ಶಿವಮೊಗ್ಗ : ಭಾರತದ ಸಾರ್ವಭೌಮತ್ವ ಎತ್ತಿ ಹಿಡಿಯುವ ಜವಾಬ್ದಾರಿ ಭಾರತೀಯರಾದ ನಮ್ಮೇಲ್ಲರ ಮೇಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ ಅಭಿಪ್ರಾಯಪಟ್ಟರು.
ಇಂದು ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಏರ್ಪಡಿಸಿದ್ದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಅಖಂಡ ಭಾರತದ ಮೂಲ ರೂವಾರಿ ಸಾಮ್ರಾಟ್ ಅಶೋಕ. ತನ್ನ ತಂದೆಯ ಆಶಯದಂತೆ ಇಡೀ ಅಖಂಡ ಭಾರತವನ್ನು ಯುದ್ಧ ರಹಿತವಾಗಿ ಶಾಂತಿಯಿಂದ ಗೆದ್ದ ಅಪ್ರತಿಮ ವೀರ. ಹೀಗೆ ಭಾರತ ಶಾಂತಿ, ಸೌಹಾರ್ದ, ಸಾರ್ವಭೌಮತ್ವದ ನೆಲೆವೀಡಾಗಿದೆ. ಕೋವಿಡ್ ಸವಾಲಿನ ಸಂದರ್ಭದಲ್ಲಿ ದೇಶದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಬಹುದು ಎಂಬ ಆತಂಕದ ನಡುವೆ ಅಭಿವೃದ್ಧಿಶೀಲ ರಾಷ್ಟ್ರದ ನಿರ್ಮಾಣಕ್ಕೆ ಹೊಸ ಪಣಗಳನ್ನು ತೊಡಲಾಗುತ್ತಿದ್ದೆ. ಅಂತಹ ಕಾರ್ಯಚಟುವಟಿಕೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ಜಾರಿಗೆ ಶ್ರಮಿಸಿದ ಎಲ್ಲರೂ ಸ್ಪೂರ್ತಿ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರಿಂದ ನಿರ್ಮಾಣಗೊಂಡ ಎನ್ಇಎಸ್ ದೊಡ್ಡ ಹೆಮ್ಮರವಾಗಿ ರೂಪಗೊಳ್ಳಲು ಪ್ರಾಮಾಣಿಕತೆ, ನಿಷ್ಕಲ್ಮಶ ಸೇವಾ ಮನೋಭಾವವೇ ಕಾರಣ. ಇಂತಹ ಸಂಸ್ಥೆಯಲ್ಲಿ ಸೇವೆ ಮಾಡಲು ಸಿಕ್ಕ ಅವಕಾಶ ಅವಿಸ್ಮರಣೀಯ. ಹೀಗೆ ಸಾಮಾಜಿಕವಾಗಿ ಕಟ್ಟುವ ಕಾರ್ಯವನ್ನು ನಮ್ಮ ಯುವ ಸಮೂಹ ನಿರಂತರವಾಗಿ ಮುನ್ನಡೆಸಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ , ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ , ನಿರ್ದೇಶಕರಾದ ಎನ್.ಟಿ.ನಾರಾಯಣರಾವ್, ಕುಲಸಚಿವರಾದ ಪ್ರೋ. ಹೂವಯ್ಯಗೌಡ, ಅಜೀವ ಸದಸ್ಯರಾದ ಎನ್.ಎನ್.ಆನಂದ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.