಣ್ಮುಗಂ ಪ್ರಾರ್ಥಿಸಿ, ಡಿ. ಗಣೇಶ್ ಸ್ವಾಗತಿಸಿ, ಮಂಜಪ್ಪ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *