ಶಿವಮೊಗ್ಗ: ರಾಜ್ಯದಲ್ಲೇ ಶಿವಮೊಗ್ಗ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಕಡಿಮೆ ಅವಧಿಯಲ್ಲಿ ಸದಸ್ಯರಿಗೆ ನಿವೇಶನ ನೀಡುವ ಕೆಲಸ ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಮಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.

ಅವರು ಭಾನುವಾರ ಶಿವಮೊಗ್ಗದ ಸರ್ಕಾರಿ ನೌಕರರ ಸಭಾಂಗಣದಲ್ಲಿ ನಡೆದ ಶಿವಮೊಗ್ಗ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಶಿವಮೊಗ್ಗ-ಇವೆರಡು ಸಂಘಗಳ ಸರ್ವ ಸದಸ್ಯರ ಮಹಾಸಭೆ ಮತ್ತು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಏನೇ ಕುಂದು ಕೊರತೆಗಳಿದ್ದರೂ, ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಭಾಗವಹಿಸಿ ಅಭಿಪ್ರಾಯ ಮಂಡಿಸಬೇಕು. ಸಂಘದ ಬೆಳವಣಿಗೆ ಮತ್ತು ಚಟುವಟಿಕೆ, ಹೊಸ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಶಿವಮೊಗ್ಗ ಸಂಘ 160 ಎಕರೆ ಜಾಗವನ್ನು 300 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಒಂದೇ ಒಂದು ದೂರು ಇಲ್ಲದೇ ಅತ್ಯಂತ ಪಾರದರ್ಶಕವಾಗಿ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರವಾಗಿ ಸದಸ್ಯರಿಗೆ ನಿವೇಶನ ವಿತರಣೆ ಮಾಡಲಾಗಿದೆ. ಅನೇಕ ಕಡೆ ಇದು ಕನಸಾಗಿಯೇ ಉಳಿದಿದೆ. ಸದಸ್ಯರಿಂದ ಹಣ ಸಂಗ್ರಹಿಸಿ ನಿವೇಶನ ಕೊಡಲು ಪರದಾಡುವ ಪರಿಸ್ಥಿತಿ ಇದೆ. ಆದರೆ, ಜಿಲ್ಲೆಯಲ್ಲಿ ಈ ಕಾರ್ಯ ಯಶಸ್ವಿಯಾಗಿದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ನಿವೇಶನ ನೀಡಲಾಗಿದ್ದು, 10 ಪಟ್ಟು ಹೆಚ್ಚಿನ ದರದಲ್ಲಿ ಅದನ್ನು ಮಾರಿದವರೂ ಇದ್ದಾರೆ. ಬೇಡಿಕೆ ತುಂಬಾ ಇದೆ. ಕಡಿಮೆ ದರದಲ್ಲಿ ಎಲ್ಲಾ ಸದಸ್ಯರಿಗೂ ನಿವೇಶನ ನೀಡಬೇಕೆಂಬ ಉತ್ಸಾಹ ನಮಗೂ ಇದೆ. ನಿವೇಶನ ಸಿಕ್ಕವರು ಅದನ್ನು ಮಾರಬೇಡಿ ಎಂದರು.

ಉತ್ಸಾಹದಿಂದ ಕಾರ್ಯನಿರ್ವಹಿಸುವಾಗ ಕೆಲವು ಟೀಕೆ ಮಾಡಿದಾಗ ಯೋಜೆನ ಕೈಬಿಡೋಣ ಎಂಬ ಮನಸಾಗುತ್ತದೆ. ಏನೇ ಮಾಹಿತಿ ಬೇಕಾದರೂ ಸದಸ್ಯರು ಪಡೆದುಕೊಳ್ಳಬಹುದು. ಪತ್ತಿನ ಸಹಕಾರ ಸಂಘ ಕೂಡ 8 -10 ಕೋಟಿ ರೂ. ಲಾಭದಲ್ಲಿದೆ. ಒಳ್ಳೆಯ ರೀತಿಯಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ಇನ್ನೊಬ್ಬರಿಗೆ ಮೋಸ ಮಾಡಿ ಲಾಭ ಮಾಡುವ ಅನಿವಾರ್ಯತೆ ಸಂಘಕ್ಕೆ ಇಲ್ಲ ಎಂದರು.  ಸಭೆಯಲ್ಲಿ ಕೇಂದ್ರ ಸಂಘದ ಹಿರಿಯ ಉಪಾಧ್ಯಕ್ಷ ಎಂ.ವಿ. ರುದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. .ಸೌಹಾರ್ದ ಸಹಕಾರಿಯ ಅಧ್ಯಕ್ಷ ಆರ್.ಮೋಹನ್, ಕುಮಾರ್,ಗೃಹ ನಿರ್ಮಾಣ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಕೆ. ವೇಣುಗೋಪಾಲ್, ಗೌರವ ಕಾರ್ಯದರ್ಶಿ ಆರ್. ಪಾಪಣ್ಣ, ಸಹಕಾರಿಯ ಉಪಾಧ್ಯಕ್ಷ ಎಸ್.ಹೆಚ್. ಸುರೇಶ್, ಗೌರವ ಕಾರ್ಯದರ್ಶಿ ಎನ್.ಎಂ. ರಂಗನಾಥ್ ಹಾಗೂ ಉಭಯ ಸಂಘಗಳ ನಿರ್ದೇಶಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…