ಮಂಜುನಾಥ್ ಶೆಟ್ಟಿ…
ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಮಹಾವೀರ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ರಚಿಸಿ, ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಒತ್ತಾಯಿಸಿದರು.
ನವೆಂಬರ್ 1ರಂದು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆದಿತ್ತು. ಇದರ ಅಂಗವಾಗಿ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಶಿವಮೊಗ್ಗದಲ್ಲೂ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್, ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಉದ್ದೇಶದಿಂದ ಈ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
ಮತದಾನದ ಹಕ್ಕು ಎಲ್ಲರಿಗೂ ಸಮಾನ – ಹೆಚ್‌ಸಿ.ಯೋಗೇಶ್…
ಬ್ರಿಟಿಷರನ್ನು ಸುಮಾರು 200 ವರ್ಷಗಳ ಹೋರಾಟದ ನಂತರ ದೇಶದಿಂದ ಓಡಿಸಿದ ಬಳಿಕ, ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ಸರ್ವರಿಗೂ ಸಮಪಾಲು, ಸಮಬಾಳು ಎಂಬ ಆಶಯದೊಂದಿಗೆ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕಲ್ಪಿಸಲಾಗಿದೆ. ಆದರೆ, 2014ರಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ ಎಂದು ಯೋಗೀಶ್ ಹೇಳಿದರು.
ವೋಟ್ ಬಚಾವೋ, ದೇಶ ಬಚಾವೋ’ ಎಂಬುದು ನಮ್ಮ ಹೋರಾಟದ ಮುಖ್ಯ ಆಶಯವಾಗಿದೆ. ಇಲ್ಲಿ ಮಹಿಳೆಯರು, ಪುರುಷರು, ಶ್ರೀಮಂತರು, ಬಡವರು, ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಸೇರಿದಂತೆ ವಿವಿಧ ಜಾತಿ ಮತ್ತು ಧರ್ಮದ ಜನರು ಇದ್ದಾರೆ. ಆದರೆ, ಸಂವಿಧಾನದ ಪ್ರಕಾರ ಎಲ್ಲರಿಗೂ ಇರುವ ಮತದಾನದ ಹಕ್ಕು ಒಂದೇ. ಯಾರಿಗೂ ಎರಡು ಮತಗಳ ಹಕ್ಕು ಇಲ್ಲ. ಎಲ್ಲರ ಮತಕ್ಕೂ ಸಮಾನ ಮೌಲ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.