ಮಂಜುನಾಥ್ ಶೆಟ್ಟಿ…

ಶಿವಮೊಗ್ಗದ ದಸರಾ ಜಂಬೂಸವಾರಿ ಮೆರವಣಿಗೆ ವೇಳೆ ಸೋಮಣ್ಣ ಆನೆ ದಾರಿ ತಪ್ಪಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಚಾಮುಂಡೇಶ್ವರಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ವಾಪಸ್ ತೆರಳಿದ್ದು, ಈ ವೇಳೆ ಅಂಬಾರಿ ಕೆಳಗೆ ಬಿದ್ದು ಸಂಪೂರ್ಣ ಹಾನಿಯಾಗಿದೆ. ಘಟನೆಯಿಂದಾಗಿ ದಸರಾ ಜಂಬೂಸವಾರಿ ಮೆರವಣಿಗೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು.

ಆನೆ ಏಕಾಏಕಿ ದಿಕ್ಕು ಬದಲಿಸಿ ಸಾಗಿದ ಪರಿಣಾಮ ಸಾರ್ವಜನಿಕರು ಚಲ್ಲಾಪಿಲ್ಲಿಯಾಗಿ ಓಡಿದರು. ಈ ವೇಳೆ ಒಂದು ಕಾರು ಹಾಗೂ ಎರಡು-ಮೂರು ಬೈಕ್‌ಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಎಸ್ಪಿಎಂ ರಸ್ತೆಯ ಪಾಂಡುರಂಗ ವಿಠಲ ದೇವಸ್ಥಾನದ ಬಳಿ ಆನೆ ದಿಗಿಲು ಹತ್ತಿ ಅಂಬಾರಿ ಬೀಳಿಸಿದೆ.
ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು. ಪರಿಸ್ಥಿತಿಯನ್ನು ನಿಯಂತ್ರಿಸಲು ಅರಣ್ಯ ಅಧಿಕಾರಿಗಳು ಸೋಮಣ್ಣ ಆನೆಗೆ ಅರವಳಿಕೆ ಮದ್ದು ನೀಡಿದರು. ಅಲ್ಲದೆ, ಸಾಗರ ಮತ್ತು ಬಹದ್ದೂರ್ ಆನೆಗಳ ನೆರವಿನಿಂದ ಸೋಮಣ್ಣನನ್ನು ಹತೋಟಿಗೆ ತರಲು ಪ್ರಯತ್ನಿಸಲಾಯಿತು. ಕೊನೆಗೂ ಆನೆ ನಿಯಂತ್ರಣಕ್ಕೆ ಬಂದಿದ್ದರಿಂದ ಅರಣ್ಯ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.